ವೀರಾಜಪೇಟೆ, ಸೆ. 13: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ಕಳೆದ 5 ತಿಂಗಳುಗಳಿಂದ ಕೊಡಗು ಕೇರಳ ಗಡಿಭಾಗದಲ್ಲಿರುವ ಕುಟ್ಟ ಹಾಗೂ ಮಾಕುಟ್ಟದ ವಿವಿಧ ಇಲಾಖೆಗಳ ಚೆಕ್ ಪೋಸ್ಟ್‍ಗಳು ಬಂದ್ ಆದ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕದ ಇತರ ವಾಣಿಜ್ಯ ವ್ಯವಹಾರಗಳೊಂದಿಗೆ ಸಮುದ್ರದ ಹಸಿಮೀನು ವ್ಯಾಪಾರಕ್ಕೂ ಅಡಚಣೆ ಉಂಟಾಗಿದ್ದು ಈಗ ದಕ್ಷಿಣ ಕೊಡಗಿನ ಎಲ್ಲಾ ಚೆಕ್‍ಪೋಸ್ಟ್‍ಗಳು ತೆರೆಯಲ್ಪಟ್ಟು ಎಲ್ಲ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶವಾದ್ದರಿಂದ ಕೇರಳದ ಹಸಿಮೀನು ವ್ಯಾಪಾರ ಇದೀಗ ಚೇತರಿಸಿಕೊಳ್ಳುತ್ತಿದೆ.

ವೀರಾಜಪೇಟೆ ತಾಲೂಕಿನಾದ್ಯಂತ ಕೇರಳ ಸಮುದ್ರದ ಎಲ್ಲಾ ಹಸಿ ಮೀನು ಮಾರುಕಟ್ಟೆಗಳಿಗೆ ನಿರಂತರವಾಗಿ ಮತ್ಸ್ಯಹಾರಿಗಳ ಬೇಡಿಕೆಗೆ ತಕ್ಕಂತೆ ಕೇರಳದ ಕಣ್ಣಾನೂರು, ತಲಚೇರಿಯ ಸಮುದ್ರದ ಕರಾವಳಿಯಿಂದ ವಿವಿಧ ಜಾತಿಯ ಮೀನುಗಳು ಸರಬರಾಜಾಗುತ್ತಿವೆ. ಮೀನು ಉದ್ಯಮಿದಾರರು ನಿಟ್ಟುಸಿರು ಬಿಡುವಂತಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಕೇಂದ್ರ ಸರಕಾರದ ಸಹಾಯಧನದ ಯೋಜನೆಯಡಿಯಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಆಧುನಿಕ ಮತ್ಸ್ಯಭವನವನ್ನು ಸುಮಾರು ಹತ್ತು ತಿಂಗಳ ಹಿಂದೆ ತೆರೆಯಲಾಗಿದ್ದು, ಕೊರೊನಾ ವೈರಸ್ ನಿರ್ಬಂಧದ ಹಿನ್ನೆಲೆಯಲ್ಲಿ ಅನೇಕ ತಿಂಗಳು ಮತ್ಸ್ಯಭವನ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮೀನು ಅಂಗಡಿಗಳ ಬಾಡಿಗೆ ಆದಾಯ ಇಲ್ಲದೆ ನಷ್ಟ ಅನುಭವಿಸುವಂತಾಗಿತ್ತು.

ಮತ್ಸ್ಯಭವನದ ಮೀನು ಮಳಿಗೆಗಳಿಗೆ ಪಟ್ಟಣ ಪಂಚಾಯಿತಿ ಮೂರು ಬಾರಿ ಟೆಂಡರ್ ಕರೆದರೂ ಸರಕಾರದ ಕನಿಷ್ಟ ಬಿಡ್‍ನ ಆದಾಯ ಬಾರದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮತ್ತೆ ಇ ಟೆಂಡರ್ ಪ್ರಕ್ರಿಯೆ ಮಾಡಿದರೂ ಪಂಚಾಯಿತಿಗೆ ನಿರೀಕ್ಷಿತ ಆದಾಯ ಬರಲಿಲ್ಲವೆನ್ನಲಾಗಿದೆ.

