ಕೂಡಿಗೆ, ಸೆ. 12: ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ಸರಕಾರಿ ಜಮೀನಿನಲ್ಲಿರುವ ಸಾರ್ವಜನಿಕ ಕೆರೆಗಳ ಒತ್ತುವರಿ ತೆರವುಗೊಳಿಸಿ ಜಲಮೂಲ ಸಂರಕ್ಷಣೆಗೆ ಅಗತ್ಯ ಗಮನ ಹರಿಸುವಂತೆ ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯು ಆಯಾ ಜಿಲ್ಲಾ ಆಡಳಿತಕ್ಕೆ ಆದೇಶಿಸಿದೆ. ಆ ಮೇರೆಗೆ ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆ ಇತರ ಅಧಿಕಾರಿಗಳು ಜಂಟಿಯಾಗಿ ಇದೀಗ ಕೆರೆಗಳ ಮಾಹಿತಿ ಕಲೆಹಾಕುತ್ತಿದೆ.ಕೊಡಗಿನ ಮೂರು ತಾಲೂಕು ಗಳಲ್ಲಿ ಈ ರೀತಿಯಾಗಿ ಒತ್ತುವರಿ ಯಾಗಿರುವ ನೂರಾರು ಕೆರೆಗಳಿದ್ದು, ಸಾರ್ವಜನಿಕ ಉಪಯೋಗದಲ್ಲಿದ್ದ ಅಂತಹ 70ಕ್ಕೂ ಅಧಿಕ ಕೆರೆಗಳು ಇತ್ತೀಚಿನ ವರ್ಷಗಳಲ್ಲಿ ಒತ್ತುವರಿ ಗೊಂಡಿರುವ ಆರೋಪವಿದೆ. ಈ ಸಂಬಂಧ ಪ್ರಸ್ತುತ ಜಂಟಿ ಸರ್ವೆ ನಡೆಯುತ್ತಿದೆ. ಸರಕಾರದಿಂದ ಆದೇಶ ಜಾರಿ ಗೊಂಡಿರುವ ಬೆನ್ನಲ್ಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ತಾಲೂಕು ವಾರು ಮಾಹಿತಿ ಸಂಗ್ರಹಿಸುವುದ ರೊಂದಿಗೆ, ಕೆರೆಗಳ ಸರ್ವೆ ನಡೆಸಿ, ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಸ್ವಾಧೀನಕ್ಕೆ ನೀಡುವುದರೊಂದಿಗೆ ಕೆರೆಗಳ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಅಂತೆಯೇ ಜಿಲ್ಲೆಯ ಮೂರು ತಾಲೂಕುಗಳಲ್ಲಿನ ಜಿಲ್ಲಾ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧೀನಕ್ಕೆ ಒಳಪಡಲಿರುವ ಕೆರೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಮಾತ್ರವಲ್ಲದೆ, ವಿವಿಧ ಗ್ರಾ.ಪಂ. ವ್ಯಾಪ್ತಿ ಯಲ್ಲಿನ ಗೋಮಾಳಗಳಿಗೆ ಸಂಬಂಧಿಸಿ ದಂತೆ ಸಾರ್ವಜನಿಕ ಕೆರೆಗಳನ್ನು ಪತ್ತೆ ಹಚ್ಚಿ ಒತ್ತುವರಿ ತೆರವುಗೊಳಿಸಿ ಅಯಾ ಗ್ರಾ.ಪಂ.ಗಳ ಸ್ವಾಧೀನಕ್ಕೆ ನೀಡಲಾಗುತ್ತಿದೆ.ಹೆಬ್ಬಾಲೆ, ತೊರೆನೂರುವಿನಲ್ಲಿ ತೆರವು ಕುಶಾಲನಗರ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ ತೊರೆನೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯವು ತಹಶೀಲ್ದಾರರ ಆದೇಶದಂತೆ ಕುಶಾಲನಗರ ಕಂದಾಯ ಇಲಾಖೆಯ ಮುಖೇನ ನಡೆಯಿತು.
ಕುಶಾಲನಗರ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಮರೂರು ಗ್ರಾಮದ ಸರ್ವೆ ನಂಬರ್ 7ರಲ್ಲಿ 7.18 ಎಕರೆ ಪ್ರದೇಶವನ್ನು ಸರ್ವೆ ನಡೆಸಿ ಕೆರೆ ಒತ್ತುವರಿ ಜಾಗ ಗುರುತಿಸಿದೆ. ಅದರಂತೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರದ ಸರ್ವೆ ನಂಬರ್ 6ರಲ್ಲಿ 0.56 ಎಕರೆ ಮತ್ತು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಸರ್ವೆ ನಂಬರ್ 23/2 1.42 ಎಕರೆಯಷ್ಟು ಪ್ರದೇಶವನ್ನು ಸರ್ವೆ ನಡೆಸಿ ಒತ್ತುವರಿ ಆಗಿದ್ದ ಜಾಗವನ್ನು ತೆರವುಗೊಳಿಸಿದೆ. ನಂತರ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ವತಿಯಿಂದ ಜಾಗವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ಕಂದಾಯ ಇಲಾಖೆಯ ಪರಿವೀಕ್ಷಣಾ ಅಧಿಕಾರಿ ಮಧುಸೂದನ್. ಗ್ರಾಮ ಲೆಕ್ಕಾಧಿಕಾರಿಗಳಾದ ಸಚಿನ್, ಪೀರೋಜ್, ಉಷಾ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಕೇಶ್, ಸಂತೋಷ್, ಹರೀಶ್ ಸೇರಿದಂತೆ ಸರ್ವೆ ಅಧಿಕಾರಿ ಯೋಗೇಶ್
ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಈ ಪ್ರಕ್ರಿಯೆ ಜಿಲ್ಲೆಯೆಲ್ಲೆಡೆ ಇನ್ನಷ್ಟೇ ಆರಂಭವಾಗಲಿದೆ.