ಮಡಿಕೇರಿ, ಸೆ. 14: 2018ರಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳ ಹಂಚಿಕೆ ವಿಚಾರದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಅವ್ಯವಹಾರ ಎಸಗಿರುವ ಬಗ್ಗೆ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ, ವಿಚಾರಣೆಗೊಳಪಡಿಸುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಆದೇಶಿಸಿದ್ದಾರೆ. ಅಲ್ಲದೆ, ಎಲ್ಲಾ ಇಲಾಖಾಧಿಕಾರಿಗಳು ಮಾನವೀಯತೆಯೊಂದಿಗೆ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಜಂಬೂರು ಬಾಣೆಯಲ್ಲಿ ಸಂತ್ರಸ್ತರಿಗೆ ಮನೆಗಳನ್ನು ಹಂಚಿಕೆ ಮಾಡುವ ವಿಚಾರಕ್ಕೆ
(ಮೊದಲ ಪುಟದಿಂದ) ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕ, ಮನೆ ಹಂಚಿಕೆ ಕಾರ್ಯದ ಉಸ್ತುವಾರಿಯಾಗಿದ್ದ ಹೇಮಂತ್ ಎಂಬಾತ ಕೆಲವರಿಂದ ಹಣ ಪಡೆದು ಮನೆಗಳನ್ನು ವಿತರಿಸಿರುವದಾಗಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರುಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಮಾಡಿದ್ದು, ಸಂಬಂಧಿಸಿದ ಸಿಬ್ಬಂದಿ ಹೇಮಂತ್ನನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸುವಂತೆ ಆದೇಶ ಮಾಡಿರುವದಾಗಿ ತಿಳಿಸಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಲಂಚ ಪಡೆದು ನೀಡಲಾಗಿದ್ದು, ಇದರ ವಿರುದ್ಧ ಮೊಕದ್ದಮೆ ದಾಖಲಿಸುವದಾಗಿಯೂ ಸಚಿವರು ಹೇಳಿದರು.
ಶಾಸಕ ಅಪ್ಪಚ್ಚುರಂಜನ್ ಅವರು ಮಾತನಾಡಿ, ಈ ಹಿಂದೆ ಅಧಿಕೃತವಾಗಿ 100 ಮನೆಗಳಿಗೆ ಸಚಿವರ ಸಮ್ಮುಖದಲ್ಲಿ ಮನೆಗಳ ಕೀ ಹಂಚಿಕೆ ಮಾಡಲಾಗಿತ್ತು. ಆದರೆ ಹೇಮಂತ್ ಯಾರ ಗಮನಕ್ಕೂ ತಾರದೆ 62 ಮಂದಿಗೆ ಕೀ ನೀಡುವಂತೆ ಮನೆಗಳನ್ನು ನಿರ್ಮಿಸಿದ ರಾಜೀವ್ಗಾಂಧಿ ಗೃಹ ನಿರ್ಮಾಣ ಮಂಡಳಿಯ ಅಧಿಕಾರಿಗಳಿಗೆ ವ್ಯಾಟ್ಸಾಪ್ ಮೂಲಕ ಸೂಚನೆ ನೀಡಿರುವದು ಗೊತ್ತಾಗಿದೆ ಎಂದು ಹೇಳಿದರು. ಅಲ್ಲದೆ ತಾಕೇರಿಯ ನಿವಾಸಿಗಳಿಗೂ ಮನೆ ನೀಡಲು ಹಣ ಕೇಳಿರುವ ಬಗ್ಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಗಮನಕ್ಕೆ ತಂದಿರುವದಾಗಿ ಹೇಳಿದರು.
ಅಭಿವೃದ್ಧಿ - ಸವಲತ್ತಿಗೆ ಅಡ್ಡಿಬೇಡ
ಅಭಿವೃದ್ಧಿ ಕಾರ್ಯ ಹಾಗೂ ಜನತೆಗೆ ಸವಲತ್ತು ಒದಗಿಸುವ ಕಾರ್ಯಗಳಿಗೆ ಅಡ್ಡಿ ಮಾಡಬೇಡಿ ಎಂದು ಸಚಿವ ಸೋಮಣ್ಣ ಅವರು, ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅರಣ್ಯ ಇಲಾಖೆ ವಿಚಾರ ಪ್ರಸ್ತಾಪಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಅರಣ್ಯ ಇಲಾಖೆಯಿಂದ ರೈತರ ಬೆಳೆ ನಷ್ಟ ನೀಡಲಾಗಿದೆಯೇ ಎಂದು ಮಾಹಿತಿ ಬಯಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ಪ್ರಭಾಕರನ್ ಅವರು, 572 ಪ್ರಕರಣಗಳಲ್ಲಿ ರೂ. 52.86 ಲಕ್ಷ ಹಾನಿಯಾಗಿದೆ. 13.22 ಲಕ್ಷದಷ್ಟು ಪರಿಹಾರ ನೀಡಲಾಗಿದ್ದು, ಇನ್ನು 341 ಪ್ರಕರಣಗಳಿಗೆ ಪರಿಹಾರ ನೀಡಬೇಕಾಗಿದೆ ಎಂದು ತಿಳಿಸಿದರು.
