ಸೋಮವಾರಪೇಟೆ, ಸೆ.12: ತಾಲೂಕಿನ ಶಾಂತಳ್ಳಿಯಲ್ಲಿ ಸಿ ಮತ್ತು ಡಿ ಜಾಗ ಒತ್ತುವರಿ ಮಾಡಿಕೊಂಡು ತೋಟ ಮಾಡಲು ಮುಂದಾಗಿದ್ದ ವ್ಯಕ್ತಿಗಳಿಗೆ ಅರಣ್ಯ ಇಲಾಖಾ ಅಧಿಕಾರಿಗಳು ತಡೆಯೊಡ್ಡಿರುವ ಘಟನೆ ಇಂದು ನಡೆದಿದೆ.
ಶಾಂತಳ್ಳಿ ವ್ಯಾಪ್ತಿಯಲ್ಲಿರುವ ಸಿ ಮತ್ತು ಡಿ ಜಾಗದಲ್ಲಿ ಈ ಹಿಂದೆ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಲವರು ಈ ಜಾಗಗಳನ್ನು ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಲು ಮುಂದಾಗುತ್ತಿದ್ದಾರೆ. ಅದರಂತೆ ಕಾಫಿ ತೋಟ ನಿರ್ಮಿಸಲು ಸಿ ಮತ್ತು ಡಿ ಜಾಗದಲ್ಲಿದ್ದ ಕುರುಚಲು ಕಾಡನ್ನು ಕಡಿದು ಪಾನವಾಳ ನೆಡಲು ಮುಂದಾಗಿದ್ದ ಗ್ರಾಮದ ಕೃಷ್ಣಪ್ಪ, ಜಗದೀಶ್ ಅವರುಗಳಿಗೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಜಂಟಿ ಸರ್ವೆಗೆ ಮುಂದಾಗಿದೆ.
ಈ ಬಗ್ಗೆ ಸ್ಥಳೀಯ ನಿವಾಸಿ ಸುಮಾ ಎಂಬವರು ಸೋಮವಾರಪೇಟೆಯ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗಿಡಮರಗಳನ್ನು ಕಡಿದು ತೋಟ ಮಾಡಲು ಗ್ರಾಮದ ಕೃಷ್ಣಪ್ಪ ಮತ್ತು ಜಗದೀಶ್ ಅವರುಗಳು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಅನ್ವಯ ಇಂದು ಸ್ಥಳಕ್ಕೆ ತೆರಳಿದ ಗಾರ್ಡ್ಗಳಾದ ಕಿರಣ್, ವಿಶ್ವ, ವಾಚರ್ ರಮೇಶ್ ಅವರುಗಳು, ಸಿ ಮತ್ತು ಡಿ ಜಾಗದಲ್ಲಿ ತೋಟ ಮಾಡಲು ಮುಂದಾಗಿದ್ದ ಸ್ಥಳದಲ್ಲಿ ನೆಟ್ಟಿದ್ದ ಪಾನವಾಳ ಗಿಡಗಳನ್ನು ಕಿತ್ತು, ಈರ್ವರಿಗೆ ಎಚ್ಚರಿಕೆ ನೀಡಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಡಿಆರ್ಎಫ್ಓ ರಾಕೇಶ್ ಅವರು, ತಾ. 15 ರಂದು ಸ್ಥಳಕ್ಕೆ ತೆರಳಿ ಜಂಟಿ ಸರ್ವೆ ಮಾಡಲು ಕ್ರಮಕೈಗೊಳ್ಳಲಾಗುವದು. ಅರಣ್ಯ ಇಲಾಖೆಯಿಂದ ಗಿಡಗಳನ್ನು ಬೆಳೆಸಲಾಗಿರುವ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತೆರವಿಗೆ ಕ್ರಮವಹಿಸಲಾಗುವದು ಎಂದು ತಿಳಿಸಿದ್ದಾರೆ.