ಮಡಿಕೇರಿ, ಸೆ. 15: ಭೂಮಿಯ ಹಕ್ಕಿಗಾಗಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಮಾಧಿ ಬಳಿಯಿಂದ ತಾ. 14 ರಿಂದ 20ರ ವರೆಗೆ ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿರುವ ಜನಜಾಗೃತಿ ಜಾಥಾ ಇಂದು ಜಿಲ್ಲೆಗೆ ಆಗಮಿಸಿತು.

ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಪ್ರಮುಖ ಅಮಿನ್ ಮೊಯ್ಸಿನ್ ಭೂಮಿ, ವಸತಿಗಾಗಿ ಬಹಳಷ್ಟು ವರ್ಷಗಳಿಂದ ನಮ್ಮ ಸಮಿತಿ ಹೋರಾಡುತ್ತಾ ಬಂದಿದ್ದರೂ ಇಲ್ಲಿಯವರೆಗೆ ನ್ಯಾಯ ದೊರಕಿಲ್ಲ. ಕೊಡಗಿನಲ್ಲಿ ಭೂಮಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮನವಿ ಮಾಡಿದರೂ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಸರಕಾರ ರೈತ, ಕಾರ್ಮಿಕ, ದಲಿತ ವಿರೋಧಿ, ಜನವಿರೋಧಿ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು. ಭೂಮಿ ವಸತಿ ಸಂಬಂಧಿತ ಬಡವರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು. ಒಟ್ಟು ಸರಕಾರಿ ಭೂಮಿಯ ಆಡಿಟಿಂಗ್ ನಡೆಸಬೇಕು. ಲಭ್ಯವಿರುವ ಭೂಮಿಯನ್ನು ನಿವೇಶನಕ್ಕಾಗಿ, ಉಳುಮೆಗಾಗಿ ಕೂಡಲೆ ವಿತರಿಸಬೇಕು. ಫಾರಂ 50, 53, 57, 94 ಸಿ, 94 ಸಿಸಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ನವೆಂಬರ್ ಅಧಿವೇಶನದೊಳಗಾಗಿ ಇತ್ಯರ್ಥಗೊಳಿಸಿ ಬಡಜನರಿಗೆ ಹಕ್ಕು ನೀಡಬೇಕೆಂದು ಆಗ್ರಹಿಸಿದರು. ತಾ. 21 ರಂದು ಬೆಂಗಳೂರಿನಲ್ಲಿ ಈ ಸಂಬಂಧ ಬೃಹತ್ ಜನಾಂದೋಲನ ನಡೆಯಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭ ಸಮಿತಿ ಪ್ರಮುಖರಾದ ಕಾವೇರಿ, ಮನ್ಸೂರ್, ನಿರ್ವಾಣಪ್ಪ ಮತ್ತಿತರರು ಇದ್ದರು.