ಜಡಿ ಮಳೆ ನಿಂತಿದೆ., ಹನಿ ತೊಟ್ಟಿಕ್ಕುವುದು ನಿಲ್ಲಲಿದೆ... ಈ ವರ್ಷ ಜುಲೈ ಆಖೈರ್ವರೆಗೆ ಮಳೆ ಬರದಿದ್ದಾಗ ಎಲ್ಲರಿಗೂ ಹೆದರಿಕೆ ಚಿಂತೆ ಆದದ್ದು ಸಹಜ. ಆದರೆ, ಆಗಸ್ಟ್ ಆರಂಭದಿಂದ ಒಂದೇ ಸಮನೆ ಜಡಿ ಮಳೆ ಹೊಡೆಯಲಾರಂಭಿಸಿದಾಗಲೂ ಹೆದರಿಕೆ ಚಿಂತೆ ಉಂಟಾಯಿತು! ಜಡಿಮಳೆಯ ಪರಿಣಾಮವಾಗಿ ಭೂಕುಸಿತ ಉಂಟಾಗಿ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್, ಅವರ ಸಹೋದರ, ಪತ್ನಿ ಮತ್ತು ಇಬ್ಬರು ಸಹ ಅರ್ಚಕರು ಪ್ರಾಣಕಳೆದು ಕೊಳ್ಳಬೇಕಾಯಿತು. ಅವಘಡ ನಡೆದ ಹಿಂದಿನ ದಿವಸ (ಆ. 5) ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾರಾಯಣಾಚಾರ್ಯರಿಗೆ ಮನೆ ಬಿಡಲು ಎಚ್ಚರಿಕೆ ಹೇಳಿದ್ದರು. ಅವರು ಮಾತನ್ನು ಕೇಳಿದ್ದರೆ 1) ಐದು ಅಮೂಲ್ಯ ಜೀವಗಳುಳಿಯುತ್ತಿದ್ದವು 2) ನಾರಾಯಣಾಚಾರ್ಯರ ಕುಟುಂಬದವರು ನಾನಾ ರೀತಿಯ ಅಪಪ್ರಚಾರದ ಮಾತುಗಳನ್ನು ಕೇಳಬೇಕಾಗಿ ಬರುತ್ತಿರಲಿಲ್ಲ!!
ಆಗಸ್ಟ್ 6ರ ಬೆಳಗ್ಗೆ ನಡೆದ ಈ ದುರ್ಘಟನೆ ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತ ಪಸರಿಸಿತು, ರಾಷ್ಟ್ರೀಯ ಸುದ್ದಿಯೂ ಆಗಿಹೋಯಿತು. ಮನೆಗಳು, ವಾಹನಗಳು, ವಸ್ತುಗಳು, ದವಸಧಾನ್ಯಗಳು, ಗೋಸಂಪತ್ತು ಹೀಗೆ ಎಲ್ಲವೂ ಕುಸಿದು ಭೂಮಿಯೊಳಗೆ ಮುಳುಗಿ ಹೋದವು. ಆಶ್ಚರ್ಯವೆಂದರೆ ಘಟನೆ ನಡೆದುದನ್ನು ನೋಡಿದ ಕೇಳಿದ ಜನಸಾಮಾನ್ಯರು ಆ ಕ್ಷಣದಲ್ಲಿ ದಿಙ್ಮೂಢರಾದರೂ ನಂತರ ಚೇತರಿಸಿಕೊಂಡು ವಾರ ಕಳೆಯುವ ಮೊದಲು ನಾರಾಯಣಾಚಾರ್ಯರ ಆಸ್ತಿ ಪಾಸ್ತಿ, ಚಿನ್ನಾಭರಣಗಳು, ದ್ರವ್ಯಸಂಪಾದನೆ, ಪೂಜೆ ಪುನಸ್ಕಾರ, ಜಾನುವಾರು, ಅವರ ಮದುವೆಯಾದ ಹೆಣ್ಣುಮಕ್ಕಳ ಬಗ್ಗೆ ಪ್ರಚಾರ ಅಪಪ್ರಚಾರ ಮಾಡಿದ್ದೇ ಮಾಡಿದ್ದು!! ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಕೆಲವು ಟಿವಿ ಮಾಧ್ಯಮದವರೂ ‘ಬ್ರೇಕಿಂಗ್ ನ್ಯೂಸ್’ ಕೊಟ್ಟಿದ್ದೇ ಕೊಟ್ಟಿದ್ದು! ನಾರಾಯಣಾಚಾರ್ಯರ ಹೆಣ್ಣುಮಕ್ಕಳಿಗೆ ಸರಕಾರದ ಪರಿಹಾರ ಧನ ಕೊಡುವ ಬಗ್ಗೆಯೂ ಗಲಾಟೆ ಗೊಂದಲಗಳೇ!! ವಾರ್ತಾಪತ್ರಿಕೆಗಳೂ ತಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನೂ ಅಭಿಪ್ರಾಯಗಳನ್ನೂ ಬರೆದರು. ಇಂತಹಾ ಬರವಣಿಗೆಗಳಲ್ಲಿ ಕೆಲವೊಂದು ಸತ್ಯವೂ ಇರುತ್ತಿತ್ತು. ಆಗಸ್ಟ್ 22ರ ನಂತರದ ದಿನಗಳಲ್ಲಿ ಕೊಡಗಿನ ಬಹುತೇಕ ವಾರ್ತಾ ಪತ್ರಿಕೆಗಳಲ್ಲಿ ಮತ್ತು ಕೆಲವು ಹೊರಗಿನ ಪತ್ರಿಕೆಗಳಲ್ಲಿ ‘ತಲಕಾವೇರಿಯ ಭೂಕುಸಿತಕ್ಕೆ ಕಾವೇರಮ್ಮನ ಅಸಂತೃಪ್ತಿಯೇ ಕಾರಣ’ ಇದಕ್ಕೆ ತಲಕಾವೇರಿಯಲ್ಲಿ ನಿತ್ಯಪೂಜೆ ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಪೂಜಾ ಕೈಂಕರ್ಯ ಬದಲಾಗಬೇಕು. 300 ವರ್ಷಗಳಿಗೆ ಪೂರ್ವದಲ್ಲಿ, ಟಿಪ್ಪು ದಾಳಿಗೆ ಮೊದಲು ಅಮ್ಮಕೊಡವರು ಪೂಜೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಟಿಪ್ಪು ದಾಳಿ ನಡೆಯಿತು. ಹಾಗಾಗಿ ಅಮ್ಮಕೊಡವರು ಸ್ಥಳದಿಂದ ಪಲಾಯನ ಮಾಡಿದರು. ನಂತರ ಕೊಡವರೊಬ್ಬರು ಬ್ರಾಹ್ಮಣ ವಟುವನ್ನು ತಂದು ಕೂರಿಸಿ ಪೂಜಾ ಕೈಂಕರ್ಯ ಮುಂದುವರಿಸಿದರು. ಆ ಬ್ರಾಹ್ಮಣ ಕುಟುಂಬದವರೇ ಈಗಲೂ ಪೂಜೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. ನಾರಾಯಣಾಚಾರ್ಯರ ಕುಟುಂಬದವರ ಅವಧಿ ಆಗಸ್ಟ್ 31 ರ ವರೆಗಿತ್ತು. ನಂತರದವರು ಯಾವ ಆಡಂಬರವೂ ಇಲ್ಲದೆ ಸೆ. 1 ರಿಂದ ಪೂಜೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪÀಕ್ಕನೆ ಅಮ್ಮಕೊಡವರು ಪೂಜೆ ತಮಗೆ ಬಿಟ್ಟುಕೊಡಿ ಎಂದು ಕೆಲವು ಅಮ್ಮಕೊಡವರು, ಕೊಡವರು ಒಟ್ಟಾಗಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದಾರೆ.