ಪರಿಶಿಷ್ಟರ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯಿಂದ ನಿರಾಪೇಕ್ಷಣ ಪತ್ರ ನೀಡುತ್ತಿಲ್ಲ ಎಂದು ಶಾಸಕ ಬೋಪಯ್ಯ ಅವರು ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೂಲಭೂತ ಸೌಲಭ್ಯಕ್ಕೆ ಏಕೆ ಅಡ್ಡಿ ಪಡಿಸುತ್ತೀರಾ? ಕುಡಿಯುವ ನೀರು, ರಸ್ತೆ, ವಿದ್ಯುತ್, ಮನೆ ಕಟ್ಟಲು ಯಾವದೇ ತೊಂದರೆ ಆಗಬಾರದು, ಇದು ಅವರ ಹಕ್ಕು. ಇನ್ನು ಮುಂದಕ್ಕೆ ನೆಪ ಹೇಳಿಕೊಂಡು ನಾಟಕ ಮಾಡಬೇಡಿ, ಸಮಸ್ಯೆಗಳಿದ್ದರೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಿ, ಬಡವರನ್ನು ಬದುಕಲು ಬಿಡಿ. ಇದು ನನ್ನ ಕೊನೆಯ ಆದೇಶವೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೌಭಾಗ್ಯ ಮುಗಿಸಿ
ಸೌಭಾಗ್ಯ ಯೋಜನೆಯಡಿ ವಿದ್ಯುತ್ ಕಾಮಗಾರಿಗಳಾಗದಿರುವ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಸಭೆಯ ಗಮನಕ್ಕೆ ತಂದರು. ದನಿಗೂಡಿಸಿದ ಶಾಸಕ ಬೋಪಯ್ಯ ಅವರು, ಕೇಂದ್ರದ ಯೋಜನೆಯಡಿ ರೂ. 16 ಕೋಟಿ ಬಿಡುಗಡೆ ಆಗಿದ್ದು, ಮುಂದಿನ ನವೆಂಬರ್ ತಿಂಗಳೊಳಗೆ ಕಾಮಗಾರಿ ಕೊನೆಗೊಳ್ಳಬೇಕಿತ್ತು. ಆದರೆ ಇದೀಗ 1 ವರ್ಷ ಹೆಚ್ಚಿಗೆ ಅವಧಿ ನೀಡಲಾಗಿದೆ. ಕಾಮಗಾರಿ ನಿರ್ವಹಿಸಲು ಅರಣ್ಯದೊಳಗಡೆ ಇನ್ಸುಲೇಟೆಡ್ ಕೇಬಲ್ ಮೂಲಕ ಅಳವಡಿಸುವಂತೆ ಅರಣ್ಯ ಇಲಾಖೆ ತಾಕೀತು ಮಾಡುತ್ತಿದೆ. ಹೀಗಾದರೆ ಹೇಗೆ ಕೆಲಸ ಮಾಡೋದು ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಇನ್ಸುಲೇಟೆಡ್ ಕೇಬಲ್ಗಿಂತ ಪ್ರಸ್ತುತ ಅಳವಡಿಸಲಾಗುತ್ತಿರುವ ಕೇಬಲ್ಗಳೇ ಉತ್ತಮ; ಆದರೆ ಅರಣ್ಯ ಇಲಾಖೆ ಇನ್ಸುಲೇಟೆಡ್ ಕೇಬಲ್ ಅಳವಡಿಸುವಂತೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ನೀಡಿದರು.
ಮಾತನಾಡಿದ ಉಸ್ತುವಾರಿ ಸಚಿವರು, ಯಾವದೇ ಕಾರಣಕ್ಕೂ ತೊಂದರೆ ಕೊಡಬೇಡಿ, ಯಾವ ವ್ಯವಸ್ಥೆಯಡಿ ಸಾಧ್ಯವೋ ಅದೇ ವ್ಯವಸ್ಥೆಯಡಿ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯದ ಹಣ ಅರಣ್ಯಕ್ಕೆ..!
