ವೈದ್ಯರ ಮುಷ್ಕರ ಆರಂಭ
ಬೆಂಗಳೂರು, ಸೆ. 15: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಆರೋಗ್ಯ ಇಲಾಖೆ ವೈದ್ಯರು ಇಂದಿನಿಂದ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಸೇರಿದಂತೆ ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ಅಂಕಿ-ಅಂಶ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಅಸಹಕಾರ ಮುಷ್ಕರ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ. ಅಲ್ಲದೆ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ತಾ. 20 ರವರೆಗೆ ಕಾಲಾವಕಾಶ ನೀಡಿದ್ದು, ಸೂಕ್ತ ಭರವಸೆ ದೊರೆಯದಿದ್ದರೆ ತಾ. 21 ರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿಗಳ ಸೇವೆ (ಒಪಿಡಿ) ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಅಡಿಯಲ್ಲಿ 4,968 ವೈದ್ಯರ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್‍ಎಸ್) ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕೊರೊನಾ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯ 48 ಮಂದಿ ವೈದ್ಯರ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಬಿಬಿಎಂಪಿ ಜೊತೆ ವಿಲೀನ ಮಾಡಿರುವುದನ್ನು ಹಿಂಪಡೆಯಬೇಕು. ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.
ಸಾಲ ಪಡೆಯಲು ಮುಂದಾದ ಸರ್ಕಾರ
ಬೆಂಗಳೂರು, ಸೆ. 15: ಕೋವಿಡ್‍ನಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ನಿರೀಕ್ಷಿತ ಮಟ್ಟದಲ್ಲಿ ಬಾರದ ಹಿನ್ನೆಲೆ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ತಂದು ವಿವಿಧ ಮೂಲಗಳಿಂದ 33 ಸಾವಿರ ಕೋಟಿ ರೂಪಾಯಿ ಸಾಲ ಪಡೆಯುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಆರ್ಥಿಕ ವಿತ್ತೀಯ ಕೊರತೆಯ ಇತಿಮಿತಿಯಲ್ಲಿಯೇ ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ಕೋವಿಡ್‍ನಿಂದಾಗಿ ರಾಜ್ಯ ಆರ್ಥಿಕ ಪರಿಸ್ಥಿತಿಗೆ ಪೆಟ್ಟು ಬಿದ್ದಿದ್ದು, ಅದನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಕೋವಿಡ್ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಕಲ್ಪಿಸುವ ಉದ್ದೇಶದಿಂದ 33 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಹೊಸ ಸಾಲ ಪಡೆಯಲು ಅನುಕೂಲವಾಗಲು ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಧಿನಿಯಮ ತಿದ್ದುಪಡಿಯಿಂದ ಸಾಲ ಪಡೆಯಲು ಅವಕಾಶವಾಗಲಿದೆ ಎಂದು ಹೇಳಿದರು.
ಗಲ್ಲು ಶಿಕ್ಷೆಯನ್ನು ಪ್ರಶ್ನಿಸಲು ಕಾಲಾವಕಾಶ
ನವದೆಹಲಿ, ಸೆ. 15: ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾಧವ್ ತಮ್ಮ ವಿರುದ್ಧದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡುವ ಸುಗ್ರೀವಾಜ್ಞೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಈ ಹಿಂದೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನ ಕುಲಭೂಷಣ್ ಜಾಧವ್‍ಗೆ ರಾಯಭಾರ ಕಚೇರಿಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಮತ್ತು ತಮಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶದ ಅನ್ವಯ ಪಾಕಿಸ್ತಾನ ಸಂಸತ್ ಇದೀಗ ಕುಲಭೂಷಣ್ ಜಾಧವ್‍ಗೆ ಗಲ್ಲು ಶಿಕ್ಷೆ ಪ್ರಶ್ನಿಸುವ ಅರ್ಜಿ ಸಲ್ಲಿಕೆ ಮಾಡಲು 4 ತಿಂಗಳ ಕಾಲವಕಾಶ ನೀಡಿದೆ.
ರೂ. 4 ಕೋಟಿ ಮೌಲ್ಯದ ಗಾಂಜಾ ವಶ
ಚಿತ್ರದುರ್ಗ, ಸೆ. 15: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಸಿ ಗಾಂಜಾವನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಡಿ.ಬಿ. ಮಂಜುನಾಥ್, ವೈ. ಜಂಬುನಾಥ್, ಡಿ.ವೈ. ಮಂಜುನಾಥ್, ಸುಮಂತ್ ಗೌಡ ಬಂಧಿತ ಆರೋಪಿಗಳಿದ್ದಾರೆ. ರಾಜ್ಯದಲ್ಲೇ ಅತಿ ದೊಡ್ಡ ಗಾಂಜಾ ಪ್ರಕರಣವನ್ನು ಬೇಧಿಸಿ ಚಿತ್ರದುರ್ಗ ಪೊಲೀಸರು ಸೈ ಎನಿಸಿಕೊಂಡಿದ್ದಾರೆ. ಆದರೆ ದೊಡ್ಡ ಅಕ್ರಮ ಬಯಲಾದ ಬೆನ್ನಲ್ಲೇ ಕೋಟೆನಾಡಿನ ಜನರು ಸಹ ಬಾರಿ ಆತಂಕಕ್ಕೀಡಾಗಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು. ಬೆಳದ ಗಾಂಜಾವನ್ನು ಹೇಗೆ, ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕಾರ್ಯಾಚರಣೆ ನಡೆಸಿದ್ದಾರೆ.
ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ನವದೆಹಲಿ, ಸೆ. 15: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಬೆನ್ನಲ್ಲೇ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೂ. 422 ದಾಖಲೆಯ ಏರಿಕೆಯಾಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ 53,019 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ ರೂಪಾಯಿ 1,013 ಹೆಚ್ಚಾಗಿ 70,743 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ಏರಿಕೆಯಾಗಿದ್ದು, ರೂಪಾಯಿ ಮೌಲ್ಯ ಮತ್ತೆ ಕುಸಿತಗೊಂಡಿದೆ ಎಂದು ಹೆಚ್‍ಡಿಎಫ್‍ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ. ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಕುಸಿದು ಬಿದ್ದು ನಟ ಪ್ರಬೀಶ್ ಸಾವು
ಕೊಚ್ಚಿ, ಸೆ. 15: ಪ್ರಸಿದ್ದ ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್ (44) ಶೂಟಿಂಗ್ ವೇಳೆಯಲ್ಲೇ ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದ್ದಾರೆ. ನಟ ಪ್ರಬೀಶ್ ಚಕ್ಕಲಕ್ಕಲ್ ಅವರು ಮಲಯಾಳಂ ಚಲನಚಿತ್ರಗಳಲ್ಲಿ ಅಭಿನಯಿ ಸುತ್ತಿದ್ದು ಅವರು ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಸಮಯದಲ್ಲಿ ನಟ ಕುಸಿದು ಬಿದ್ದು ಪ್ರಜ್ಞೆ ತಪ್ಪಿ ಸಾವಿಗೀಡಾಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಪ್ರಬೀಶ್ ಯೂಟ್ಯೂಬ್ ಚಾನೆಲ್ ಚಿತ್ರೀಕರಣದಲ್ಲಿದ್ದಾಗ ಈ ಘಟನೆ ನಡೆದಿದೆ. ಇವರೊಡನೆ ಸೆಟ್‍ನಲ್ಲಿದ್ದ ಸಹೋದ್ಯೋಗಿಗಳು ಕೆಲಸ ಪೂರ್ಣವಾದ ನಂತರ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದ್ದರು. ಆ ವೇಳೆ ಪ್ರಬೀಶ್ ಕುಸಿದು ಬಿದ್ದಿದ್ದಾರೆ.
ಆಲ್‍ರೌಂಡರ್ ಸದಾಶಿವ್ ನಿಧನ
ನವದೆಹಲಿ, ಸೆ. 15: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಸದಾಶಿವ್ ಪಾಟೀಲ್ (86) ಅವರು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ವೇಗದ ಬೌಲಿಂಗ್ ಆಲ್‍ರೌಂಡರ್ ಸದಾಶಿವ್ ಅವರು 1955ರ ಡಿಸೆಂಬರ್‍ನಲ್ಲಿ ಬಾಂಬೆಯಲ್ಲಿ (ಈಗಿನ ಮುಂಬೈ) ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಏಕೈಕ ಟೆಸ್ಟ್ ಆಡಿದರು. ಇದರಲ್ಲಿ ಅವರು ಒಟ್ಟು 51 ರನ್‍ಗಳಿಗೆ ಎರಡು ವಿಕೆಟ್ ಪಡೆದರು ಮತ್ತು 14 ರನ್ ಬಾರಿಸಿದರು. ಇದರ ನಂತರ ಅವರು ಮತ್ತೆ ಭಾರತ ಪರ ಆಡಲಿಲ್ಲ. ರಣಜಿಯಲ್ಲಿ ಮಹಾರಾಷ್ಟ್ರ ಪರ ಆಡಿರುವ ಸದಾಶಿವ್ 83 ವಿಕೆಟ್ ಪಡೆದಿದ್ದಾರೆ. 1952-1964ರವರೆಗೆ 36 ಪ್ರಥಮ ದರ್ಜೆ ಪಂದ್ಯಗಳಲ್ಲಿ 866 ರನ್ ಸಿಡಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ ಇನ್ನಿಂಗ್ಸ್‍ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 38 ರನ್‍ಗಳಿಗೆ ಐದು ವಿಕೆಟ್ ಪಡೆದಿದ್ದಾರೆ.