ಸುಂಟಿಕೊಪ್ಪ,ಸೆ.13 : ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ಮರುಮೌಲ್ಯ ಮಾಪನ ಪತ್ರಿಕೆಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊಡೆತದೊಂದಿಗೆ ಭವಿಷ್ಯಕ್ಕೆ ಸಂಚಕಾರ ತಂದೊಡ್ಡಲಿರುವ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ.
2019-20 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯು ಕೋವಿಡ್ 19 ರ ಕಂಟಕದಿಂದ ಮುಂದೂಡಲ್ಪಪಟ್ಟಿದ್ದು ಪರೀಕ್ಷೆ ನಡೆಯುವುದೇ ಎಂಬ ಆತಂಕವೂ ಪೋಷಕರಲ್ಲಿತ್ತು ಕೊನೆಗೂ ಪರೀಕ್ಷೆ ನಡೆದು ಫಲಿತಾಂಶವೂ ಹೊರ ಬಂದಿದೆ. ಪರೀಕ್ಷೆಯಲ್ಲಿ 1 ಅಂಕ 2 ಅಂಕ ಹಾಗೂ 3 ಅಂಕ ಕಡಿಮೆಗೊಳಿಸಿದ ಅನುತ್ತೀರ್ಣರಾದ ವಿದ್ಯಾರ್ಥಿಗಳ ಕೆಲ ಪೋಷಕರು ಮರು ಮೌಲ್ಯಮಾಪನಕ್ಕೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರುಗಳನ್ನು ಸಂಪರ್ಕಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಮಂಡಳಿಗೆ ಉತ್ತರ ಪತ್ರಿಕೆ ಪಡೆಯಲು ರೂ 400 ಪಾವತಿಸಬೇಕು. ಅನುತ್ತೀರ್ಣವಾದ 1 ವಿಷಯಕ್ಕೆ 400 ರೂ ಶುಲ್ಕವನ್ನು ಉತ್ತರ ಪತ್ರಿಕೆ ಪಡೆದುಕೊಳ್ಳಲು ಕಟ್ಟಬೇಕಾಗಿದೆ. ಆ ಉತ್ತರ ಪತ್ರಿಕೆ ಬಂದ ನಂತರ ಅದನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಪರಿಶೀಲಿಸಿದ ನಂತರ ಹೆಚ್ಚು ಅಂಕ ಬರಬೇಕಾದ ಸಾಧ್ಯತೆ ಇದ್ದರೆ ಮರು ಮೌಲ್ಯಮಾಪನ ಮಾಡಿಸಲು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಗೆ ಮತ್ತೆ 800 ರೂ ಶುಲ್ಕ ಪಾವತಿಸಿದ ನಂತರ ಮರು ಮೌಲ್ಯಮಾಪನ ಮಾಡಲಾಗುತ್ತದೆ. ಅದೇ ಸಮಯದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣರಾದ ಮರು ಪರೀಕ್ಷೆಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು 1 ವಿಷಯಕ್ಕೆ ರೂ 350 ಶುಲ್ಕ ಪಾವತಿಸಬೇಕಾಗಿದೆ. ಆದುದರಿಂದ ಪುನರ್ ಮೌಲ್ಯಮಾಪನ ಪ್ರಕ್ರಿಯೆ ಮುಗಿಸಿದ ನಂತರ ಸಪ್ಲಿಮೆಂಟರಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದೂ ಪೋಷಕರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮರು ಮೌಲ್ಯಮಾಪನ ನಡೆಸಿ ವಿದ್ಯಾರ್ಥಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದರೆ ಆ ವಿದ್ಯಾರ್ಥಿ ಸಪ್ಲಿಮೆಂಟರಿ ಪರೀಕ್ಷೆಗೆ ಕೂರುವ ಅವಶ್ಯಕತೆ ಇರುವುದಿಲ್ಲ ಆದರೆ ಪರೀಕ್ಷೆಯನ್ನು ಎದುರಿಸಲು ಪಾವತಿಸಿದ 350 ರೂ ಪರೀಕ್ಷಾ ಮಂಡಳಿಯಿಂದ ವಿದ್ಯಾರ್ಥಿಗೆ ಲಭಿಸುವುದಿಲ್ಲ ಅನುದಾನಿತ ಹಾಗೂ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಕೆಲವರು ಮರುಮೌಲ್ಯಮಾಪನ ಮಾಡಿ ಉತ್ತೀರ್ಣರಾದ ಉದಾಹರಣೆ ಇದೆ. ಆದರೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳಾಗಿದ್ದು ಅತೀ ಕಡು ಬಡವರಾಗಿದ್ದು, ಅವರುಗಳು 1,2,3 ಅಂಕಗಳಿಂದ ಅನುತ್ತೀರ್ಣರಾದರೆ ಆರ್ಥಿಕವಾಗಿ ಶÀಕ್ತರಲ್ಲದ ಕಾರಣ ಮರುಮೌಲ್ಯ ಮಾಪನಕ್ಕೆ ಅರ್ಜಿಸಲ್ಲಿಸುವುದೇ ಇಲ್ಲ ಇದರಿಂದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಚಕಾರ ಬರಲಿದೆ.
ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಗೊಳ್ಳಬೇಕಾದ ವಿದ್ಯಾರ್ಥಿಗಳು ಸಹ ಕಡಿಮೆ ಅಂಕ ಬಂದಿದ್ದನ್ನು ಮನನೊಂದು ಮರು ಮೌಲ್ಯಮಾಪನ ಗೊಳಿಸಿದ್ದಾಗ ಅತ್ತ್ಯುತ್ತಮ ಶ್ರೇಣಿಗಳಿಸಿದ ಉದಾಹರಣೆಗಳು ಇದೆ. ಯಾವುದಾದರೂ ಹುದ್ದೆಗೆ ಸೇರಬೇಕಾದರೆ ಪ್ರಥಮ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತೇರ್ಗಡೆಯಾದವರನ್ನು ಪರಿಗಣಿಸುತ್ತಾರೆ. ಸಪ್ಲಿಮೆಂಟರಿ ಪರೀಕ್ಷೆ ಬರೆದು ತೇರ್ಗಡೆಯಾದ ವಿದ್ಯಾರ್ಥಿಗಳನ್ನು ‘ಡಿ’ಗ್ರೇಡ್ ಆಗಿ ಪರಿಗಣಿಸಿ ಅವರುಗಳ ಅರ್ಜಿಯನ್ನು ತಿರಸ್ಕರಿಸುತ್ತಾರೆ.
ಇಲ್ಲಿನ ಅನುದಾನಿತ ಶಾಲೆಯಲ್ಲಿ ಮರು ಮೌಲ್ಯ ಮಾಪನಕ್ಕೆ ಅರ್ಜಿಸಲ್ಲಿಸಿದ್ದ 6 ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದು, ಗಮನಾರ್ಹವಾದುದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪರೀಕ್ಷಾ ಮಂಡಳಿಯವರು ಬಡವರ ಮಕ್ಕಳಿಗೂ ಮರು ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಲು ಶುಲ್ಕ ದರ ಪರಿಷ್ಕರಿಸಿ ಕೆಲ ಮಾರ್ಪಾಡುಗಳನ್ನು ಮಾಡಬೇಕೆಂದು ಪೋಷಕರುಗಳು ಆಗ್ರಹಿಸಿದ್ದಾರೆ.