ರಾಗಿಣಿ, ಸಂಜನಾ 14 ದಿನ ಬಂಧನ

ಬೆಂಗಳೂರು, ಸೆ. 14: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರಿಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಸಿಸಿಬಿ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಬ್ಬರು ನಟಿಯರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಬಂಧಿತ ನಟಿಯರಾದ ರಾಗಿಣಿ ಹಾಗೂ ಸಂಜನಾಗೆ ಸೆಪ್ಟೆಂಬರ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದರೊಂದಿಗೆ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿದ ಸ್ಯಾಂಡಲ್ ವುಡ್‍ನ ಮೊದಲ ನಟಿಯರು ಎಂಬ ಕುಖ್ಯಾತಿಗೆ ಸಂಜನಾ ಹಾಗೂ ರಾಗಿಣಿ ಪಾತ್ರರಾಗಿದ್ದಾರೆ. ಈ ಮಧ್ಯೆ, ಜಾಮೀನು ಕೋರಿ ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿಕೆಯಾಗಿದೆ. ಇದೇ ವೇಳೆ ಡ್ರಗ್ ಪೆಡ್ಲರ್ ರಾಹುಲ್, ಶಿವಪ್ರಕಾಶ್, ವಿನಯ್ ಕುಮಾರ್, ವೈಭವ್ ಜೈನ್ ಅವರ ಜಾಮೀನು ವಿಚಾರಣೆಯನ್ನೂ ಮುಂದೂಡಲಾಗಿದೆ.

ಉತ್ಪನ್ನ ಮಾರಾಟ ಮಸೂದೆ ಮಂಡನೆ

ನವದೆಹಲಿ, ಸೆ. 14: ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಆಯ್ಕೆಯ ಸ್ವಾತಂತ್ರ್ಯ ಒದಗಿಸುವ ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್‍ಇಲಾಖೆಯ ಸಚಿವ ನರೇಂದ್ರ ಸಿಂಗ್‍ತೋಮರ್, 'ರೈತರ ಉತ್ಪನ್ನಗಳ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸೌಲಭ್ಯ) ಮಸೂದೆ, 2020' ಮಂಡಿಸಿದರು. ಈ ಕರಡು ಮಸೂದೆ ಸ್ಪರ್ಧಾತ್ಮಕ ಪರ್ಯಾಯ ವ್ಯಾಪಾರ ವಾಹಿನಿಗಳ ಮೂಲಕ ದರವನ್ನು ಸುಗಮಗೊಳಿಸುತ್ತದೆ. ರೈತರ ಉತ್ಪನ್ನಗಳ ಪರಿಣಾಮಕಾರಿ, ಪಾರದರ್ಶಕ ಮತ್ತು ತಡೆರಹಿತ ಅಂತರ-ರಾಜ್ಯ ಮತ್ತು ಅಂತರ್-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಮಾರುಕಟ್ಟೆಗಳ ಭೌತಿಕ ಆವರಣದ ಹೊರಗೆ ಅಥವಾ ವಿವಿಧ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಶಾಸನಗಳ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸುತ್ತದೆ.