ಆಶ್ಚರ್ಯವೆಂದರೆ ಈ ಬೇಡಿಕೆ ಸಲ್ಲಿಸಿದವರು ಕೆಲವೇ ಮಂದಿ ಕೊಡವರು, ಕೆಲವೇ ಮಂದಿ ಅಮ್ಮಕೊಡವರು. ತಮಗೆ ಹಿಂದಿನಿಂದ ಬೆಂಬಲ ಕೊಡಿಸಿಕೊಳ್ಳಲು ಕೆಲವು ಲೇಖಕರನ್ನು ಬಳಸಿಕೊಂಡು ಅವರಿಂದ ತಮಗೆ ಬೇಕಾದ ರೀತಿಯಲ್ಲಿ ಲೇಖನಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಇಂತಹ ಲೇಖಕ ಮಹನೀಯರುಗಳು ಅಮ್ಮಕೊಡವರ ನ್ಯಾಯೋಚಿತ ಬೇಡಿಕೆಗೆ ಭಾರೀ ಜನಬೆಂಬಲವಿದೆ ಎಂದು ಹೇಳಿಕೆ ಕೊಡುತ್ತಾ ಜನರನ್ನು ಭ್ರಮೆ ಮತ್ತು ಗೊಂದಲ ಲೋಕಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನರು ಇವರು ತಿಳಿದಂತೆ ಮುಟ್ಠಾಳರಲ್ಲ. ಅವರಿಗೆ ಚೆನ್ನಾಗಿ ಗೊತ್ತಿದೆ ಇವರದ್ದು ಆಕಾಶಕ್ಕೆ ಏಣಿ ಇಟ್ಟು ಹತ್ತುವ ಪ್ರಯತ್ನ ಎಂದು! ಸಮಾಜದಲ್ಲಿರುವ ಪ್ರಾಮಾಣಿಕ ಕೊಡವ, ಅಮ್ಮಕೊಡವ, ಗೌಡ ಸಮುದಾಯ, ಬ್ರಾಹ್ಮಣರು ಗೌರವಾನ್ವಿತ ಇತರ ಹಿಂದೂ ಬಾಂಧವರು ಮೇಲಿನಂತೆ ಬೇಡಿಕೆ ಸಲ್ಲಿಸುತ್ತಿರುವವರಿಗೆ ಕಿಂಚಿತ್ತೂ ಬೆಲೆ ಕೊಡದೆ ಉಪೇಕ್ಷಿಸುತ್ತಾರೆ. ಪರಿಸ್ಥಿತಿ ಹೀಗಿದ್ದರೂ ಕೆಲವು ಅಸಮಾಧಾನದವರು, ಕಫ್ರ್ಯೂ ಮನೋಭಾವದವರು ನಾರಾಯಣಾಚಾರ್ಯರ ಪ್ರಾಯ ಪ್ರಬುದ್ಧತೆ ಹೆಣ್ಣುಮಕ್ಕಳು ಸ್ವ ಇಚ್ಛೆಯಿಂದ ಅನ್ಯಮತೀಯರನ್ನು ಮದುವೆ ಆದ ಬಗ್ಗೆ ಹೇಳಿಕೆ ಕೊಟ್ಟು ಛೀಮಾರಿ ಹಾಕಿಸಿಕೊಂಡರು.