ಮುಜರಾಯಿ ಇಲಾಖೆ ಮೂಲಕ ದೇವಾಲಯಗಳಿಗೆ ಬರುವ ಹಣವನ್ನು ಅರಣ್ಯ ಇಲಾಖೆಗೆ ನೀಡಬೇಕೆಂದು ಯಾರು ಆದೇಶಿಸಿದ್ದು..? ಇದು ಯಾಕೆ? ಎಂದು ಶಾಸಕ ಕೆ.ಜಿ. ಬೋಪಯ್ಯ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಎಲ್ಲಾ ದೇವಾಲಯಗಳದ್ದು ಇಲ್ಲ, ದೇವರಕಾಡು ಹೊಂದಿಕೊಂಡಿರುವ ದೇವಸ್ಥಾನಗಳದ್ದು ಮಾತ್ರ ಎಂದು ಸಮಜಾಯಿಷಿಕೆ ನೀಡಿದರು. ಈ ಸಂದರ್ಭ ಶಾಸಕ ಬೋಪಯ್ಯ ಅವರು ದೇವರಕಾಡುವಿನ ಬಗೆಗೆ ಅರಣ್ಯ ಕಾಯ್ದೆಯಲ್ಲಿರುವ ಅಂಶವನ್ನು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭ ಸಚಿವರು, ‘ದೇªರು ಕೊಟ್ಟರೂ ಪೂಜಾರಿ ಬಿಡ’ ಎಂಬಂತಾಗಿದೆ. ದೇವಸ್ಥಾನದ ಸ್ವಚ್ಛತೆಗೆ ಸರಕಾರ ಹಣ ನೀಡಿದರೆ ಹೀಗೆ ಮಾಡೋದು ಒಳ್ಳೇದಲ್ಲ. ಎಲ್ಲವನ್ನೂ ಪರಿಶೀಲಿಸಿ ಗಮನಕ್ಕೆ ತರುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಅವರಿಗೆ ಸೂಚಿಸಿದರು. ಮತ್ತೊಮ್ಮೆ ಬರುವಾಗ ಇತ್ಯರ್ಥವಾಗಿರಬೇಕೆಂದು ಹೇಳಿದರು.
ಅರಣ್ಯ ಹಕ್ಕು ಕಾಯ್ದೆ
ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದ ಕಡತಗಳನ್ನು ಅರಣ್ಯ ಇಲಾಖೆಗೆ ಕಳುಹಿಸಬಾರದೆಂದು ಸೂಚಿಸಿದ್ದರೂ ಕಳುಹಿಸಲಾಗುತ್ತಿದೆ. ಇಲಾಖೆ ಕಡತ ವಾಪಸ್ ಕಳುಹಿಸುವರಿಲ್ಲ, ಅರಣ್ಯಾಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗುವದಿಲ್ಲ. ಹಾಗಾಗಿ ಫಲಾನುಭವಿಗಳಿಗೆ ಹಕ್ಕು ಸಿಗುತ್ತಿಲ್ಲವೆಂದು ಶಾಸಕ ಬೋಪಯ್ಯ ಆರೋಪಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಉಪವಿಭಾಗಾಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಿದೆ. ವಲಯ ಅರಣ್ಯಾಧಿಕಾರಿಗಳಲ್ಲ, ಅವರುಗಳು ಸಭೆಗೆ ಹಾಜರಾಗಿ ಮಾಹಿತಿ ನೀಡಬೇಕು. ಇನ್ನು ಮುಂದೆ ಹೀಗಾಗಬಾರದೆಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
ಮಾರ್ಚ್ಗೆ ಕುಂಡಾಮೇಸ್ತ್ರಿ
ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನೊದಗಿಸುವ ಕುಂಡಾಮೇಸ್ತ್ರಿ ಯೋಜನೆಯನ್ನು ಮಾರ್ಚ್ ವೇಳೆಗೆ ಪೂರ್ಣಗೊಳಿಸುವಂತೆ ಶಾಸಕರುಗಳು ಅಧಿಕಾರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಯೋಜನೆ ಬಗ್ಗೆ ಶಾಸಕ ಬೋಪಯ್ಯ ಅವರು ಮಾಹಿತಿ ಬಯಸಿದರು. ಪ್ರತಿಕ್ರಿಯಿಸಿದ ಒಳಚರಂಡಿ ಮಂಡಳಿ ಅಭಿಯಂತರರು ಜನವರಿ ಒಳಗಡೆ ಚೆಕ್ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಳಿಸುವದಾಗಿ ಹೇಳಿದರು. ಪ್ರತಿಕ್ರಿಯಿಸಿದ ಶಾಸಕರುಗಳಾದ ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರುಗಳು ಮಾರ್ಚ್ ವೇಳೆಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 23 ಕೋಟಿಯ ಯೋಜನೆ ಇದೀಗ 30 ಕೋಟಿಗೆ ತಲಪಿದೆ ಎಂದು ಶಾಸಕ ಬೋಪಯ್ಯ ಆರೋಪಿಸಿದರು.
