ಮಡಿಕೇರಿ, ಸೆ. 11: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬದೊಂದಿಗೆ ಗೋಣಿಕೊಪ್ಪಲು ಜನೋತ್ಸವವನ್ನು ಪ್ರಸಕ್ತ ಕೊರೊನಾ ಸೋಂಕಿನ ಆತಂಕದ ನಡುವೆ ಯಾವ ರೀತಿಯಲ್ಲಿ ಆಚರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತದಿಂದ ಆಯಾ ದಸರಾ ಸಮಿತಿ ಪ್ರಮುಖರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವದು ಒಳಿತು ಎಂದು ಮಡಿಕೇರಿ ಕ್ಷೇತ್ರದ ಶಾಸಕಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ ಈ ಕುರಿತು ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಶಾಸಕರು, ಪರಂಪರೆಯಿಂದ ನಡೆದುಕೊಂಡು ಬಂದಿರುವ ಕರಗ ದೇವತೆಗಳ ಪೂಜೆ ಹಾಗೂ ಇತರ ದೈವಿಕ ಕೈಂಕರ್ಯಗಳನ್ನು ಸರಳವಾಗಿ ಆಡಂಬರವಿಲ್ಲದೆ ಆಚರಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುವದು ಅವಶ್ಯಕವೆಂದು ನುಡಿದರು. ಆ ದಿಸೆಯಲ್ಲಿ ಸರಕಾರದಿಂದ ಅನುದಾನ ಕುರಿತಾಗಿಯೂ ಸಭೆಯಲ್ಲಿ ಸೂಕ್ತ ತೀರ್ಮಾನ ಬಳಿಕ ಸರಕಾರದ ಗಮನ ಸೆಳೆಯಲಾಗುವದು ಎಂದು ಮಾರ್ನುಡಿದರು.

ಕೆ.ಜಿ.ಬೋಪಯ್ಯ ಆಶಯ : ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ.ಬೋಪಯ್ಯ ಅವರು ಈ ಬಗ್ಗೆ ಅನಿಸಿಕೆ ಹಂಚಿಕೊಳ್ಳುತ್ತಾ, ಈಗಿನ ಕೊರೊನಾ ಸೋಂಕು ಆತಂಕದ ನಡುವೆ ದಸರಾ ನಾಡಹಬ್ಬವನ್ನು ಯಾವದೇ ಆಡಂಬರವಿಲ್ಲದೆ ಸಾಂಪ್ರದಾಯಿಕ ಪೂಜೆ ಹಾಗೂ ಧಾರ್ಮಿಕ ಪರಂಪರೆಗೆ ಭಂಗ ಬಾರದಂತೆ ಆಚರಿಸುವಂತಾಗಬೇಕು ಎಂದು ನುಡಿದರು.

ಅಲ್ಲದೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಬಳಿಕ ಸರಕಾರದಿಂದ ಅನುದಾನ ಪಡೆಯುವ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವದು ಎಂದು ಅವರು

ಪ್ರತಿಕ್ರಿಯೆ ನೀಡಿದರು. ಗೋಣಿಕೊಪ್ಪಲು ದಸರಾ ಕುರಿತಾಗಿಯೂ ಪ್ರಮುಖರ ಸಭೆ ಬಳಿಕವೇ ತೀರ್ಮಾನ ಕೈಗೊಳ್ಳಲಾಗುವದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.(ಮೊದಲ ಪುಟದಿಂದ)

ವೀಣಾ ಅಚ್ಚಯ್ಯ ನಿಲುವು : ಮಡಿಕೇರಿ ದಸರಾ ನಾಡಹಬ್ಬವನ್ನು ಈ ಹಿಂದಿನ ಪರಂಪರೆಯಂತೆ ಕರಗ ಪೂಜೆಯೊಂದಿಗೆ ಸಂಪ್ರದಾಯ ಬದ್ಧವಾಗಿ ಆಚರಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ಅಭಿಪ್ರಾಯ ನೀಡಿದ ಅವರು ಆಡಂಬರ ರಹಿತ ಸರಳವಾಗಿ ದೇವತಾ ಕಾರ್ಯಗಳನ್ನು ಪ್ರತಿವರ್ಷದಂತೆ ಮುಂದುವರಿಸುವದು ಸೂಕ್ತವೆಂದು ನೆನಪಿಸಿದರು.

ಅಲ್ಲದೆ ಜಿಲ್ಲಾಡಳಿತ ಹಾಗೂ ಸರಕಾರದಿಂದ ನಾಡಹಬ್ಬದ ಕರಗ ಉತ್ಸವ ಮತ್ತು ದೇವತಾ ಕಾರ್ಯಗಳಿಗೆ ಅನುದಾನ ಕೂಡ ಕಲ್ಪಿಸಬೇಕಿದ್ದು, ನವರಾತ್ರಿಯ ಉತ್ಸವಗಳಿಗೆ ಭಂಗವಾಗದಂತೆ ಅವಶ್ಯಕ ಕ್ರಮ ತೆಗೆದುಕೊಳ್ಳಬೇಕೆಂದು ಆಶಿಸಿದರು.

ಎಂ.ಪಿ. ಸುನಿಲ್ ಸುಬ್ರಮಣಿ : ಇನ್ನೋರ್ವ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಪ್ರತಿಕ್ರಿಯಿಸುತ್ತಾ, ರಾಜಪರಂಪರೆಯ ಕಾಲದಿಂದ ನಡೆದುಕೊಂಡು ಬಂದಿರುವ ಕರಗ ಉತ್ಸವದೊಂದಿಗೆ ಸಾಂಪ್ರದಾಯಿಕ ಪದ್ಧತಿ ಮುಂದುವರಿಯಬೇಕೆಂದು ಸ್ಪಷ್ಟಪಡಿಸಿದರು. ಕೊರೊನಾ ನಡುವೆ ಯಾವದೇ ಕಾನೂನಿನ ತೊಡಕು ಉಂಟಾಗದಂತೆ ದೇವತಾ ಕಾರ್ಯಗಳನ್ನು ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಡಿ ಮುನ್ನಡೆಸುವಂತಾಗಲಿದೆ ಎಂದು ಆಶಿಸಿದರು. ಸರಕಾರದಿಂದ ದಸರಾ ನಾಡಹಬ್ಬಕ್ಕೆ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಜಿಲ್ಲಾಡಳಿತದ ಪ್ರಸ್ತಾವನೆ ಅನುಸರಿಸಿ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಅವರು ಮಾರ್ನುಡಿದರು. ಎಲ್ಲವೂ ಸಭೆಯಲ್ಲಿ ಚರ್ಚೆಯೊಂದಿಗೆ ತೀರ್ಮಾನ ಆಗಬೇಕಿದೆ ಎಂದು ಸುನಿಲ್ ಒತ್ತಿ ಹೇಳಿದರು.