ಗೋಣಿಕೊಪ್ಪಲು, ಸೆ. 14: ಕಳೆದ ಆರು ತಿಂಗಳಿನಿಂದ ಬಂದ್ ಆಗಿದ್ದ ಇರ್ಪು ಜಲಪಾತಕ್ಕೆ ತಾ. 15 ರಿಂದ (ಇಂದಿನಿಂದ) ಪ್ರವಾಸಿಗರು ತೆರಳಲು ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇರ್ಪು ಜಲಪಾತಕ್ಕೆ ತೆರಳುವ ಮಾರ್ಗವು ಕುಸಿದುಬಿದ್ದ ಪರಿಣಾಮ ಜಲಪಾತ ವೀಕ್ಷಣೆಗೆ ತೆರಳಲು ನಿರ್ಬಂಧ ವೇರಲಾಗಿತ್ತು. ನಂತರದ ದಿನಗಳಲ್ಲಿ ಕೊರೊನಾ ಮಹಾಮಾರಿಯು ದೇಶದೆಲ್ಲೆಡೆ ಕಂಡು ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳದಂತೆ ಜಿಲ್ಲಾಡಳಿತದಿಂದ ನಿಷೇಧ ಹೇರಲಾಗಿತ್ತು.

ಈ ಬಾರಿ ಸುರಿದ ಮಳೆಯಿಂದ ಇರ್ಪು ಜಲಪಾತವು ಧುಮ್ಮುಕ್ಕಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಜಲಪಾತಕ್ಕೆ ತೆರಳಲು ಪ್ರವಾಸಿಗರ ಅನುಕೂಲಕ್ಕಾಗಿ ಸುಗಮ ಸಂಚಾರಕ್ಕೆ ಕಾಂಕ್ರೀಟ್ ರಸ್ತೆಯೂ ಸಿದ್ಧಗೊಂಡಿದೆ. ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.

ಪ್ರಸ್ತುತ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ವೀಕ್ಷಣೆಗೆ ಆಗಮಿಸು ವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಜ್ವರ ಅಥವಾ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿಗಳಿಗೆ ಪ್ರವೇಶಾವಕಾಶ ಇರುವುದಿಲ್ಲ. ನದಿ ಹಾಗೂ ಜಲಪಾತದಲ್ಲಿ ಸ್ನಾನ ಮಾಡಲು ನಿರ್ಬಂಧವೇರಲಾಗಿದೆ. ಸಮೀಪದಲ್ಲಿರುವ ಇರ್ಪು ಶ್ರೀ ರಾಮೇಶ್ವರ ದೇವಾಲಯ 1.25 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದ್ದು ಬ್ರಹ್ಮ ಕಲಶ ನಡೆಸಲಾಗಿದೆ ಎಂದು ಇರ್ಪು ದೇವಾಲಯ ಸಮಿತಿ ಅಧ್ಯಕ್ಷ ಮದ್ರೀರ ಪಿ. ವಿಷ್ಣು ತಿಳಿಸಿದ್ದಾರೆ.

ಪ್ರವಾಸಿ ತಾಣವಾದ ಇರ್ಪು ಜಲಪಾತಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆ ವತಿಯಿಂದ ನೇಮಕ ಮಾಡಿರುವ ಸಿಬ್ಬಂದಿಗಳು ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಿ ನಂತರ ತೆರಳಲು ಅವಕಾಶ ನೀಡುತ್ತಾರೆ. ಶುಚಿತ್ವ ಕಾಪಾಡುವ ಮೂಲಕ ಪ್ರವಾಸಿಗರು ಸುಂದರ ತಾಣದ ಸೊಬಗನ್ನು ಸವಿಯಬಹುದಾಗಿದೆ. ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಮಂಗಲ ಆರ್‍ಎಫ್‍ಓ ವೀರೇಂದ್ರ ತಿಳಿಸಿದ್ದಾರೆ. -ಹೆಚ್.ಕೆ. ಜಗದೀಶ್