ಸೋಮವಾರಪೇಟೆ, ಸೆ. 12: ಪರವಾನಗಿ ಇಲ್ಲದೇ ಕೋವಿ ಹೊಂದಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿ, ಸೋಮವಾರಪೇಟೆ ಪೊಲೀಸ್ ಠಾಣೆಗೆ ಪ್ರಕರಣ ಹಸ್ತಾಂತರಿಸಿದ್ದಾರೆ.ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ನಿವಾಸಿಗಳಾದ ಹೆಚ್.ಕೆ. ಅಜಿತ್, ಹೆಚ್.ಸಿ. ದೇವರಾಜು, ಹೆಚ್.ಪಿ. ಧನಂಜಯ್, ಸಿ.ಎನ್. ದೀಪಕ್ ಅವರುಗಳ ವಿರುದ್ಧ, ತಮ್ಮ ಹೆಸರಿನಲ್ಲಿ ಯಾವದೇ ಪರವಾನಗಿ ಇಲ್ಲದಿದ್ದರೂ ಕೋವಿಗಳನ್ನು ಇಟ್ಟುಕೊಂಡಿದ್ದ ಆರೋಪದ ಮೇರೆ ಮೊಕದ್ದಮೆ ದಾಖಲಿಸಲಾಗಿದೆ. ನಿನ್ನೆ ದಿನ ಮಾರುತಿ ಕಾರಿನಲ್ಲಿ ನಾಲ್ವರು ಆರೋಪಿಗಳು ಮೂರು ಕೋವಿಗಳೊಂದಿಗೆ ಬೇಳೂರು ಬಾಣೆಯ ಬಳಿಯಲ್ಲಿದ್ದ ಸಂದರ್ಭ ಅರಣ್ಯ ಸಂಚಾರಿ ದಳದ ಠಾಣಾಧಿಕಾರಿ ಅಪ್ಪಾಜಿ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ದೊರೆತ 3 ಕೋವಿಗಳೂ ಬೇರೆಯವರ ಪರವಾನಗಿಯಲ್ಲಿದ್ದು, ಇವರುಗಳು ಅಕ್ರಮವಾಗಿ ಬಂದೂಕು ಹೊಂದಿದ್ದುದು ದೃಢಪಟ್ಟಿದೆ.

ನಾಲ್ವರು ಆರೋಪಿಗಳ ಸಹಿತ ಡಬಲ್ ಬ್ಯಾರೆಲ್‍ನ 3 ಕೋವಿ, 10 ಗುಂಡುಗಳು, 1 ಕತ್ತಿ, 2 ಟಾರ್ಚ್, ಮಾರುತಿ 800 ಕಾರನ್ನು ಸೋಮವಾರಪೇಟೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ತನಿಖೆ ಮುಂದುವರೆಸಿದ್ದಾರೆ.