ಸಿದ್ದಾಪುರ, ಸೆ. 14: ಕಾಡಾನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಇಂಜಿಲಗೆರೆಯ ನಿವಾಸಿ ಕೆ.ಟಿ ಮುದ್ದಪ್ಪ ಎಂಬವರಿಗೆ ಸೇರಿದ ಕಾಫಿ ತೋಟದ ಕೆರೆಯ ಬಳಿ ಒಂಟಿ ಸಲಗ (ಅಂದಾಜು 25 ವರ್ಷ ಪ್ರಾಯ) ಆಕಸ್ಮಿಕವಾಗಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಕಾರ್ಮಿಕರು ಸೋಮವಾರದಂದು ಕೆಲಸಕ್ಕೆ ತೆರಳುವ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ, ವೀರಾಜಪೇಟೆ ವಲಯ ಎ.ಸಿ.ಎಫ್ ರೋಶಿನಿ ಹಾಗೂ ಪ್ರಬಾರ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕ್ರಿಸ್ಟೋಫರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ (ಮೊದಲ ಪುಟದಿಂದ) ನಡೆಸಿದರು. ನಂತರ ಬಾಳೆಲೆ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್ ಮೃತಪಟ್ಟ ಒಂಟಿ ಸಲಗದ ಮರಣೋತ್ತರ ಪರೀಕ್ಷೆ ನಡೆಸಿದರು. ಕಾಡಾನೆಯು ಯಾವಾಗ ಸತ್ತಿದೆ ಹಾಗೂ ಯಾವ ಕಾರಣದಿಂದ ಮೃತಪಟ್ಟಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭಿಸಿಲ್ಲ.
ಕಾಡಾನೆ ಹಾವಳಿ: ಇಂಜಿಲಗೆರೆ, ಪುಲಿಯೇರಿ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ತೋಟದಲ್ಲಿ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ಧ್ವಂಸಗೊಳಿಸಿ ಹಾನಿಗೊಳಿಸುತ್ತಿವೆ. ಮರಿ ಆನೆಗಳು ಸೇರಿದಂತೆ 10ಕ್ಕೂ ಅಧಿಕ ಕಾಡಾನೆಗಳು ಗ್ರಾಮದಲ್ಲಿ ಬೀಡುಬಿಟ್ಟು ರಾಜಾರೋಷವಾಗಿ ಸುತ್ತಾಡುತ್ತಿವೆ. ಬಾಳೆ, ತೆಂಗು ಗಿಡಗಳನ್ನು ನಾಶಗೊಳಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಇಂಜಿಲಗೆರೆಯ ನಿವಾಸಿ ರವಿ ತಿಳಿಸಿದರು. ಕೂಡಲೇ ಸರ್ಕಾರವು ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
-ವಾಸು