ಒಳಚರಂಡಿ ಮುಗಿಸಿ
ಶಾಸಕ ರಂಜನ್ ಅವರು, ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಜನರ ಶಾಪ ಕೇಳುವಂತಾಗಿದೆ. ಯಾವಾಗ ಮುಗಿಸುತ್ತೀರಾ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಭಿಯಂತರರು ಮಡಿಕೇರಿಯ ಕೆ. ಬಾಡಗದಲ್ಲಿ ಎಸ್ಟಿಪಿ ಘಟಕಕ್ಕೆ ಜಾಗ ಗುರುತಿಸಲಾಗಿದೆ. ಸ್ಥಳೀಯರ ವಿರೋಧವಿತ್ತಾದರೂ ಇದೀಗ ಅವರುಗಳ ಮನವೊಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೊದಲು ಎಸ್ಟಿಪಿ ಘಟಕ ನಿರ್ಮಾಣ ಮಾಡಿ ನಂತರ ರಸ್ತೆ ಅಗೆಯುವ ಕೆಲಸ ಮಾಡುವಂತೆ ಶಾಸಕ ಬೋಪಯ್ಯ ಸೂಚಿಸಿದರು.
ಜನತಾ ಬಜಾರ್ನಿಂದ ಆಹಾರ
ಅಂಗನವಾಡಿಗಳಿಗೆ ಜನತಾ ಬಜಾರ್ನಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತೆ ಸೂಚನೆ ನೀಡಲಾಗಿದ್ದರೂ ಬೇರೆ ಕಡೆಗಳಿಂದ ಖರೀದಿಸುತ್ತಿರುವ ಬಗ್ಗೆ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ಗೆ ಅವರುಗಳು ಪ್ರಶ್ನಿಸಿದರು. ಇನ್ನು ಮುಂದಕ್ಕೆ ಜನತಾ ಬಜಾರ್ನಿಂದಲೇ ಖರೀದಿ ಮಾಡುವಂತೆ ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನೀರು ನುಗ್ಗಿದ ಮನೆಗೆ ಪರಿಹಾರ
ಪ್ರವಾಹದಿಂದಾಗಿ ಮನೆಯೊಳಗಡೆ ನೀರು ನುಗ್ಗಿ ಸಾಮಗ್ರಿಗಳಿಗೆ ಹಾನಿಯುಂಟಾದ ಮನೆಗಳಿಗೆ ರೂ. 10 ಸಾವಿರ ನೀಡುವದಾಗಿ ಈ ಹಿಂದೆ ಘೋಷಿಸಲಾಗಿತ್ತು. ಆದರೆ ಇನ್ನು ಕೂಡ ಹಣ ಸಿಗದಿರುವ ಬಗ್ಗೆ ಶಾಸಕ ರಂಜನ್ ಅವರು ಸಭೆಯ ಗಮನಕ್ಕೆ ತಂದರು. ಅಂತಹವರನ್ನು ಗುರುತಿಸಿ ರೂ. 10 ಸಾವಿರ ಪರಿಹಾರ ನೀಡುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅರ್ಹ ಫಲಾನುಭವಿಗಳಿಗೆ ಪರಿಹಾರ ತಲಪುವಂತಾಗಬೇಕೆಂದು ಹೇಳಿದರು.
ಫೌಂಡೇಶನ್ ಹಾಕಿಲ್ಲ
ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುವ ಸಂತ್ರಸ್ತರಿಗೆ ಹಂತ - ಹಂತವಾಗಿ ಬರಬೇಕಾದ ಹಣ ಬರುತ್ತಿಲ್ಲ; ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲವೆಂದು ಶಾಸಕ ಬೋಪಯ್ಯ ಆರೋಪಿಸಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವದಿಲ್ಲ. ನಾವುಗಳು ನೋಡಲ್ ಅಧಿಕಾರಿಗಳಂತಾಗಿದ್ದೇವೆ. ಉಪ ವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮೊದಲ ಹಂತದ ರೂ. 1 ಲಕ್ಷ ಪಡೆದುಕೊಂಡ 114 ಮಂದಿ ಪೈಕಿ ಇನ್ನೂ ಕೆಲವರು ಅಡಿಪಾಯ ಕೂಡಾ ಹಾಕಿಲ್ಲ. ಹಾಗಾಗಿ ಹಣ ಬಿಡುಗಡೆಯಾಗಿಲ್ಲ ಅವರುಗಳಿಗೆ ನೋಟೀಸ್ ನೀಡಲು ತೀರ್ಮಾನಿಸಿರುವದಾಗಿ ಹೇಳಿದರು. ಈ ಸಂದರ್ಭ ಸಚಿವರು ಮಾತನಾಡಿ, ನೋಟೀಸ್ ಬೇಡ, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಮನೆ ನಿರ್ಮಾಣ ಮಾಡದಿದ್ದರೆ ಹಣ ಸಿಗುವುದಿಲ್ಲವೆಂದು ಫಲಾನುಭವಿಗಳಿಗೆ ಮನವೊಲಿಸುವಂತೆ ಹೇಳಿದರು.