ಸೋಮವಾರಪೇಟೆ,ಸೆ.12: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಟರ್ಫ್ ಮೈದಾನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಳೆಯ ನಡುವೆಯೂ ಕೆಲಸ ನಿರ್ವಹಿಸಲಾಗುತ್ತಿದೆ. ಈಗಾಗಲೇ ಮೈದಾನದಲ್ಲಿ ಶೀತ ಹೆಚ್ಚಿದ್ದು, ಕಾಮಗಾರಿ ಕಳಪೆಯಾಗುವ ಆತಂಕ ಸೃಷ್ಟಿಯಾಗಿದೆ ಎಂದು ಕ್ರೀಡಾಭಿಮಾನಿಗಳು ತಿಳಿಸಿದ್ದಾರೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸಿಂಥೆಟಿಕ್ ಟರ್ಫ್ ಕಾಮಗಾರಿಗೆ 3 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ಮೈದಾನದಲ್ಲಿ ಜಲ್ಲಿ, ವೆಟ್‍ಮಿಕ್ಸ್ ಹಾಕಲಾಗಿದೆ. ಜಲ್ಲಿಕಲ್ಲುಗಳ ಮೇಲೆ ಸ್ಟ್ರೇ ಮಾಡಲಾಗಿದ್ದು, ಇದರ ಮೇಲೆ ಡಾಂಬರು ಹಾಕಿದರೆ ಯಾವದೇ ಕಾರಣಕ್ಕೂ ಉಳಿಯುವದಿಲ್ಲ. ಇದೀಗ ಮಳೆ ಬೀಳುತ್ತಿದ್ದರೂ ತರಾತುರಿಯಲ್ಲಿ ಕೆಲಸ ಮುಗಿಸಲು ಗುತ್ತಿಗೆದಾರರು ಮುಂದಾಗಿದ್ದಾರೆ ಎಂದು ಕ್ರೀಡಾಭಿಮಾನಿಗಳು ಆರೋಪಿಸಿದ್ದಾರೆ.

ಮೈದಾನದಲ್ಲಿ ಮಳೆಯ ನೀರು ಶೇಖರಣೆಗೊಂಡಿದ್ದು, ಕಲ್ಲುಮಣ್ಣು ಮಿಶ್ರಣವಾಗಿ ಕೆಸರಿನಂತಾಗಿದೆ. ಇಂತಹ ಸಂದರ್ಭದಲ್ಲಿ ಡಾಂಬರು ಹಾಕಿದರೆ ಉಳಿಯುವದಿಲ್ಲ. ಈ ಹಿನ್ನೆಲೆ ಮಳೆ ಮುಗಿದ ನಂತರ ಡಾಂಬರು, ಮ್ಯಾಟ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.