ಚೆಟ್ಟಳ್ಳಿ, ಸೆ. 11 : ಕರ್ನಾಟಕ ಮುಸ್ಲಿಂ ಜಮಾಅತ್‍ನ ಸೋಮವಾರಪೇಟೆ ತಾಲೂಕು ಸಮಿತಿಯ ಕಾರ್ಯಕಾರಿಣಿ ಸಭೆ ಏಳನೇ ಹೊಸಕೋಟೆಯ ಶಾದಿ ಮಹಲ್‍ನಲ್ಲಿ ಸಮಿತಿಯ ಅಧ್ಯಕ್ಷ ಪಿ.ಎಂ. ಅಬ್ದುಲ್ ಲತೀಫ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮಿತಿಯ ಉಪಾಧ್ಯಕ್ಷ ನೌಶಾಧ್ ಝುಹರಿ ಪ್ರಾರ್ಥನೆ ನೆರವೇರಿಸಿದರು. ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಕಾರ್ಯಕ್ರಮ ನಿರೂಪಿಸಿದರು.

ಸೋಮವಾರಪೇಟೆ ತಾಲೂಕಿನ ಪ್ರಮುಖ ಪಟ್ಟಣಗಳನ್ನು ಗುರುತಿಸಿ ಹೊಸದಾಗಿ ಬ್ಲಾಕ್ ಅನ್ನು ಮಾಡಿ ಸಮಿತಿಯನ್ನು ರಚನೆ ಮಾಡುವಂತೆ ತೀರ್ಮಾನಿಸಲಾಯಿತು. ತಾ.17 ರಂದು ಸುಂಟಿಕೊಪ್ಪ ಬ್ಲಾಕ್, 24ರಂದು ಸೋಮವಾರಪೇಟೆ ಬ್ಲಾಕ್ ಹಾಗೂ ಅಕ್ಟೋಬರ್ 1 ರಂದು ಕುಶಾಲನಗರ ಬ್ಲಾಕ್ ಸಭೆಯನ್ನು ನಡೆಸುವಂತೆ ನಿರ್ಧರಿಸಲಾಯಿತು.

ಪ್ರತಿ ಮೊಹಲ್ಲಾದಲ್ಲಿ ನಮ್ಮ ಯುವಕರು ಮಾದಕವಸ್ತುವಿನ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಾಗೃತಿಯನ್ನುಂಟು ಮಾಡುವಂತೆ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಳುಗೋಡು ಜಮಾಅತ್ತಿನ ಬಡ ಹೆಣ್ಣುಮಗಳ ವಿವಾಹಕ್ಕೆ ಸಮಿತಿ ವತಿಯಿಂದ ಧನಸಹಾಯವನ್ನು ಒದಗಿಸಿಕೊಡುವಂತೆ ತೀರ್ಮಾನಿಸಲಾಗಿತ್ತು. ಸಮಿತಿ ವತಿಯಿಂದ ಸಮಾಜಮುಖಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುವುದು, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡುವ ದಿಸೆಯಲ್ಲಿ ಕರೆ ನೀಡಿದರು.