ಮಡಿಕೇರಿ, ಸೆ. 15: ಮಡಿಕೇರಿಯಿಂದ ಚೆಟ್ಟಳ್ಳಿ ಸಂಪರ್ಕಿಸುವ ಕಡಿದಾದ, ನಿಸರ್ಗದ ನಡುವೆ ಹಾದುಹೋಗುವ, ಕೊಡಗಿನಲ್ಲಿಯೇ ವಿಶಿಷ್ಟ ಪ್ರಯಾಣಕ್ಕೆ ಹೆಸರಾದ ರಸ್ತೆ ಇದೀಗ ಕೊನೇ ದಿನಗಳನ್ನು ಎಣಿಸುತ್ತಿದೆ. ರಸ್ತೆಯೊಂದು ಸಂಪೂರ್ಣ ಕಣ್ಮರೆಯಾಗಬಹುದಾದ ಸಾಧ್ಯ ಸಾಧ್ಯತೆಗಳು ಇಲ್ಲಿ ಗೋಚರಿಸುತ್ತಿದೆ. ಕತ್ತಲೆಕಾಡು ತಿರುವಿನಿಂದ ಚೆಟ್ಟಳ್ಳಿಯವರೆಗಿನ 7 ಕಿ.ಮೀ. ಅಂತರದಲ್ಲಿ ಹಲವಾರು ಕಡೆ ಕಳೆದ ಮೂರು ವರ್ಷಗಳಿಂದ ಸತತ ಭೂಕುಸಿತದ ಪರಿಣಾಮ ಇದೀಗ ಈ ರಸ್ತೆ ಭಾರೀ ಹಾನಿಗೊಳಗಾಗಿದ್ದು ದುರಸ್ತಿಪಡಿಸಲು ಕಷ್ಟಸಾಧ್ಯವಾದ ರೀತಿಯಲ್ಲಿದೆ. ಕತ್ತಲೆಕಾಡು ತಿರುವಿನಿಂದ ಚೆಟ್ಟಳ್ಳಿ ಗ್ರಾಮಕ್ಕೆ ತೆರಳುವುದೆಂದರೆ ಅದೊಂದು ಸುಂದರ ಅನುಭವ.. ಬಂಡೆಕಲ್ಲುಗಳ ರಾಶಿಯನ್ನೇ ಹೊಂದಿರುವ ಕತ್ತಲೆಕಾಡು ಬೆಟ್ಟಸಾಲುಗಳ ತಪ್ಪಲಲ್ಲಿನ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದರೆ ಅಲ್ಲಲ್ಲಿ ಪುಟ್ಟ ಜಲಧಾರೆಗಳು.. ಇಲ್ಲಿ ನೀರು ಕುಡಿಯಲು ಬಂದಿರುವ ಮಂಗಗಳು, ಪಕ್ಷಿಗಳು ಕಾಣಸಿಗುತ್ತವೆ. ರಸ್ತೆಯ ಒಂದು ಬದಿ ಬೆಟ್ಟವಿದ್ದರೆ ಮತ್ತೊಂದು ಬದಿಯಲ್ಲಿ ಕಣ್ಣುಹಾಯಿಸಿದಷ್ಟೂ ದೂರ ಹಸಿರು ನಿಸರ್ಗ ಸಂಪತ್ತು. ಗದ್ದೆಬಯಲು, ಕಾಡು ಕಂಡುಬರುವುದು ಈ ರಸ್ತೆ ಪ್ರಯಾಣದ ವಿಶೇಷತೆಯೂ ಹೌದು. .
ಸ್ವಲ್ಪ ವೇಗವಾಗಿ ವಾಹನ ಓಡಿಸುತ್ತಿರುವಂತೆಯೇ ದಿಢೀರನೆ ಬರುವ ತಿರುವುಗಳು ಚಾಲಕನ ವೃತ್ತಿ ನೈಪುಣ್ಯತೆಗೆ ಸವಾಲಾಗಿದೆ. ಹೊಸದಾಗಿ ಡ್ರೈವಿಂಗ್ ಕಲಿಯುವವರು ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆಯಲ್ಲಿ 10 ಸಲ ಸಾಗಿದರೆ ಸಾಕು.. ದೇಶದ ಎಲ್ಲಿ ಬೇಕಾದರೂ ವಾಹನ ಚಾಲನೆ ಮಾಡಬಹುದು. ಅಷ್ಟು ಸವಾಲಿನ ರಸ್ತೆಯಿದು.
ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಪ್ರತೀ ರಸ್ತೆಯೂ ಏರುತಗ್ಗಿನಿಂದ ಕೂಡಿದೆ. ಆದರೆ ಚೆಟ್ಟಳ್ಳಿ ರಸ್ತೆ ಮಾರ್ಗ ಸಮತಟ್ಟಾದ ರಸ್ತೆಯ ಮೂಲಕ ಸಂಪರ್ಕ ಕಲ್ಪಿಸುವುದು ವಿಶೇಷ. ಹಾಗೇ ಬೆಟ್ಟದ ಮಧ್ಯೆಯೇ ಹಾದುಹೋಗುವ ಈ ರಸ್ತೆ ಮಾರ್ಗದ 14 ಕಿ.ಮೀ. ದೂರದಲ್ಲಿ ಎಲ್ಲಿಯೂ ಏರು ತಗ್ಗು ಇಲ್ಲ. ಸಮತಟ್ಟಾದ ರಸ್ತೆ ಇದರ ಮತ್ತೊಂದು ವಿಶೇಷ.
ಹಿಂದಿನ ಕಾಲದಲ್ಲಿ ರಾಜರು ಸಾರೋಟಿನಲ್ಲಿ ಸಾಗುವಾಗ ಕುದುರೆಗಳು ಹಾಯಾಗಿ ಹೆಜ್ಜೆಹಾಕಲು ಬೆಟ್ಟದ ಮಧ್ಯೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದರಂತೆ. ಹೀಗಾಗಿ ರಾಜರ ಕಾಲದಲ್ಲಿನ ಕುದುರೆ ಸಾಗುವ ರಸ್ತೆ ಈವರೆಗೂ ಗಟ್ಟಿಮುಟ್ಟಾಗಿ ಉಳಿದುಕೊಂಡಿತ್ತು.
ಇದೇ ರಸ್ತೆಯಲ್ಲಿ ಹೆಸರಾಂತ ಅಭ್ಯಾಲ ಫಾಲ್ಸ್ ಕಂಗೊಳಿಸುತ್ತದೆ. ಬೆಟ್ಟದ ಮೇಲಿಂದÀ ಬೋರ್ಗರೆದು ಧುಮ್ಮಿಕ್ಕುವ ಜಲಧಾರೆ ಮಳೆಗಾಲದಲ್ಲಿ ರಸ್ತೆ ಮೇಲೇ ಬೀಳುತ್ತಿರುತ್ತದೆ. ಈ ಸುಂದರ ಜಲಪಾತ ರಸ್ತೆ ಬದಿಯೇ ಇರುವುದರಿಂದ ಪ್ರಯಾಣಿಕರು ಇಲ್ಲಿ ಕೆಲಕಾಲ ವಿರಮಿಸಿ ಫಾಲ್ಸ್ ಫೆÇೀಟೋ ತೆಗೆಯುವುದೂ ಇದೆ. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಸ್ಥಳೀಯರಿಗೆ ವಿಶೇಷವಲ್ಲದೇ ಹೋದರೂ ಹೊರಜಿಲ್ಲೆಗಳ ಪ್ರವಾಸಿಗರಿಗಂತೂ ಅಭ್ಯಾಲ ಫಾಲ್ಸ್ ಅತ್ಯಂತ ರಮಣೀಯ ತಾಣವಾಗಿ ಇತ್ತೀಚಿನ ವರ್ಷಗಳಲ್ಲಿ ಪರಿಣಮಿಸಿದೆ. ರಸ್ತೆಯ ಅಲ್ಲಲ್ಲಿ ದೇವರ ಪುಟ್ಟದಾದ ಗುಡಿಗಳಿದ್ದು ದಾರಿಹೋಕರು ನಮಸ್ಕರಿಸಿ ಮುಂದೆ ಸಾಗುತ್ತಾರೆ. ಇಂಥ ಗುಡಿಗಳೂ ಈಗ ಭೂಕುಸಿತಕ್ಕೆ ಸಿಲುಕುವ ಆತಂಕದಲ್ಲಿದೆ.