ಹೀಗೆ ಬರೆದುದರ ವಿರುದ್ಧ ಇಬ್ಬರು ಲೇಖಕರು ಅವರ ಅಭಿಪ್ರಾಯಗಳನ್ನು ಬರೆದರು 1) ಟಿಪ್ಪುವಿಗೆ ಹೆದರಿ ಓಡಿಹೋದ ಅಮ್ಮಕೊಡವರು ಟಿಪ್ಪು ಹೋದಮೇಲೆ ತಕ್ಷಣ ಬರದೆ 300 ವರ್ಷಗಳ ನಂತರ ಪೂಜಾ ಹಕ್ಕು ಕೇಳಲು ಕಾರಣವೇನು? ಇನ್ನು ಟಿಪ್ಪು ಬರಲಾರನೆಂದೇ? ಈಗ ಹೀಗೆ ಬೇಡಿಕೆ ಇಡುವುದು ನ್ಯಾಯವಾದಿತ್ವದ್ದು ಎಂದೆನಿಸುವುದೇ? ಕಾವೇರಮ್ಮನ ನಿಜವಾದ ಭಕ್ತರು ಕೊಡವರು- ಆಗ ಒಬ್ಬ ಬ್ರಾಹ್ಮಣ ವಟುವನ್ನು ತಂದು ಕಾವೇರಮ್ಮನ ಪೂಜೆ ಮಾಡಿಸಿದರಲ್ಲಾ - ಅದು ನಿಜವಾದ ಭಕ್ತಿ. ಆ ಕಾರಣದಿಂದಲೇ ಆ ವಟುವಿನ ವಂಶ ಬೆಳೆದು ಈಗಲೂ ಪೂಜೆ ಮಾಡುತ್ತಿದೆ. 2) ಅಮ್ಮಕೊಡವರು ಈಗ ಪೂಜಾಹಕ್ಕು ಕೇಳುತ್ತಿರುವವರಿಗೆ 300 ವರ್ಷಗಳಿಂದ ಮಳೆಗಾಲ, ಚಳಿಗಾಲ ಬೇಸಿಗೆ ದಿನಗಳ ಪಯರ್ಂತ ಜನಸಂಪರ್ಕ ಇಲ್ಲದೆಡೆ ಪೂಜೆ ಮಾಡುತ್ತಿರುವವರಿಗೆ ಸೌಜನ್ಯಕ್ಕಾದರೂ ಕೃತಜ್ಞತೆ ಅರ್ಪಿಸಬೇಕೆಂದಿನಿಸಲಿಲ್ಲವೇ? ಅಂದು ಕೊಡವರಿಂದಾಗಿ ಕಾವೇರಮ್ಮನ ಪೂಜೆ ಬ್ರಾಹ್ಮಣ ವಟುವಿನ ಮೂಲಕ ಮುಂದುವರಿದಿದ್ದಾಗ ಅಮ್ಮ ಕೊಡವರೇ ಹಕ್ಕು ಚಲಾಯಿಸದಿದ್ದ ಮೇಲೆ ಈ 300 ವರ್ಷಗಳ ಬಳಿಕ ಹಕ್ಕು ಕೇಳುವುದು ನ್ಯಾಯವೇ? ಧರ್ಮಶಾಸ್ತ್ರಗಳು, ಆಧಾರಗ್ರಂಥಗಳು ಬ್ರಹ್ಮೋಪದೇಶವಾದವರಿಂದ ಪೂಜಾಧಾರ್ಮಿಕ ಕಾರ್ಯಗಳಾಗಬೇಕೆನ್ನುತ್ತಿವೆ. ವಿಚಾರ ಹೀಗಿರುವಾಗ ಕೊಡವರು, ಅಮ್ಮ ಕೊಡವರು, ಗೌಡ ಸಮುದಾಯದವರು, ಬ್ರಾಹ್ಮಣರು ಹಾಗೂ ಗೌರವಾನ್ವಿತ ಇತರ ಹಿಂದೂ ಬಾಂಧವರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಡವೇ?