ಇದೀಗ ಗಡಿಭಾಗದ ಗೇಟ್‍ಗಳು ತೆರೆಯಲ್ಪಟ್ಟು ವೀರಾಜಪೇಟೆ ತಾಲೂಕಿಗೆ ನಿರಂತರವಾಗಿ ಸಮುದ್ರದ ಹಸಿಮೀನು ಬರುತ್ತಿದೆ. ಆದರೆ ತಾಲೂಕಿನ ಯಾವ ಮಾರುಕಟ್ಟೆಯಲ್ಲಿಯೂ ನಿಗಧಿತ ದರವಿಲ್ಲದೆ ಗ್ರಾಹಕರು ನ್ಯಾಯ ಸಮ್ಮತದರದಿಂದ ವಂಚನೆಗೊಳಗಾಗುತ್ತಿರುವುದಾಗಿ ಹಲವರು ‘ಶಕ್ತಿ’ಯೊಂದಿಗೆ ದೂರಿದ್ದಾರೆ. ಆದ್ದರಿಂದ ಹಸಿಮೀನು ವ್ಯಾಪಾರಿಗಳು ಒಮ್ಮತವಾಗಿ ಸೇರಿ ಹಸಿಮೀನು ಮಾರಾಟದ ಬೆಲೆ ನಿಗದಿಪಡಿಸಬೇಕಾಗಿದೆ.

ಕಳೆದ ಎಂಟು ತಿಂಗಳ ಹಿಂದೆ ಮತ್ತಿ ಮೀನಿಗೆ ಕೆ.ಜಿ.ಗೆ ರೂ. 100 ರಿಂದ 120 ಇದ್ದದ್ದು, ಈಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ರೂ. 180 ರಿಂದ 200 ರವರೆಗೆ ದುಬಾರಿಯಾಗಿದೆ. ಇದೇ ರೀತಿಯಲ್ಲಿ ಬಂಗಡೆ ಮೀನು ಕೆ.ಜಿ.ಗೆ ರೂ. 130 ರಿಂದ 140 ರವರೆಗೆ ಇದ್ದದ್ದು ಇಂದು ಕೆ.ಜಿ.ಗೆ ರೂ. 240 ರಿಂದ 260 ರವರೆÀಗೆ ಹೆಚ್ಚಳವಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಆಧುನಿಕ ಮತ್ಸ್ಯಭವನದಲ್ಲಿಯೂ ಮತ್ತಿ, ಬಂಗುಡೆ ಮೀನಿಗೆ ದುಬಾರಿ ದರವಿದ್ದು ಈಗ ದಕ್ಷಿಣ ಕೊಡಗಿನಿಂದ ಕೇರಳಕ್ಕೆ ಎಲ್ಲ ವಾಹನಗಳಿಗೆ ಮುಕ್ತ ಸಂಚಾರವಿದ್ದು ಸರಬರಾಜಾಗುವ ಹಸಿಮೀನಿಗೆ ನ್ಯಾಯ ಸಮ್ಮತವಾದ ಬೆಲೆಯಲ್ಲಿ ಮಾರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಹಸಿಮೀನು ವ್ಯಾಪಾರಿಗಳನ್ನು ಸಂಪರ್ಕಿಸಿದರೆ ಮತ್ಸ್ಯಭವನದ ಮಳಿಗೆಗಳ ಟೆಂಡರ್ ಹಕ್ಕಿನ ಬಾಡಿಗೆಯೂ ದುಬಾರಿಯಾಗಿರುವುದರಿಂದ ಈ ಹಿಂದಿನಂತೆ ಅಗ್ಗದ ದರದಲ್ಲಿ ಹಸಿ ಮೀನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಸಿಮೀನು ಮಾರುಕಟ್ಟೆಯಿಂದ ಕೇವಲ ಆದಾಯವನ್ನು ನಿರೀಕ್ಷಿಸುವುದಲ್ಲ. ಹಸಿಮೀನು ವ್ಯಾಪಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ಕೇರಳದಿಂದ ಬರುವ ಹಸಿಮೀನನ್ನು ನ್ಯಾಯ ಸಮ್ಮತವಾದ ಬೆಲೆಗೆ ಗ್ರಾಹಕರಿಗೆ ವಿತರಿಸುವಂತೆ ಮಾಡಬೇಕಾಗಿದೆ.

- ಡಿ.ಎಂ.ಆರ್.