ಈಗ ಏನಾಗಿದೆ?
ಚೆಟ್ಟಳ್ಳಿಯಿಂದ 2.25 ಕಿ.ಮೀ. ದೂರದವರೆಗೆ ಇತ್ತೀಚೆಗಷ್ಟೇ 5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದು ಹಲವಾರು ವರ್ಷಗಳ ಬೇಡಿಕೆಯೂ ಆಗಿತ್ತು. ಕಾಂಕ್ರೀಟ್ ರಸ್ತೆ (ಮೊದಲ ಪುಟದಿಂದ) ನಿರ್ಮಾಣವಾಗಿರುವ ಬಗ್ಗೆ ಚೆಟ್ಟಳ್ಳಿ ಗ್ರಾಮಸ್ಥರಲ್ಲಿ ಸಮಾಧಾನವಿದೆ. ಆದರೆ ಸುಸಜ್ಜಿತ ರಸ್ತೆ ನಿರ್ಮಾಣವಾಗಿದ್ದರೂ ಬೆಟ್ಟ ಕುಸಿದು ಭೂಕುಸಿತದಿಂದಾಗಿ ಕೋಟಿಗಟ್ಟಲೆ ವೆಚ್ಚದ ರಸ್ತೆಯೇ ಮುಂದಿನ ವರ್ಷಗಳಲ್ಲಿ ಹಾನಿಗೊಳಗಾಗುವ ಭಯ ಸ್ಥಳೀಯರಲ್ಲಿದೆ.
ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆ ಮಾರ್ಗವೇ ಅಪಾಯದ ಅಂಚಿನಲ್ಲಿದೆ. ಕೊಡಗಿನಲ್ಲಿ ರಸ್ತೆಯೊಂದು ಪ್ರಪಾತಕ್ಕೆ ಕುಸಿದುಬೀಳುವ ಸಾಧ್ಯತೆಗೆ ಈ ಮಾರ್ಗ ಕಾರಣವಾಗುತ್ತಿದೆ.
2018ರಲ್ಲಿ ಮಹಾಮಳೆಯಿಂದಾಗಿ ಮೊದಲ ಬಾರಿಗೆ ಈ ಮಾರ್ಗದಲ್ಲಿ ಕಂಡುಕೇಳರಿಯದಷ್ಟು ಭೂಕುಸಿತ ಉಂಟಾಯಿತು. ಕತ್ತಲೆಕಾಡು ಬೆಟ್ಟಶ್ರೇಣಿಯಲ್ಲಿ ಬಿರುಕು ಕಾಣಿಸಿಕೊಂಡು ರಸ್ತೆ ಮೇಲೇ ಭೂಕುಸಿತ ಉಂಟಾಯಿತು. ರಸ್ತೆ ಬದಿ ಪ್ರಪಾತ ಪಾಲಾಗಿತ್ತು. ಕಳೆದ ವರ್ಷವೂ ಕೊಂಚ ಸಮಸ್ಯೆಯಾಗಿತ್ತು.
ಆದರೆ ಈ ವರ್ಷ ತೀರಾ ಹದಗೆಟ್ಟ ಸ್ಥಿತಿಗೆ ಕತ್ತಲೆಕಾಡು - ಚೆಟ್ಟಳ್ಳಿ ಮಾರ್ಗ ತಲುಪಿದೆ. ಪ್ರಾರಂಭದಲ್ಲಿಯೇ ಕುಸಿತವಾಗಿರುವ ಬೆಟ್ಟ ಮುಂದೆ ಹಲವಾರು ಕಡೆ ಭೂಕುಸಿತಕ್ಕೆ ಕಾರಣವಾಗಿದೆ. ಮಣ್ಣಿನ ರಾಶಿಯನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲಾಗಿಲ್ಲ.
