ಕರ್ನಾಟಕದ ಪಶ್ಚಿಮಘಟ್ಟ ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಜನರು ಕಾಡಾನೆ ಸಮಸ್ಯೆಯನ್ನು ಸದಾ ಎದುರಿಸುತ್ತಿದ್ದಾರೆ. ವರ್ಷದಿಂದ-ವರ್ಷಕ್ಕೆ ಕಾಡಾನೆಗೆ ಬಲಿಯಾಗುತ್ತಿರುವದು ನಡೆದೇ ಇದೆ. ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿಗಳು, ಅರಣ್ಯ ಸಿಬ್ಬಂದಿಗಳು ಕಾಡಾನೆಗಳ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಕರ್ನಾಟಕದ ಪಶ್ಚಿಮಘಟ್ಟ ಅರಣ್ಯಗಳು ಸಂಪನ್ಮೂಲ ಭರಿತವಾಗಿದ್ದು, ಜೀವ ವೈವಿಧ್ಯತೆಗಳ ಪ್ರಪಂಚವನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಾಗರಹೊಳೆ, ಬಂಡೀಪುರ, ಬನ್ನೇರುಘಟ್ಟ, ಕುದುರೆಮುಖ, ಅಣಶಿ, ದಾಂಡೇಲಿಗಳು ರಾಷ್ಟ್ರೀಯ ಉದ್ಯಾನವನಗಳೆಂದು, ವನ್ಯಜೀವಿ ಪ್ರದೇಶಗಳಾಗಿ ಸರ್ಕಾರ ಘೋಷಿಸಿದೆ. ಸಂರಕ್ಷಿತ ವನ್ಯಜೀವಿ ಅರಣ್ಯಗಳೆಂದು ಹುಲಿಯೋಜನೆ, ಬಫರ್ಝೋನ್, ವಿಶ್ವ ಪಾರಂಪರಿಕ ತಾಣ’ ಗಳೆಂಬ ಕಾನೂನುಗಳನ್ನು ಅರಣ್ಯ ಇಲಾಖೆ ಸ್ಥಳಾಂತರಿಸಿದ್ದು ಇತಿಹಾಸ. ಆದರೆ, ಅರಣ್ಯ ಇಲಾಖೆ ಮಾಡಿದ ಅರಣ್ಯದ ಅಭಿವೃದ್ಧಿಯಾದರೂ ಏನು ? ಎಂದು ತಿಳಿಯುತ್ತಿಲ್ಲ ವನ್ಯಜೀವಿಗಳಿಗೆ ನೀಡಿದ ಕೊಡುಗೆ ಏನು ? ವನ್ಯಜೀವಿಗಳ ಪೋಷಣೆ, ರಕ್ಷಣೆ, ಸಂರಕ್ಷಣೆಯ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಖರ್ಚು ಮಾಡಿದರೂ ಫಲಿತಾಂಶ ಏನು ? ಎನ್ನುವದನ್ನು ಪ್ರಶ್ನಿಸಲು ಇದು ಸೂಕ್ತ ಸಮಯ. ಕೊಡಗಿನಲ್ಲಿ ಉದ್ಭವಿಸಿರುವ ಕಾಡಾನೆ, ಹುಲಿ, ಚಿರತೆ, ಕಾಡುಹಂದಿಗಳ ಧಾಳಿಗೆ ಬಲಿಯಾಗಿರುವ ಕೊಡಗಿನ ಕೃಷಿಕರು ರೈತರು, ಪ್ರಜ್ಞಾವಂತರಿಗೆಲ್ಲ ‘‘ಅರಣ್ಯ ಇಲಾಖೆಯ ಅರಣ್ಯ ಅಭಿವೃದ್ಧಿ’’ ಏನು ಎನ್ನುವುದು ಅರ್ಥವಾಗದೇ ಇರುವ ವಿಚಾರವಲ್ಲ.
ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿರುವುದಕ್ಕೆ ಅರಣ್ಯನಾಶ, ಆಹಾರ, ಕೊರತೆ ಕಾರಣ ಎನ್ನುವ ನೆಪವೊಡ್ಡುವ ಅರಣ್ಯ ಇಲಾಖೆ, ಕೊಡಗಿನ ಬ್ರಹ್ಮಗಿರಿ, ಪುಷ್ಪಗಿರಿ, ತಲಕಾವೇರಿ ವನ್ಯಜೀವಿ ಅಭಯಾರಣ್ಯ ವಲಯಗಳಲ್ಲಿ ವನ್ಯಜೀವಿಗಳಿಗೆ ಎಷ್ಟು ಪ್ರಮಾಣದಲ್ಲಿ ಕೆರೆ ತೋಡಿಸಿದೆ ? ಎಷ್ಟು ಸಂಖ್ಯೆಯ ಆಲದ ಗಿಡ, ಮಾವು, ನೆಲ್ಲಿ, ಬಿದಿರು ಫಲಭರಿತ ಮರಗಳು ಅರಣ್ಯದಲ್ಲಿ ಫಲ ಕೊಡುತ್ತಿವೆ ? ಆಹಾರ ಕೊರತೆಗೆ ಕಾರಣವೇನು ? ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಾಮಾಜಿಕ ಅರಣ್ಯಗಳೆಂದು ನೆಪ ಮಾತ್ರಕ್ಕೆ ಅಕೇಶಿಯಾ ಸಿಲ್ವರ್, ಓಕ್ ಗಿಡಗಳನ್ನು ನೆಡುವುದು, ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣೆಯೆ ? ಈ ಗಿಡ, ಮರಗಳ ಆಶ್ರಯ ಪಡೆಯುವ ಯಾವುದಾದರೂ ಒಂದು ಪ್ರಾಣಿ ಇರುವದನ್ನು ಇಲಾಖೆ ಬಹಿರಂಗಪಡಿಸುವುದೇ ಅರಣ್ಯದಲ್ಲಿ ನೆಟ್ಟು ಬೆಳೆಸಿದ ಆಲದ ಹಣ್ಣು ಆನೆಗಳಿಗೆ ಆಹಾರವಾಗುತ್ತಿದೆ ಎನ್ನುವುದನ್ನು ಕೊಡಗಿನ ಕೃಷಿಕರಿಗೆ ಸಾಬೀತು ಪಡಿಸಲಿ. ಒಂದು ದಶಕದಿಂದ ಕೊಡಗಿನ ಜನರು ಕಾಡಾನೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಹುಲಿ ಧಾಳಿಯಿಂದ ಜಾನುವಾರುಗಳು ಪ್ರತಿನಿತ್ಯ ಬಲಿಯಾಗುತ್ತಿವೆ. ಶಾಶ್ವತ ಪರಿಹಾರವನ್ನು ಪೊಳ್ಳು ಭರವಸೆ ನೀಡಿ ಅಂಗೈಯಲ್ಲಿ ಆಕಾಶ ತೋರಿಸುವ ಯೋಜನೆಗಳನ್ನು, ಕಾನೂನುಗಳನ್ನು ಮಾಡುವ ಅರಣ್ಯ ಇಲಾಖೆ, ಜಿಲ್ಲೆಯ ರೈತರ, ಕೃಷಿಕರ, ಮೂಲನಿವಾಸಿಗಳ, ಜನಪ್ರತಿನಿಧಿಗಳ ಧ್ವನಿ ಎತ್ತದಂತೆ ಮಾಡುತ್ತಿದೆ. ಅವೈಜ್ಞಾನಿಕ ವರದಿಗಳು, ಯೋಜನೆಗಳು ಮಗದೊಂದು ಕಾರಣ. ವನ್ಯಜೀವಿ ಅಭಯಾರಣ್ಯಗಳೇ ಅಪಾಯ ಎದುರಿಸುತ್ತಿವೆ. ವನ್ಯಜೀವಿಗಳಿಂದ ಬೆಳೆಹಾನಿ, ಪ್ರಾಣಹಾನಿ ಮುಂತಾದ ಸಮಸ್ಯೆಗಳಿಗೆ ಹಣದ ರೂಪದಲ್ಲಿ ಪರಿಹಾರ ನೀಡುತ್ತಿದೆಯೇ ವಿನಾಃ ಪ್ರತ್ಯೇಕವಾಗಿ ಶಾಶ್ವತ ಮಾರ್ಗೋಪಾಯಗಳನ್ನು ಹುಡುಕುವ ಯಾವದೇ ಕಾರ್ಯರೂಪ ಇಲ್ಲಿಯವರೆಗೆ ಕಾರ್ಯಗತವಾಗಿದೆಯೇ ? ಕೊಡಗಿನಲ್ಲಿ ಅರಣ್ಯ ಇಂದಿಗೂ ಉಳಿದಿದೆ ಎಂದರೆ ಅದಕ್ಕೆ ಕಾರಣ ಬುಡಕಟ್ಟು ಆದಿವಾಸಿಗಳು, ಕೃಷಿಕರು, ಧಾರ್ಮಿಕ ನೆಲೆಗಳು, ಕೊಡಗಿನ ಪ್ರಜ್ಞಾವಂತ ಹಿರಿಯರು. ವರದಿಗಳು ಕಾನೂನುಗಳಿಗೆ, ಕಾಯಿದೆಗಳು, ಪುಸ್ತಕದಲ್ಲಿ ಕಾಣುವ ಅಕ್ಷರಗಳಿಗೆ ಸೀಮಿತವಾಗಿರುವುದು ಸತ್ಯ. ಅರಣ್ಯ ಇಲಾಖೆ ಕೊಡಗಿನಲ್ಲಿ ಮಾನವ ವನ್ಯಜೀವಿ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇಬೇಕು ಎಂದಾದರೆ ಕೊಡಗಿನ ಮೂಲನಿವಾಸಿಗಳನ್ನು ಕೃಷಿಕರನ್ನು, ಜನಪ್ರತಿನಿಧಿಗಳನ್ನು ಕೊಡಗಿನ ಹಿತಚಿಂತಕರನ್ನು ಒಗ್ಗೂಡಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ, ಸಲಹೆ, ಮುಂದಾಲೋಚನೆಯ ಮಾತುಗಳನ್ನು ಅರಣ್ಯ ಇಲಾಖೆ ಕೇಳಿಸಿಕೊಳ್ಳ ಬೇಕಾಗಿದೆ. ಆನೆ ನಡೆದದ್ದೇ ದಾರಿ ಎಂಬಂತೆ ಇಲಾಖೆಯ ನಡೆಯಾದರೆ ಭವಿಷ್ಯದಲ್ಲಿ ‘‘ಕೊಡಗು ವನ್ಯಜೀವಿ ಪೀಡಿತ ಪ್ರದೇಶ’’ ಎಂದು ಸರ್ಕಾರ ಘೋಷಣೆ ಮಾಡಬೇಕಾದೀತು. ಹೀಗಾದರೆ, ಅಭಿವೃದ್ಧಿ ಕಾರ್ಯಗಳಿಗೆ ಮಾರಕಪೆಟ್ಟು ಬೀಳುದಂತೂ ಖಂಡಿತ. ಅರಣ್ಯದಲ್ಲಿ ಜಲಮೂಲಗಳ ಸಂರಕ್ಷಣೆ, ಆಹಾರ ಸಂಪನ್ಮೂಲ ಲಭ್ಯತೆ ಹೆಚ್ಚಿಸುವುದು ತುರ್ತು ಅವಶ್ಯವಾಗಿದೆ. ಕೊಡಗಿನಲ್ಲಿ ಅರಣ್ಯ ನಾಶ ಎನ್ನುವ ಮೂಢನಂಬಿಕೆಯ ಕಾರಣವನ್ನು ಕೈಬಿಡಬೇಕು. 20 ವರ್ಷದ ಹಿಂದೆ ‘ದೂರದ ಬೆಟ್ಟ’ದಲ್ಲಿ ಮೊಲ ಓಡುವುದು ಕಾಣುತ್ತಿತ್ತು. ಇಂದು ಅದೇ ಜಾಗದಲ್ಲಿ ಆನೆ ನಿಂತರೂ ಕಾಣುವುದಿಲ್ಲ. ಇದೇ ಅಲ್ಲವೇ ಕೊಡಗಿನ ಜನರ ವನ್ಯಜೀವಿ ಪ್ರಕೃತಿಯ ಮೇಲಿನ ಮಮತೆಗೆ ಸಾಕ್ಷಿ. ಅರಣ್ಯ ಇಲಾಖೆಯ ಸಂರಕ್ಷಣೆಯ ಆನೆ ಎತ್ತ ಸಾಗುತ್ತದೋ ಕಾದು ನೋಡಬೇಕಾಗಿದೆ.
-ಕುಡಿಯರ ಎಂ. ಕಾವೇರಪ್ಪ,
ಯವಕಪಾಡಿ