ಭಾಗಮಂಡಲದ ಕಾಶೀಮಠವನ್ನು ಮೂಲ ಸಂಸ್ಥಾನದ ಗುರುಗಳ ಮಾರ್ಗ ದರ್ಶನದಲ್ಲಿ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಬರುವ ಹೊರಗಿನ ಯಾತ್ರಾರ್ಥಿಗಳ ಸಲುವಾಗಿ 1952 ರಲ್ಲಿ ಸ್ಥಾಪಿಸಲಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ
ಸಮಾಜ ಬಾಂಧವರು ಕ್ಷೇತ್ರಕ್ಕೆ ಬಂದಾಗ ತಂಗುವ ಸಲುವಾಗಿ 1952ಲ್ಲಿ 18 ಸೆಂಟ್ ಜಾಗ ಖರೀದಿಸಿ ಈ ಮಠ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಮಠವು ಈಗಿನ ಗುರುಗಳಾದ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಮಹಾ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿಯೊಂದಿಗೆ ಸಂಪೂರ್ಣ ನವೀಕರಣವಾಗಿದೆ. ಒಂದೊಮ್ಮೆ ಮಠದ ಹಿಂದಿನ ಗುರುಗಳಾಗಿದ್ದ ಪೂಜ್ಯ ಸುಕೃತೀಂದ್ರ ತೀರ್ಥ ಮಹಾ ಸ್ವಾಮೀಜಿಗಳು ತಿರುಚನಾಪಳ್ಳಿಯ ಕಾವೇರಿ ತಟದಲ್ಲಿ ದೀಕ್ಷೆ ಪಡೆದಿದ್ದ ನೆನಪಿನಲ್ಲಿ ಅವರ ಶಿಷ್ಯರಾಗಿದ್ದ ಶ್ರೀ ಸುಧೀಂದ್ರ ತೀರ್ಥರು ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಈ ಶಾಖಾಮಠ ಸ್ಥಾಪನೆಗೆ ಅಂದು ಒಲವು ತೋರಿದ್ದರಿಂದ ಇದು ಸಾಧ್ಯವಾಗಿದೆ. ಅಲ್ಲದೆ ಕಾಶೀಮಠದ ಮತ್ತೋರ್ವ ಹಿರಿಯ ಸ್ವಾಮೀಜಿ ಶ್ರೀ ಭುವನೇಂದ್ರ ತೀರ್ಥರು ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದುದರಿಂದ ಪ್ರಸ್ತುತ ಮಠದ ಮೂಲಕ ಇಂಥ ಆರ್ಯುರ್ವೇದ ಔಷಧಿಯುಕ್ತ ಗಿಡಮೂಲಿಕೆಗಳನ್ನು ಬೆಳೆಯುವಲ್ಲಿ ಕಾಳಜಿ ತೋರಲಾಗಿದೆ. ಈ ನಿಮಿತ್ತ ಬೆಂಗಳೂರಿನ ಉದ್ಯಮಿಗಳಾದ ದಯಾನಂದ ಪೈ ಹಾಗೂ ಸತೀಶ್‍ಪೈ ಸೋದರರು ಮಠಕ್ಕೆ ಸುಮಾರು 50 ಏಕರೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಹೀಗಾಗಿ ಇಲ್ಲಿ ಔಷಧಿಯುಕ್ತ ಗಿಡಮೂಲಿಕೆಗಳ ಉದ್ಯಾನದೊಂದಿಗೆ ಗೋಶಾಲೆ ಕೂಡ ಸ್ಥಾಪನೆಯಾಗಿದೆ.
ಜಾತ್ರೆಗೆ ಅನ್ನದಾನ: ದೇಶದ ಬೇರೆ-ಬೇರೆ ಮೂಲೆಗಳಿಂದ ಸಮಾಜ ಬಾಂಧವರು ತುಲಾ ಸಂಕ್ರಮಣ ಜಾತ್ರೆಯೊಂದಿಗೆ ಕಾವೇರಿ ಪವಿತ್ರ ತೀರ್ಥೋಧ್ಭವ ಸಂದರ್ಭ ಇಲ್ಲಿಗೆ ಬರುವಾಗ, ಒಂದು ತಿಂಗಳು ಭಾಗಮಂಡಲ ಕಾಶೀಮಠದಲ್ಲಿ ಅನ್ನದಾನವೂ ನಡೆಯಲಿದೆ. ಇದರೊಂದಿಗೆ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಕಾಶೀಮಠದ ಈ ಶಾಖೆ ಇತ್ತೀಚಿನ ವರ್ಷಗಳಲ್ಲಿ ಆಧುನೀಕರಣಗೊಂಡು ಪ್ರವರ್ಧಮಾನದೆಡೆಗೆ ಬೆಳೆಯುತ್ತಿದ್ದು; ಗುರುಗಳ ಮಾರ್ಗದರ್ಶನದಲ್ಲಿ ಮೈಸೂರಿನ ಉದ್ಯಮಿ ಜಗನ್ನಾಥ ಶೆಣೈ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ಆಡಳಿತ ಸಮಿತಿ ಈ ಮಠದ ಉಸ್ತುವಾರಿ ನಿರ್ವಹಿಸುತ್ತಿದೆ. ಎಂದು ಸಮಿತಿ ಕಾರ್ಯದರ್ಶಿ ಜೆ. ಗಣೇಶ್ ಶೆಣೈ ತಿಳಿಸಿದ್ದಾರೆ. ಕ್ಷೇತ್ರಕ್ಕೆ ಮಠದ ಗುರುಗಳು ಭೇಟಿಯಿತ್ತಾಗ ವಿಶೇಷ ಪೂಜೆ, ಸಮಾಜ ಬಾಂಧವರಿಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮಂತ್ರಾಕ್ಷತೆಯೂ ಇಲ್ಲಿ ಜರುಗಲಿದೆ.