ರಸ್ತೆ ಕುಸಿತ ಕಂಡ ಜಾಗದಲ್ಲಿ ಮರಳು ರಾಶಿ ಪೇರಿಸಿಡಲಾಗಿದ್ದು ತಾತ್ಕಾಲಿಕವಾಗಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಂದಿಗೂ ವಾಹನ ಚಾಲಕರು ಯಾವಾಗ ಭೂಕುಸಿತ ಉಂಟಾದೀತು. ರಸ್ತೆ ಬದಿಯ ಮಣ್ಣು ಜರಿದುಹೋದೀತೋ ಎಂಬ ಭಯದಲ್ಲಿಯೇ ಸಾಗಬೇಕಾಗಿದೆ.
ಒಂದು ಕಡೆಯಂತೂ ಇನ್ನೇನು ಡಾಮರು ರಸ್ತೆಯೇ ಮೇಲೆದ್ದು ಬಂದು ಇಡೀ ರಸ್ತೆಯೇ ಪ್ರಪಾತಕ್ಕೆ ಬೀಳಲು ಕ್ಷಣಗಣನೆಯಲ್ಲಿ ಇರುವಂತಿದೆ. ಈ ಸ್ಥಳದಲ್ಲಿನ ಅಪಾಯದ ಸ್ಥಿತಿಯೇ ಮುಂದಿನ ದಿನಗಳಲ್ಲಿ ಕತ್ತಲೆಕಾಡು - ಚೆಟ್ಟಳ್ಳಿ ರಸ್ತೆಯೇ ಇನ್ನಿಲ್ಲವಾಗುವ ಎಲ್ಲಾ ಸಾಧ್ಯತೆಗೂ ಕಾರಣವಾಗಲಿದೆ.
ಮಾರ್ಗದ ಎರಡು ತಿರುವುಗಳಲ್ಲಿ ರಸ್ತೆ ಮೇಲೇ ಬೆಟ್ಟದಿಂದ ಬೀಳುತ್ತಿರುವ ಜಲ ಹರಿಯುತ್ತಿದೆ. ಅಲ್ಲಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಬೆಟ್ಟದ ಮೇಲಿನಿಂದ ನೀರು ರಸ್ತೆಗೆ ಬಿದ್ದು ರಸ್ತೆ ಮೇಲೆ ತೊರೆ ರೀತಿಯಲ್ಲಿ ಹರಿಯುತ್ತಿದೆ. ಹೀಗಾಗಿ ಇಂತಲ್ಲಿ ರಸ್ತೆಯೂ ಪ್ರಪಾತಕ್ಕೆ ಕುಸಿದು ಬೀಳಲು ಹೆಚ್ಚು ದಿನ ಬೇಕಾಗಿಲ್ಲ.
ಬೆಟ್ಟದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಟ್ಟಿರುವುದು ಕೂಡ ಈ ರಸ್ತೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗೇ ಯಾವುದೇ ಮುಂಜಾಗ್ರತೆ ಕೈಗೊಳ್ಳದೇ ರಸ್ತೆ ಬದಿ ಕೇಬಲ್ಗಳ ಅಳವಡಿಕೆಗಾಗಿ ಬೇಕುಬೇಕಾದಾಗಲೆಲ್ಲಾ ರಸ್ತೆ ಅಗೆದಿರುವುದೂ ಕೂಡ ಈ ರಸ್ತೆ ಸರ್ವನಾಶವಾಗಲು ಮತ್ತೊಂದು ಕಾರಣ.
ಬೆಟ್ಟಗಳಿಂದ ಮಣ್ಣು, ಬಂಡೆಗಳ ರಾಶಿಯೇ ಸಾಲುಸಾಲಾಗಿ ಈ ರಸ್ತೆ ಮೇಲೆ ಬಿದ್ದಿದ್ದು ಬಹುತೇಕ ತೆರವುಗೊಳಿಸಲಾಗಿದೆಯಾದರೂ ಈಗಾಗಲೇ ಕದಲಿ ಹೋಗಿರುವ ಬೆಟ್ಟಗಳು ಮತ್ತೆ ಯಾವಾಗ ರಸ್ತೆ ಮೇಲೇ ಬೀಳಲಿದೆಯೋ ಎಂಬ ಆತಂಕ ಸ್ಥಳೀಯರಲ್ಲಿದೆ.
