ಕೊಡವತಿಯರ ಆಭರಣಗಳು ಮತ್ತು ಕಾವೇರಿಯ ಸಂಬಂಧ : [ಈ ಮಾಹಿತಿ ಕೊಟ್ಟವರು ದಿ|| ಶ್ರೀಮತಿ ಚೆಪ್ಪುಡಿರ ಬೊಳ್ಳವ್ವ ಪಿ. ಯಂ. ಪೂಣಚ್ಚನವರ ಅಣ್ಣನ ಪತ್ನಿ ರಾ|ಬ| ಪಾಂಡಂಡ ಚಂಗಪ್ಪ ನವರ ಮಗಳು ದಿ|| ‘ಶಕ್ತಿ’ ಗೋಪಾಲಕೃಷ್ಣರವರ ಪರಮಾಪ್ತೆ, ತುಂಬಾ ದೈವಭಕ್ತೆ]

ತಲಕಾವೇರಿಯಲ್ಲಿ ಏಳು ಋಷಿಗಳು ತಪಸ್ಸು ಮಾಡಿದುದರ ಕುರುಹಾಗಿ ಏಳು ಗುಂಡಿಗಳಿವೆ. ಈ ಮಹರ್ಷಿಗಳ ಆಶೀರ್ವಾದ ಸರ್ವಕಾಲಕ್ಕೂ ಇರಲೆಂದು ಬೇಡುತ್ತಾ ಕಾವೇರಮ್ಮ ಮದುವೆಯಾಗಿ ಹೋಗುವ ಕೊಡವತಿ ಕನ್ಯೆಯರಿಗೆ ಈ ಕೆಳಗಿನಂತೆ ಆಭರಣಗಳನ್ನು ನಿಗದಿ ಮಾಡಿದ್ದಾಳೆ. (1) ತಲೆಗೆ 7 ಆಭರಣಗಳು (2) ಕಿವಿಗೆ 7 ಆಭರಣಗಳು (3) ಕೊರಳಿಗೆ 7 ಆಭರಣಗಳು (4) ಕೈಗೆ 7 ಆಭರಣಗಳು (5) ಕಾಲಿಗೆ 7 ಆಭರಣಗಳು.

ಈ ಮೇಲಿನಂತೆ ಆಭರಣ ತೊಟ್ಟು ಹೂವಿನ ಹಾರ ಹಾಕಿಕೊಂಡು ಕಾವೇರಿಯನ್ನು ಸದಾ ನೆನೆದು ಬೇಡಬೇಕೆಂದು ಮಾತು ಕೊಟ್ಟಿದ್ದಾಳೆ. ಈ ಪ್ರತಿಯೊಂದು ಆಭರಣವು ಪ್ರಕೃತಿಗೆ ಸಂಬಂಧ ಪಟ್ಟಂತೆ, ಹಣ್ಣು, ಹೂವು, ಸೂರ್ಯ, ಚಂದ್ರ, ನಕ್ಷತ್ರ ಮತ್ತು ದೇವತೆಗಳನ್ನು ಹೋಲುವಂತವುಗಳು.

ತಲೆಗೆ : ಚೌರಿಕೊತ್ತ್, 23 ಚಿನ್ನದ ಗಂಟೆಮಣಿ, ಕೊಳಿಕೆ, ಸೂರ್ಯಮುಖಿ, ಚಂದ್ರಮುಖಿ, ಜಡೆನಾಗ, ಜಡೆಕೊತ್ತ್.

ಕಿವಿಗೆ : 7 ಹರಳಿನ ಮಾಲೆ, ಮಾಟ್‍ಲ್, ಝುಮುಕಿ, ಕೊಂಡೋಳ, ಮುರಾವು, ಬುಗ್‍ಡಿ, ನಕ್ಷತ್ರಾಕೃತಿಯ ಚಿಕ್ಕ ಓಲೆ.

