ಜೀವನದಿ ಕಾವೇರಿಯು ತಲಕಾವೇರಿಯಿಂದ ಕೆಳಗೆ ಇಳಿದು ನಾಗತೀರ್ಥವನ್ನು ದಾಟಿ ಭಾಗಮಂಡಲಕ್ಕೆ ಹರಿದು ಬರುತ್ತಾಳೆ. ಅಲ್ಲಿ ಅವಳೊಡನೆ ಕನಕೆ ಸುಜ್ಯೋತಿಯರು ಸಂಗಮವಾಗುತ್ತಾರೆ. ತ್ರಿವೇಣಿ ಸಂಗಮವು ಭಾಗಮಂಡಲದಲ್ಲಿ ದಕ್ಷಿಣ ಪ್ರಯಾಗ ಎಂಬ ಹೆಸರು ಪಡೆದಿದೆ. ಭಾಗಮಂಡಲ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ, ಭಗಂಡ ಋಷಿಗಳು ತಪಸ್ಸನ್ನಾಚರಿಸಿದ ಪುಣ್ಯ ತಾಣವೆಂದು ಸ್ಕಾಂದ ಪುರಾಣದಲ್ಲಿದೆ. ಭಗಂಡ ಮುನಿಗಳು ಪ್ರತಿಷ್ಠಾಪಿಸಿದ ಶಿವಲಿಂಗ ಶ್ರೀ ಭಗಂಡೇಶ್ವರ ಎಂದಾಗಿದೆ. ಯಾತ್ರಾರ್ಥಿಗಳು ಕಾವೇರಿಯ ಜನ್ಮಸ್ಥಳವಾದ ತಲಕಾವೇರಿಗೆ ಮುಂದುವರಿಯುವುದಕ್ಕೆ ಮುಂಚಿತವಾಗಿ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಿ ತಮ್ಮ ಪೂರ್ವಜರ ಕುರಿತಾದ ಕರ್ಮಾಚರಣೆಗಳನ್ನು ನಿರ್ವಹಿಸುವುದು ಒಂದು. ಪರಿಪಾಠವಾಗಿದೆ. ವ್ಯಕ್ತಿ ಸತ್ತ ನಂತರ ಮಾಡುವ 12ನೇ ದಿನ ಅಥವಾ ಕೆಲವರಿಗೆ 16 ನೇ ದಿನದಲ್ಲಿ ಮಾಡುವ ಒಂದು ಸಂಸ್ಕಾರ ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಈ ವಿಧಾನ ಸಾಮಾನ್ಯ ಪರಿಪಾಠವಾಗಿದೆ. ಪೂರ್ವಜರಿಗೆ (ಪಿತೃ) ವಿಶೇಷವಾಗಿ ಒಬ್ಬರು ಮೃತ ಹೆತ್ತÀವಂಗೆ ಗೌರವಾರ್ಪಣೆ ಸಲ್ಲಿಸುವ ಕ್ರಿಯಾವಿಧಿ, ಮೃತ ವ್ಯಕ್ತಿಗಳ ವಂಶದಲ್ಲಿ ಹುಟ್ಟಿದುದರ ಪ್ರಯುಕ್ತ ಅವರಿಂದ ಪಡೆದ ಸಹಾಯ ಹಾಗೂ ಮಾನವರಾಗಿ ಹುಟ್ಟಲು ಕಾರಣೀಭೂತ ರಾದ್ದರಿಂದ ಋಣ ಪರಿಹಾರಕ್ಕೆ ಕೃತಜ್ಞತೆಗಾಗಿ ಮಾಡುವ ಶ್ರಾದ್ಧವನ್ನು ಇದೇ ತ್ರಿವೇಣಿ ಸಂಗಮದಲ್ಲಿ ಕೇಶಮುಂಡನ ಮಾಡಿಸಿ ಅಥವಾ ವಿಧಿವಿಧಾನ ಪೂರೈಸುತ್ತಾರೆ. ಇದಕ್ಕಾಗಿ ಪ್ರಸ್ತುತ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಗೊತ್ತು ಪಡಿಸಿದ ವೈದಿಕ ಅಥವಾ ಆಗÀಮಿಕರು ಮಂತ್ರಪೂರ್ವಕವಾಗಿ ಅಕ್ಕಿಹುಡಿ ಅಥವಾ ಅನ್ನದಿಂದ ಪಿಂಡದಾನ ಮಾಡುವ ಮೂಲಕ ಗತಿಸಿದ ಪೂರ್ವಜರಿಗೆ ಆಹಾರದ ಮೂಲಕ ಗೌರವಾರ್ಪಣೆ ಸಲ್ಲಿಸುತ್ತಾರೆ. (ಇದನ್ನೇ ಶ್ರಾದ್ಧವೆನ್ನುತ್ತಾರೆ.) ಕೆಲವು ಅಸ್ತಿ ಸಂಚಯನವನ್ನು ವಿಧಿಪೂರ್ವಕ ಮಾಡುತ್ತಾರೆ. ಬೂದಿಯನ್ನು ನಿಗದಿ ಪಡಿಸಿದ ನೀರಿನ ತಾಣಕ್ಕೆ ಹಾಕುವರು. ಮುಷ್ಟಿಗಾತ್ರದ ಅಥವಾ ಚಿಕ್ಕದಾದ ಉಂಡೆ (ಪಿಂಡ)ಗಳನ್ನು ಮಾಡಿ ಸಲ್ಲಿಸುವರು. ಇನ್ನೂ ಕೆಲವರು ಎಳ್ಳು ಕರಿಎಳ್ಳು ಮೂಲಕ-ತಿಲ ಹೋಮ ಮೂಲಕ ಪಿಂಡ ಪ್ರದಾನ ಮಾಡುವವರೂ ಇದ್ದಾರೆ. ಈ ಕ್ಷೇತ್ರದಲ್ಲಿ ತಿಂಗಳ ಸಂಕ್ರಮಣದಂದೂ ಕೂಡಾ ಹಲವರು ಪಿಂಡ ಪ್ರದಾನ ಮಾಡುತ್ತಾರೆ. ಕೆಲವರು ಪಿತೃಪಕ್ಷವಾದ ಮಹಾಲಯ ಪಕ್ಷ-ಮಹಾಲಯ ಅಮಾವಾಸ್ಯೆಯಂದು ವಿಶೇಷವಾಗಿ ಮಾಡುತ್ತಾರೆ. ಇನ್ನು ವೈದಿಕರು ತರ್ಪಣವನ್ನು ನೀಡಿ ತಮ್ಮ ಪೂರ್ವಜರಿಗೆ ಗೌರವವನ್ನು ಸಲ್ಲಿಸುತ್ತಾರೆ. ಇನ್ನೂ ಕೆಲವರು ವಾರ್ಷಿಕ ಶ್ರಾದ್ಧವನ್ನು ಮಾಡುತ್ತಾರೆ. ವಾರ್ಷಿಕ ಶ್ರಾದ್ಧವನ್ನು ಮಾಡುವುದರಿಂದ ಪಿತೃಲೋಕದಲ್ಲಿರುವವರಿಗೆ ಶಕ್ತಿಯುಂಟಾಗುತ್ತ ದೆಂದು ಹೇಳುತ್ತಾರೆ. ಭೂಲೋಕದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಅವರನ್ನು ಸ್ಮರಿಸಿದರೆ ಮತ್ತೆ ಒಂದು ವರ್ಷ ಅವರಿಗೆ ಪಿತೃಲೋಕ ಪ್ರಾಪ್ತಿಯಾಗುವುದೆಂದು ನಂಬಿಕೆ ಇದೆ.

ಹಿಂದೂ ಧರ್ಮದಲ್ಲಿ ಹೇಳಿದಂತೆ, ದೇವಋಣ, ಋಷಿಋಣ, ಪಿತೃಋಣ ಹಾಗೂ ಸಮಾಜ ಋಣ ಈ ನಾಲ್ಕು ಋಣಗಳನ್ನು ತೀರಿಸುವುದು. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ಶ್ರಾದ್ಧ ಮಾಡುವುದು ಅಗತ್ಯವಾಗಿರುತ್ತದೆ. ಇತರ ಸಂಸ್ಕಾರದಂತೆ ಶ್ರಾದ್ಧ ಸಂಸ್ಕಾರವು ಅತ್ಯವಶ್ಯಕವಾಗಿದೆ. ಪಿತೃಗಳು ಸೂಕ್ಷ್ಮ ಆತ್ಮಸ್ವರೂಪ ದಲ್ಲಿರುತ್ತಾರೆ. ಶ್ರಾದ್ಧವನ್ನು ಮಾಡುವುದರಿಂದ ಆಯುಷ್ಯ, ಯಶಸ್ಸು, ಸ್ವರ್ಗ ಕೀರ್ತಿ, ಪುಷ್ಟಿಬಲ, ಲಕ್ಷ್ಮೀ, ಪಶು, ಸೌಖ್ಯ, ಧನ, ಧಾನ್ಯ ಇವು ಲಭ್ಯವಾಗುತ್ತವೆ ಎನ್ನುವ ನಂಬಿಕೆಯಿದೆ. ವೈದಿಕರು ತ್ರಿವೇಣಿ ಸಂಗಮದಲ್ಲಿ ಸಂಕಲ್ಪ ಸ್ನಾನವನ್ನು ಮಾಡುತ್ತಾರೆ.

? ಸಂಪತ್‍ಕುಮಾರ್ ಎಸ್. ಎಸ್. ಭಾಗಮಂಡಲ.