ಸದ್ಯಕ್ಕೆ ಒಂದೆರಡು ಬಸ್ಗಳು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಕುಳಿತ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದೆ ಹಾಗೂ ಹೀಗೂ ದಾರಿ ಮಾಡಿಕೊಂಡು ಚಾಲಕರು ಬಸ್ ಸಂಚರಿಸುತ್ತಿದ್ದಾರೆ. ಆದರೆ ಮಳೆ ಮತ್ತೂ ಮುಂದುವರೆದು ಮತ್ತೆ ಭೂಕುಸಿತ ಸಂಭವಿಸಿದ್ದೇ ಆದಲ್ಲಿ ಖಂಡಿತಾ ಈ ರಸ್ತೆ ಹಲವಾರು ತಿಂಗಳವರೆಗೆ ಸಂಪೂರ್ಣ ಮುಚ್ಚಿಹೋಗಲಿದೆ.
ಕೊಡಗಿನಲ್ಲಿ ಕತ್ತಲೆಕಾಡು - ಚೆಟ್ಟಳ್ಳಿ ರಸ್ತೆ ಮಾರ್ಗಕ್ಕೆ ಎದುರಾಗಿರುವ ಅಪಾಯಕಾರಿ ಪರಿಸ್ಥಿತಿ ಬೇರಾವುದೇ ರಸ್ತೆಗೂ ಬಂದಿಲ್ಲ. ಹೀಗಾಗಿ ಸರ್ಕಾರ ಈ ರಸ್ತೆಯ ಸಂಕಷ್ಟದತ್ತ ಗಂಭೀರ ಗಮನ ಹರಿಸಬೇಕಾಗಿದೆ.
ಮಡಿಕೇರಿಗೆ ಸಿದ್ದಾಪುರ, ಚೆಟ್ಟಳ್ಳಿ ವ್ಯಾಪ್ತಿಯ ನೂರಾರು ಜನ ದಿನಂಪ್ರತಿ ಬರಲು ಸೂಕ್ತ ಮಾರ್ಗವಾಗಿರುವ ಈ ರಸ್ತೆಯೇನಾದರೂ ಶಾಶ್ವತವಾಗಿ ಬಂದ್ ಆದಲ್ಲಿ ಚೆಟ್ಟಳ್ಳಿ ಎಂಬ ಗ್ರಾಮವೇ ಆರ್ಥಿಕತೆಯ ಸಂಕಷ್ಟದಲ್ಲಿ ಸಿಲುಕಲಿದೆ. ಸಾವಿರಾರು ಜನ ಸಂಪರ್ಕ ಕಡಿದುಕೊಳ್ಳಲಿದ್ದಾರೆ.
ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡ, ಜಿಲ್ಲಾ ಪಂಚಾಯತ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕತ್ತಲೆಕಾಡು-ಚೆಟ್ಟಳ್ಳಿ ರಸ್ತೆಯಲ್ಲಿ ಸಾಗಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಈ ರಸ್ತೆಯನ್ನು ಉಳಿಸಿಕೊಳ್ಳಲೇಬೇಕಾಗಿದೆ.
ಮುಂದಿನ ದಿನಗಳಲ್ಲಿ ಈ ಪಾರಂಪರಿಕ ರಸ್ತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕಾರ್ಯಯೋಜನೆ ರೂಪಿಸುವುದರೊಂದಿಗೆ ರಸ್ತೆ ಮಾರ್ಗದ ಬೆಟ್ಟಗಳಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಬದಿಯಲ್ಲಿ ಕೇಬಲ್ ಅಳವಡಿಕೆಗೆ ನಿಯಂತ್ರಣ ಹೇರಲೇಬೇಕಾಗಿದೆ. ಕೊಡಗಿನ ಪ್ರಾಚೀನ ರಸ್ತೆಯ ಅಹವಾಲಿಗೆ ಸಂಬಂಧಿಸಿದವರು ಇನ್ನಾದರೂ ಸ್ಪಂದಿಸುವ ಮನಸ್ಸು ಮಾಡಬೇಕು.