ಸೆ. 1 ರಿಂದ ಸಂಪ್ರದಾಯದ ಪ್ರಕಾರ ಮುಂದಿನ. ಜವಾಬ್ದಾರಿಕೆ ಇರುವವರು ಪೂಜೆ ಆರಂಭಿಸಿದ್ದಾರೆ. ನಾರಾಯಣಾಚಾರ್ಯರ ಮತ್ತು ತಲಕಾವೇರಿಯಲ್ಲಿ ಪೂಜೆ ಮಾಡುವ ಇತರ ಮನೆತನದವರು ಮತ್ತು ಅವರ ಹತ್ತಿರದ ಸಂಬಂಧಿಕರೂ ಹಾಗೂ ವಕ್ತಾರರಾದ ಕೆ. ಜಯಪ್ರಕಾಶ್ ರಾವ್ ಈಗಾಗಲೇ ಪತ್ರಿಕಾ ಗೋಷ್ಠಿ ಕರೆದು ಅವರ ನಿಲುವೇನು ಎಂದು ಸ್ಪಷ್ಟಪಡಿಸಿದ್ದಾರೆ.
ಅವರ ನಿಲುವುಗಳು:
1) ನಾರಾಯಣಾಚಾರ್ಯರ ಇಬ್ಬರೂ ಹೆಣ್ಣು ಮಕ್ಕಳು ಭಾರತೀಯ ಕ್ರಿಶ್ಚಿಯನ್ನರನ್ನು ವಿವಾಹವಾಗಿಯೂ ತಮ್ಮತನವನ್ನು ಉಳಿಸಿಕೊಂಡಿರುತ್ತಾರೆ. ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ತಾವು ಸ್ವತಃ ಭಜನೆ ಹಾಡುತ್ತಾರೆ, ಮಕ್ಕಳನ್ನು ಹಾಡಿಸುತ್ತಾರೆ. ಹಬ್ಬ ಹರಿದಿನಗಳನ್ನಾಚರಿಸುತ್ತಾರೆ. ಅಧ್ಯಾತ್ಮ ಜೀವನದತ್ತ ಒಲವಿದೆ. 2) ತಮ್ಮ ತಂದೆ-ತಾಯಿ ಹೆಸರಲ್ಲಿ ಸಿಗುವ ಪರಿಹಾರದ ಮೊತ್ತವನ್ನು ಭಾರತದಲ್ಲಿಯೇ ಸದ್ವಿನಿಯೋಗ ಮಾಡಲಾಗುತ್ತದೆ. 3) ತಲಕಾವೇರಿಯ ಪೂಜಾ ಕೈಂಕರ್ಯವನ್ನು ಯಾವ ಕಾರಣಕ್ಕೂ ಬಿಟ್ಟುಕೊಡಲಾಗುವುದಿಲ್ಲ. ಈ ಮೇಲಿನ ಎಲ್ಲಾ ವಿಚಾರಗಳನ್ನು ಈಗಾಗಲೇ ಸಾಕಷ್ಟು ಪ್ರಚಾರಗೊಳಿಸಲಾಗಿದೆ. ಇನ್ನೇನಾಗಬೇಕಾಗಿದೆ?
ಈಗ ಜಡಿ ಮಳೆ ನಿಂತಿದೆ., ಆದರೆ ಮರದಿಂದ ಬೀಳುವ ಹನಿ ತೊಟ್ಟಿಕ್ಕುವುದು ನಿಲ್ಲಬೇಕಾಗಿದೆ. ಕೊನೆಯದಾಗಿ ಒಂದು ವಿನಂತಿ. ಸಮಾನ ಮನಸ್ಸಿನ ಎಲ್ಲಾ ಹಿಂದೂಗಳು ಕಾವೇರಮ್ಮನ ಹೆಸರಿನಲ್ಲಿ ಒಂದಾಗಿ ದೇಶದ ಉನ್ನತಿಯತ್ತ ಗಮನ ಹರಿಸೋಣ. ತಲಕಾವೇರಿ ಯಲ್ಲಿ ಸರ್ವಸಮ್ಮತ ಅಭಿಪ್ರಾಯಕ್ಕೆ ಮನ್ನಣೆ ನೀಡಲಿ.
-ಜಿ.ಟಿ. ರಾಘವೇಂದ್ರ, ಮಡಿಕೇರಿ.