ಕುಶಾಲನಗರ, ಸೆ. 12: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ ನೂತನ ವಾಣಿಜ್ಯ ಕಟ್ಟಡದ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡು ಕಾರಣಾಂತರಗಳಿಂದ ನೆನೆಗುದಿಗೆ ಬಿದ್ದಿದೆ.2020ರಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಬೇಕಿದ್ದ ಸಂಕೀರ್ಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದೆ. ಪಟ್ಟಣದ ಹೃದಯ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ಹಳೆಯ ಕಟ್ಟಡವನ್ನು, ವಾಣಿಜ್ಯ ಮಳಿಗೆಗಳನ್ನು ಕೆಡವಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಕೈಗೊಂಡ ಉದ್ದೇಶದಂತೆ 1.10 ಎಕರೆ ಪ್ರದೇಶದಲ್ಲಿ 4.95 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭವ್ಯ ಕಟ್ಟಡವೊಂದು ತಲೆ ಎತ್ತಬೇಕಿತ್ತು. ಆಡಳಿತ ಕಚೇರಿ ಕಾರ್ಯ ಸುಸೂತ್ರವಾಗಿ ಕೈಗೊಳ್ಳಲು ವ್ಯವಸ್ಥಿತ ಸ್ಥಳಾವಕಾಶದ ಕೊರತೆ ಹಾಗೂ ಜನಸಂಖ್ಯೆ ಆಧಾರಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿ ನೂತನ ಕಚೇರಿ ಕಟ್ಟಡ ಸೇರಿದಂತೆ ಸುಸಜ್ಜಿತ ವಾಣಿಜ್ಯ ಸಂಕೀರ್ಣ ವೊಂದನ್ನು ನಿರ್ಮಿಸಲು ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು 2019 ರ ಪ್ರಾರಂಭದಲ್ಲಿ ಕಾಮಗಾರಿ ಆರಂಭಗೊಂಡಿತ್ತು.

ಪಂಚಾಯ್ತಿಗೆ ಸೇರಿದ 22 ವಾಣಿಜ್ಯ ಮಳಿಗೆಗಳ ಹಲವು ಬಾಡಿಗೆದಾರರು ನ್ಯಾಯಾಲಯಕ್ಕೆ ಮೊರೆ ಹೋದ ಹಿನ್ನೆಲೆಯಲ್ಲಿ ಮಳಿಗೆಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಪಂಚಾಯ್ತಿಗೆ ತೊಡಕು ಉಂಟಾಗಿತ್ತು. ಇದೀಗ ಎಲ್ಲಾ ಅಡೆತಡೆಗಳನ್ನು ಎದುರಿಸಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದರೂ ಕೆಲವು ಅಂಗಡಿ ಮಾಲೀಕರು, ಕಾರು ನಿಲ್ದಾಣ ಇನ್ನೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾಮಗಾರಿಗೆ ತೊಡಕುಂಟಾಗಿದೆ ಎನ್ನಲಾಗಿದೆ.

ಪ್ರಸ್ತುತ ನೂತನ ವಾಣಿಜ್ಯ ಸಂಕೀರ್ಣ ಅಡಿಪಾಯ ಕಾರ್ಯ ಪ್ರಗತಿಯಲ್ಲಿದ್ದು, ಸೆಲ್ಲಾರ್, ನೆಲಮಹಡಿ ಮತ್ತು 1ನೇ ಅಂತಸ್ತು ಒಳಗೊಂಡ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇದರೊಂದಿಗೆ 61 ವಾಣಿಜ್ಯ ಮಳಿಗೆಗಳು ಕೂಡ ಈ ಕಟ್ಟಡ ಒಳಗೊಂಡಿದ್ದು ನೆಲ ಅಂತಸ್ತಿನಲ್ಲಿ 150 ಸಂಖ್ಯೆಯ ನಾಲ್ಕು ಚಕ್ರದ ವಾಹನಗಳ

(ಮೊದಲ ಪುಟದಿಂದ) ನಿಲುಗಡೆಗೆ ಸೆಲ್ಲಾರ್ ನಿರ್ಮಿಸಿ ಸ್ಥಳಾವಕಾಶ ಒದಗಿಸಲಾಗಿದ್ದು ಇದರಲ್ಲಿ 25 ರಿಂದ 30 ಟ್ಯಾಕ್ಸಿಗಳಿಗೆ ಕೂಡ ನೂತನ ಕಟ್ಟಡದಲ್ಲಿ ಸ್ಥಳ ಮೀಸಲಿರಿಸಲಾಗಿದೆ. ಈ ಸಂಬಂಧ ಕಾರು ಮಾಲೀಕರು ಚಾಲಕರ ಸಂಘದ ಪ್ರತಿನಿಧಿಗಳೊಂದಿಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಚರ್ಚಿಸಿದ್ದು ಪ್ರಸಕ್ತ ನಿಲ್ದಾಣ ತೆರವುಗೊಳಿಸಿದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಬಾಡಿಗೆದಾರರು ಕೂಡ ಕಾಮಗಾರಿ ನಡೆಸಲು ತಕರಾರು ಇರುವುದಿಲ್ಲ ಎಂದು ಇತ್ತೀಚೆಗಷ್ಟೆ ನಡೆದ ಕ್ಷೇತ್ರ ಶಾಸಕರ ನೇತೃತ್ವದ ಸಭೆಯಲ್ಲಿ ಇಂಗಿತ ವ್ಯಕ್ತವಾಗಿದೆ. ಕುಶಾಲನಗರ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಇತರ ಕಾಮಗಾರಿಗಳು ಸೇರಿದಂತೆ ಪ.ಪಂ. ವಾಣಿಜ್ಯ ಸಂಕೀರ್ಣ ಕಾಮಗಾರಿ ಕೂಡ ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ನೆನೆಗುದಿಗೆ ಬಿದ್ದಿರುವ ಪ.ಪಂ. ವಾಣಿಜ್ಯ ಸಂಕೀರ್ಣದ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸು ವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಪ.ಪಂ. ಸದಸ್ಯ ಬಿ. ಅಮೃತ್‍ರಾಜ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದೀಗ ಬಾಡಿಗೆದಾರರ ಕಾರು ನಿಲ್ದಾಣದ ವಿವಾದ ಮುಕ್ತಾಯ ಗೊಂಡು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಬೃಹತ್ ವಾಣಿಜ್ಯ ಸಂಕೀರ್ಣ ಕಾಮಗಾರಿ ಮತ್ತೆ ಕೈಗೆತ್ತಿಕೊಳ್ಳುವು ದರೊಂದಿಗೆ ಕೂಡಲೇ ಲೋಕಾರ್ಪಣೆಗೊಳ್ಳಬೇಕೆನ್ನುವುದು ಸ್ಥಳೀಯರ ಆಶಯವಾಗಿದೆ.