ಸೋಮವಾರಪೇಟೆ, ಸೆ. 12: ಸಮೀಪದ ಮಾದಾಪುರ ಸರ್ಕಾರಿ ಶಾಲೆಯ ಆವರಣದಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗುತ್ತಿದ್ದು ಸಂಬಂಧಿಸಿದ ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊರೊನಾದಿಂದಾಗಿ ಶಾಲೆಗಳು ಪ್ರಾರಂಭವಾಗದ ಹಿನ್ನೆಲೆ ಸರ್ಕಾರಿ ಶಾಲೆಯ ಆವರಣ ಕೊಳಚೆಯ ಕೂಪವಾಗುತ್ತಿದೆ. ಕೆಲವರು ಶಾಲೆಯ ಆವರಣದಲ್ಲಿ ಕಸವನ್ನು ತಂದು ಸುರಿಯುತ್ತಿದ್ದು, ಇದೀಗ ಬೀಳುತ್ತಿರುವ ಮಳೆಗೆ ತ್ಯಾಜ್ಯ ಕೊಳೆಯಲಾರಂಭಿಸಿದೆ.

ಶಾಲಾ ಆವರಣದಲ್ಲಿ ಶೇಖರಣೆಯಾಗಿರುವ ತ್ಯಾಜ್ಯಕ್ಕೆ ಮುಕ್ತಿ ನೀಡಿ, ಸ್ವಚ್ಛ ಪರಿಸರ ನಿರ್ಮಿಸುವಂತೆ ಸ್ಥಳೀಯರು ಮಾದಾಪುರ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಜಾನ್ಸನ್ ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಜಾನ್ಸನ್ ಸೇರಿದಂತೆ ಸ್ಥಳೀಯರು ಎಚ್ಚರಿಸಿದ್ದಾರೆ.