ಕತ್ತಿಗೆ (ಕೊರಳು) : ಮೂರೆಳೆಯ ಕರಿಮಣಿಸರ ಹವಳ ಪೋಣಿಸಿದ್ದು, ಪತ್ತಾಕ್, ಅಡ್ಡಿಗೆ, ಕೊಕ್ಕೆತಾತಿ, ಜೋಮಾಲೆ, ಚಂಗೋಲೆ ಕಾಸ್‍ಮಾಲೆ,

ಕೈಗೆ : ಜೋಡಿ ಕಡಗ-[ಗಂಡು ಹೆಣ್ಣು ಒಂದಾಗಿ ಬಾಳಬೇಕೆಂಬ ಸಂಕೇತ] ಜೋಡಿ ಅಪ್ಪೆಬಳೆ-ಹಲಸಿನ ಹಣ್ಣಿನ ರೂಪದ ವಜ್ರಚೂಡಿ ಬಳೆ, ನಾಲ್ಕು ಒಂದಾಗಿ ಇರುವ ಪಿಂಬಳೆ (ಪಿರಿಬಳೆ) ಮೀನಿನ ರೂಪದ ಬಳೆ, ಕಪ್ಪು ದಾರದಲ್ಲಿ ಪೋಣಿಸಿದ ಒಂದು ಚಿನ್ನದ ಹೂ, ಕಣ್ಣುರೆಪ್ಪೆ ಬಳೆ. [ಒಟ್ಟು 7 ಜತೆಗೆ ಕೆಂಪು ಅಥವಾ ಗಾಜಿನ ಬಳೆ.]

ಕಾಲಿಗೆ : ಕಾಪಿಲ್ಲಿ, ಗಂಟೆಚೈನು, ಬಾದಾಮಿ ಆಕೃತಿಯ ಗೊಲಸ್, ಪಾಡ್‍ಗ, ವಂಕಿ ಕಾಲು ಚೈನು, ಕಾಲುಂಗುರ.

ಕನ್ನಿಕುಂಡ್ : ಇದೊಂದು ಹೊಸ ಸೇರ್ಪಡೆಯೋ ತಿಳಿಯದು. ನಾಲ್ಕು ವರ್ಷಗಳಿಂದ ತುಂಬಾ ಕೇಳಿ ಬಂದ ವಿಷಯ. ಚೇರಂಗಾಲ ಗ್ರಾಮದಲ್ಲಿರುವ ನೀರಿನ ಗುಂಡಿ. ಯಾವುದೇ ಬರವಣಿಗೆಯಲ್ಲಾಗಲೀ, ಕೊಡವ ಜಾನಪದ ಹಾಡಿನಲ್ಲಾಗಲೀ ಇದರ ಪ್ರಸ್ತಾಪವಿಲ್ಲ. ಶಂಕರ ನಾರಾಯಣ ಭಟ್ಟರ ಕಾವೇರಿ ವೈಭವದಲ್ಲೂ ಕಾಣುತ್ತಿಲ್ಲ. ಒಟ್ಟಿನಲ್ಲಿ ಕೊಡವರಿಗೂ, ಕಾವೇರಿಗೂ ಅವಿನಾಭಾವ ಸಂಬಂಧವಿರು ವುದು ಸತ್ಯ.

ಭಾಗಮಂಡಲದ ಸುತ್ತಮುತ್ತ ಹಿಂದೆ ಎಂದರೆ ಕ್ರಿ.ಶ. 1785ಕ್ಕೆ ಮೊದಲು ನೆಲೆಸಿದ್ದ ಪ್ರಧಾನ ಕೊಡವ ಕುಟುಂಬಗಳು (1) ಮಂಡಿರ (2) ಮಣವಟ್ಟಿರ (3) ಕುಂಬೆರ (4) ಕುಟ್ಟೇಟಿರ (5) ಉದಿಯಂಡ (6) ಕೋಡಿರ ಎಂಬ 6 ಕುಟುಂಬಗಳು ಎಂಬದು ಹಿರಿಯರ ಮಾತು. ಇದಕ್ಕೆ ಪೂರಕವಾಗಿ ಈಗ ಗೌಡ ಮನೆತನಗಳಾದ ಉದಿಯನ, ಕುಂಬೆ ಮತ್ತು ಕೋಡಿ ಕುಟುಂಬಗಳಿವೆ. ಕೋಡಿ ಮನೆತನ ತಕ್ಕರಾಗಿಯೂ ಇದ್ದಾರೆ. ದೊಡ್ಡ ವೀರ ರಾಜನ ಕಾಲದಲ್ಲಿ 1792 ರಿಂದ ಪರಿವರ್ತನೆಗಳು ಎನ್ನುತ್ತಾರೆ.