ಮಡಿಕೇರಿ, ಸೆ. 12: ದಕ್ಷಿಣ ಕೊಡಗಿನ ಮಾಕುಟ್ಟ ಮಾರ್ಗವಾಗಿ ಕೇರಳದ ಕಣ್ಣೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೂಟುಹೊಳೆ ಸೇತುವೆ ಕಾಮಗಾರಿಗೆ ಕೇಂದ್ರ ಸರಕಾರದ ಹಸಿರು ನ್ಯಾಯ ಮಂಡಳಿ ಹಸಿರು ನಿಶಾನೆ ತೋರಿದೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಪ್ರಸ್ತಾವನೆ ಅಡಿಯಲ್ಲಿ ಈಗಾಗಲೇ ಅಪೂರ್ಣ ಹಂತದಲ್ಲಿರುವ ಸೇತುವೆ ಕಾಮಗಾರಿ ಪೂರೈಸಲು ಸಮ್ಮತಿ ಲಭಿಸಿದೆ.

ಕೊಡಗಿನ ಗಡಿಯಂಚಿನಲ್ಲಿರುವ ಕೂಟುಹೊಳೆಯ ಮಧ್ಯ ಭಾಗವು ಕರ್ನಾಟಕ ಹಾಗೂ ಕೇರಳ ಸರಹದ್ದಿನ ಪ್ರದೇಶವಾಗಿದೆ. ಕೇರಳ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ಈ ಹಿಂದೆಯೇ ಸೇತುವೆ ನಿರ್ಮಾಣ ಕಾಮಗಾರಿ ನದಿಯ ಮಧ್ಯ ಭಾಗದ ತನಕ ಸಾಗಿತ್ತು. ಆದರೆ ಕೊಡಗಿಗೆ ಸಂಪರ್ಕ ಕಲ್ಪಿಸುವ ಮಾಕುಟ್ಟ ರಸ್ತೆಗೆ ಈ ಕಾಮಗಾರಿ ಮುಂದುವರೆಯಲು ಗಡಿ ಹಾಗೂ ಮೀಸಲು ಅರಣ್ಯ ಪ್ರದೇಶದ ಸರಹದ್ದಿನಿಂದ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಉನ್ನತ ಮಟ್ಟದಲ್ಲಿ ಪರಿಶೀಲನೆಯೊಂದಿಗೆ ಇದೀಗ ಮೊದಲ ಹಂತದ ಯೋಜನೆಗೆ ಅನುಮೋದನೆ ಸಿಕ್ಕಿದೆ.

ಹೀಗಾಗಿ ಬ್ರಹ್ಮಗಿರಿ ವನ್ಯಧಾಮ ಪ್ರದೇಶದಲ್ಲಿರುವ ಕೆರೆಟಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಮಾಕುಟ್ಟ ರಸ್ತೆಗೆ ಸಂಪರ್ಕ ಸಾಧಿಸುವ ಈ ಸೇತುವೆ ಪೂರ್ಣಗೊಳಿಸಲು 01.77 ಹೆಕ್ಟೇರ್ ಜಾಗ ಕಲ್ಪಿಸುವಂತಾಗಿದೆ. ಈ ಜಾಗಕ್ಕೆ ಕೇಂದ್ರ ಸರಕಾರ ನಿಗದಿಗೊಳಿಸುವ ಮೌಲ್ಯವನ್ನು ಕೇರಳ ಸರಕಾರ ಕರ್ನಾಟಕ ಅರಣ್ಯ ಇಲಾಖೆಗೆ ಪಾವತಿಸಬೇಕಿದೆ ಎಂದು ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ಕೇಂದ್ರದ ಹಸಿರು ಪೀಠ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಷರತ್ತುಗಳಿಗೆ ಒಳಪಟ್ಟು ಕೇರಳ ಸರಕಾರ ತನ್ನ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕವಷ್ಟೇ ಕೂಟುಹೊಳೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಅವಕಾಶ ದೊರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಮಾರ್ಗ: ಕೊಡಗು ಸೇರಿದಂತೆ ಕರ್ನಾಟಕ ಹಾಗೂ ಕೇರಳ ನಡುವೆ ನಿರಂತರ ಸಂಪರ್ಕಕ್ಕೆ ಕೂಟುಹೊಳೆ ಸೇತುವೆ ನಿರ್ಮಾಣ ಅತ್ಯಗತ್ಯವಾಗಿದ್ದು, ಜಿಲ್ಲೆಯ ಜನತೆ ಅವಿನಾಭಾವ ಸಂಬಂಧ ಹೊಂದಿರುವ ದೇವಾಲಯಗಳಾದ ಬೈತೂರಪ್ಪ,

(ಮೊದಲ ಪುಟದಿಂದ) ಪಯ್ಯವೂರು, ತಳಿಪರಂಬು ಮುಂತಾದೆಡೆ ಜರುಗುವ ವಾರ್ಷಿಕ ಉತ್ಸವಗಳಿಗೆ ಈ ಮಾರ್ಗ ಮುಖ್ಯವೆಂದು ಸಂಬಂಧಿಸಿದ ಗ್ರಾಮಸ್ಥರು ಮತ್ತು ತಕ್ಕಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ 1928 ರಲ್ಲಿ ಕೂಟುಹೊಳೆಗೆ ಅಡ್ಡಲಾಗಿ ಬ್ರಿಟಿಷರು

ನಿರ್ಮಿಸಿರುವ ಹಳೆಯ ಸೇತುವೆ ತೀರಾ ಕಿಷ್ಕಿಂಧೆಯಾಗಿದ್ದು,

ಶಿಥಿಲಗೊಂಡು ಅಪಾಯದಲ್ಲಿರುವ ಕಾರಣ; ನೂತನ ಪರ್ಯಾಯ ಸೇತುವೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕಿದೆ ಎಂದು ಅವರುಗಳು ಆಶಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ: ಅಲ್ಲದೆ ಪ್ರಸ್ತುತ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ರೂಪುಗೊಂಡಿರುವ ಮಟ್ಟನೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಮಾರ್ಗ ಸಂಪರ್ಕ ಕಲ್ಪಿಸುವುದರಿಂದ ಎಲ್ಲ ರೀತಿ ಹೆದ್ದಾರಿ ಅಭಿವೃದ್ಧಿಯೊಂದಿಗೆ ಕೂಟುಹೊಳೆ ಸೇತುವೆ ಸಹಕಾರಿಯಾಗಿದ್ದು, ಅನೇಕ ವರ್ಷಗಳಿಂದ ನೆನೆಗುದಿಯಲ್ಲಿರುವ ಕಾಮಗಾರಿ ಪೂರೈಸುವಂತಾಗಲಿ ಎಂದು ಆಶಿಸಿದ್ದಾರೆ.