ಮಡಿಕೇರಿ. ಸೆ. 15: ವೀರಾಜಪೇಟೆ ತಾಲೂಕು ಕೇದ್ರದಿಂದ ಗಡಿಭಾಗವಾದ ಬಿರುನಾಣಿ ಗ್ರಾ.ಪÀಂ.ಅನ್ನು ಸಂಪರ್ಕಿಸಲು ಸುಮಾರು 20 ಕಿ.ಮೀ ನಷ್ಟು ಅಂತರ ಕಡಿಮೆಯಾಗುವ ಕೂಟಿಯಾಲ ರಸ್ತೆ ಸಂಪರ್ಕ ವಿಚಾರದಲ್ಲಿ ಕ್ಷೇತ್ರದ ಸಂಸದರು ಜವಾಬ್ದಾರಿ ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದ್ದಾರೆ.ಇತ್ತೀಚೆಗೆ ‘ಶಕ್ತಿ’ಯಲ್ಲಿ ಬಂದ ವರದಿಗೆ ಪ್ರತಿಕ್ರಿಯಿಸಿರುವ ಅವರು, ಸುಮಾರು 20 ವರ್ಷದಿಂದ ಈ ಯೋಜನೆ ನೆನೆಗುದಿಗೆ ಬಿದ್ದಿರುವದು ವಿಷಾದಕರವಾಗಿದೆ. ರಸ್ತೆ ವಿಚಾರದಲ್ಲಿ ವನ್ಯಜೀವಿ ಪ್ರದೇಶ ಎಂಬ ಕಾರಣಕ್ಕೆ ಆಕ್ಷೇಪಣೆ ಇರುವದರಿಂದ ಇದು ಕೇಂದ್ರದ ಮಟ್ಟದಲ್ಲಿ ಬಗೆ ಹರಿಯಬೇಕಿದೆ. ಈ ಹಿಂದೆ ರಸ್ತೆ ಸಂಪರ್ಕ ಕುರಿತಾಗಿ ತಾವು ಕೂಡ ವಿಧಾನ ಪರಿಷತ್‍ನಲ್ಲಿ ಧನಿ ಎತ್ತಿದ್ದಾಗಿ ಹೇಳಿದ ಅವರು ವಿವಾದ ನ್ಯಾಯಾಲಯದಲ್ಲಿರುವದರಿಂದ ಹಾಗೂ ಕೇಂದ್ರ ಸರಕಾರದ ಮಟ್ಟದಿಂದ ಇತ್ಯರ್ಥವಾಗಬೇಕಿರುವ ಹಿನ್ನೆಲೆಯಲ್ಲಿ ಸಂಸತ್ ಅನ್ನು ಪ್ರತಿನಿಧಿಸುತ್ತಿರುವ ಸದಸ್ಯರಾದ ಪ್ರತಾಪ್ ಸಿಂಹ ಅವರು ಈ ಕುರಿತು ಪ್ರಯತ್ನ ನಡೆಸಬೇಕಿದೆ ಆದರೆ ಜವಾಬ್ದಾರಿ ಹೊಂದಿರುವ ಸದಸ್ಯರು ಈ ವಿಚಾರದ ಬಗ್ಗೆ ಈ ತನಕ ಯಾವದೇ ಪ್ರಯತ್ನ ನಡೆಸಿಲ್ಲ. ಕಳೆದ ಏಳು ವರ್ಷದಿಂದ ಇವರೇ ಸಂಸದರಾಗಿದ್ದರೂ ಮುತುವರ್ಜಿ ವಹಿಸಿಲ್ಲ ಎಂದು ವೀಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಂಸದರು ಹಲವು ಯೋಜನೆಗಳಿಗೆ ಜಿಲ್ಲೆಯಲ್ಲಿ ಭೂಮಿಪೂಜೆ ನೆರವೇರಿಸಿರುವದು ಸ್ವಾಗತಾರ್ಹವಾಗಿದೆ. ಆದರೆ ಹಲವಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ರಸ್ತೆಯ ಬಗ್ಗೆಯೂ ಇಲ್ಲಿನ ಪ್ರತಿನಿಧಿಯಾಗಿ ಅವರು ಆಸಕ್ತಿ ತೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಯೋಜನೆಗೆ ಅನುದಾನ ಬರುವದೇ ಕಷ್ಟಕರ. ಆದರೆ, ಲಭ್ಯವಾದ ಅನುದಾನ ಸಾರ್ವಜನಿಕರಿಗೆ
(ಮೊದಲ ಪುಟದಿಂದ) ಪ್ರಯೋಜನವಾಗದಂತೆ ನೀರು ಪಾಲಾಗಿರುವದು ಗಂಭೀರ ವಿಚಾರವಾಗಿದೆ. ಸಂಬಂಧಿಸಿದ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಹೊಂದಾಣಿಕೆಯ ಕೊರತೆಯಿಂದಾಗಿ ಈ ರೀತಿಯಲ್ಲಿ ರೂಪಾಯಿ ಒಂದು ಕೋಟಿಗೂ ಅಧಿಕ ಹಣ ವೃತಾ ಪೋಲಾದಂತಾಗಿದೆ. ಇದೂ ಕೂಡ ಗಂಭೀರ ವಿಚಾರವಾಗಿದ್ದು ಈ ಇಲಾಖೆಗಳು ಈ ಬಗ್ಗೆ ಸೂಕ್ತ ನಿಯಮದಂತೆ ವ್ಯವಹರಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಇಷ್ಟು ಮೊತ್ತವನ್ನು ಈ ಇಲಾಖೆಗಳ ಸಂಬಂಧಿತರ ಮೂಲಕ ಮರು ವಸೂಲಾತಿ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿರುವ ವೀಣಾ ಅಚ್ಚಯ್ಯ ಸಂಸದರು ತಕ್ಷಣ ಈ ಬಗ್ಗೆ ಆಸಕ್ತಿ ತೋರಬೇಕೆಂದು ಒತ್ತಾಯಿಸಿದ್ದಾರೆ.