ಮತ್ತಷ್ಟು ದಂಧೆಕೋರರ ಬಂಧನ ಸಾಧ್ಯತೆ

ಬೆಂಗಳೂರು, ಸೆ. 14: ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿರುವ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನವಾರ ಮಹತ್ವದ ತನಿಖೆ ನಡೆಯಲಿದ್ದು, ಮತ್ತಷ್ಟು ಬಂಧನವಾಗುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಒಂದು ಹಂತದ ತನಿಖೆ ಮಾತ್ರ ನಡೆದಿದೆ. ಮುಂದಿನ ವಾರದಿಂದ ಮಹತ್ವದ ತನಿಖೆ ನಡೆಯಲಿದ್ದು, ಯಾರ್ಯಾರು ಈ ಜಾಲದಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರ ಹೆಸರುಗಳು ಬಹಿರಂಗಗೊಳ್ಳಲಿವೆ. ಈವರೆಗೂ ನಡೆದಿರುವ ತನಿಖೆಗಿಂತ ಮುಂದಿನ ವಾರ ನಡೆಯುವ ತನಿಖೆ ಅತ್ಯಂತ ಮಹತ್ವದ್ದು, ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಸದ್ಯದ ಮಟ್ಟಿಗೆ ಬಹಿರಂಗ ಪಡಿಸುವುದಿಲ್ಲ. ಏಕೆಂದರೆ ತನಿಖೆ ಪ್ರಗತಿಯಲ್ಲಿರುವುದರಿಂದ ಅದು ಬೇರೆ ರೀತಿಯ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುವುದಿಲ್ಲ. ಎಲ್ಲವೂ ನಿಮಗೆ ಗೊತ್ತಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಹರಿವಂಶ್ ನಾರಾಯಣ ಸಿಂಗ್ ಉಪಸಭಾಪತಿ

ನವದೆಹಲಿ, ಸೆ. 14: ರಾಜ್ಯಸಭೆ ಉಪ ಸಭಾಪತಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ ಸಿಂಗ್ ಆಯ್ಕೆಯಾಗಿದ್ದಾರೆ. ಧ್ವನಿಮತದ ಮೂಲಕ ಹರಿವಂಶ್ ನಾರಾಯಣ ಸಿಂಗ್ ಅವರನ್ನು ರಾಜ್ಯಸಭೆ ಉಪ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಹರಿವಂಶ್ ನಾರಾಯಣ್ ಸಿಂಗ್ ಸ್ಪರ್ಧಿಸಿದ್ದರು. ಇದೀಗ ಹರಿವಂಶ್ ಅವರು ಎರಡನೇ ಬಾರಿಗೆ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಉಪ ಸಭಾಪತಿಯಾಗಿ ಹರಿವಂಶ್ ನಾರಾಯಣ್ ಸಿಂಗ್ ಅವರು ಆಯ್ಕೆಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದರು. ಹರಿವಂಶ್ ಅವರು ಅದ್ಭುತ ಸಂಸದೀಯ ಪಟು ಎಂದು ಹೇಳಿದ್ದರು.

30 ಸಂಸದರಿಗೆ ಕೋವಿಡ್ ಪಾಸಿಟಿವ್

ನವದೆಹಲಿ, ಸೆ. 14: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಇದಕ್ಕೂ ಮುನ್ನಾ ದಿನ ಸಂಸದರಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ವರದಿ ಸೋಮವಾರ ಬಂದಿದ್ದು, ಸುಮಾರು 30 ಸಂಸದರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸೆಪ್ಟೆಂಬರ್ 13ರಂದು ಸಂಸದರಿಗೆ ಹಾಗೂ ಸಂಸತ್ ಭವನದ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 30 ಸಂಸದರಿಗೆ ಹಾಗೂ 50ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಬಿಜೆಪಿ 12 ಸಂಸದರು, ವೈಎಸ್‍ಆರ್ ಕಾಂಗ್ರೆಸ್‍ನ 2, ಶಿವಸೇನೆ, ಡಿಎಂಕೆ ಮತ್ತು ಆರ್‍ಎಲ್ಪಿ ಪಕ್ಷದ ತಲಾ ಒಬ್ಬರು ಸೇರಿದಂತೆ ಒಟ್ಟು 30 ಸಂಸದರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಕೊರೊನಾಗೆ ತುತ್ತಾಗಿರುವ ಬಿಜೆಪಿಯ ಸಂಸದ ಸುಕಾಂತ್ ಮಜೂಂದಾರ್ ತಮಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮೀನಾಕ್ಷಿ ಲೇಕಿಗೂ ಕೊರೊನಾ ಬಾಧಿಸಿದೆ.