18 ಉಗ್ರರನ್ನು ಹತ್ಯೆ ಮಾಡಲಾಗಿದೆ

ಜಮ್ಮು, ಸೆ. 13: ‘ಆಪರೇಷನ್ ಆಲ್‍ಔಟ್' ಕಾರ್ಯಾಚರಣೆಯಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದಾಗಿನಿಂದ ಭದ್ರತಾ ಪಡೆಗಳು ಭಯೋತ್ಪಾದಕ ಸಂಘಟನೆಗಳ ಹಿರಿಯ ಕಮಾಂಡರ್‍ಗಳು ಸೇರಿದಂತೆ ಅನೇಕ ಉಗ್ರರನ್ನು ನಿರ್ನಾಮ ಮಾಡಿವೆ. `ಆಪರೇಷನ್ ಆಲ್‍ಔಟ್' ಭಾಗವಾಗಿ, ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳು ಆಗಸ್ಟ್ ತಿಂಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಕೆಲವು ಭಾಗಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳ 18 ಉಗ್ರರನ್ನು ಹತ್ಯೆ ಮಾಡಿವೆ. ಆಪರೇಷನ್ ಆಲ್‍ಔಟ್'ನ ಭಾಗವಾಗಿ ಮಹತ್ವದ ಹೋರಾಟ ಮತ್ತು ಶೋಧ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ವಿಶೇಷವಾಗಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪ್ರಮುಖ ಯಶಸ್ಸನ್ನು ಸಾಧಿಸಿದ್ದೇವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಜಂಬೂ ಸವಾರಿ ಮೆರವಣಿಗೆಗೆ ಒತ್ತಾಯ

ಮೈಸೂರು, ಸೆ. 13: ನಾಡಹಬ್ಬ ದಸರಾ ಜನರ ಹಬ್ಬವಾಗಬೇಕು. ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಬಾರದು. ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗದಿದ್ದರೆ ಜಟಕಾ ಗಾಡಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ ಮಾಡುತ್ತೇನೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಮೈಸೂರಿನ ಜಯಚಾಮರಾಜ ವೃತ್ತದಲ್ಲಿ ರಾಜ್ಯ ಸರ್ಕಾರದ ಸರಳ ದಸರಾ ಆಚರಣೆ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ ಅವರು, ಕೊರೋನಾ ಸೋಂಕು ನಿಯಂತ್ರಣ ಕ್ರಮಗಳ ನಡುವೆ ದಸರಾ ವೈಭವಕ್ಕೆ ಯಾವುದೇ ತೊಂದರೆ ಎದುರಾಗಬಾರದು ಎಂದರು.

ಸೈನಿಕನಿಂದ ಜೀವಂತ ಮದ್ದುಗುಂಡು ವಶ

ಬೆಳಗಾವಿ, ಸೆ. 13: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ಸೈನಿಕನೋರ್ವನನ್ನು ಬಂಧಿಸಿ ಆತನಿಂದ ಎಕೆ-47 ಬಂದೂಕಿನ ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರ ಬ್ಯಾಗ್‍ಗಳನ್ನು ಪರಿಶೀಲಿಸಿದಾಗ ಸೈನಿಕನ ಲಗ್ಗೇಜ್‍ನಲ್ಲಿ ಒಂದು ಸುತ್ತಿನ ಜೀವಂತ ಮದ್ದುಗುಂಡುಗಳ ಸರಪಳಿ ಮತ್ತು ಬಳಸಿದ ಮದ್ದುಗುಂಡುಗಳ ಪೆಟ್ಟಿಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈನಿಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ಎಂಎಲ್ ಐಆರ್ ಸಿಗೆ ಹಸ್ತಾಂತರ ಮಾಡಿದ್ದಾರೆ.

ಕುಸ್ತಿಪಟುವಿಗೆ ಮರಣ ದಂಡನೆ

ಟೆಹರಾನ್, ಸೆ. 13: ಇರಾನ್ ಸರ್ಕಾರ ಕೊನೆಗೂ ಕುಸ್ತಿ ಕ್ರೀಡಾಪಟುಗೆ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಿದೆ. ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭದ್ರತಾ ಸಿಬ್ಬಂದಿಯೊಬ್ಬರನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ. ನವೀದ್ ಅಫ್ಕಾರಿ (27) ಎಂಬ ಕುಸ್ತಿ ಕ್ರೀಡಾಪಟುವಿಗೆ ಮರಣ ಶಿಕ್ಷೆ ವಿಧಿಸಿದ್ದಾರೆ. 2018ರಲ್ಲಿ ನಡೆದಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನವೀದ್ ಭದ್ರತಾ ಗಾರ್ಡ್ ಒಬ್ಬರನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿದ್ದರು. ಇನ್ನು ನವೀದ್ ಅಫ್ಕಾರಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡದಂತೆ ಅಮೆರಿಕಾ ಸೇರಿದಂತೆ ಹಲವು ದೇಶಗಳು ಮನವಿ ಮಾಡಿದ್ದವು.