ಮಡಿಕೇರಿ, ಸೆ. 11: ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಸದೃಢವಾದ ನವ ಭಾರತ ನಿರ್ಮಾಣಕ್ಕೆ ಬದ್ಧವಾಗಬೇಕಿದೆ ಎಂದು ಭಾರತೀಯ ವಾಯುದಳದ ನಿವೃತ್ತ ತಂತ್ರಜ್ಞ ಕುಕ್ಕೇರ ಜಯ ಚಿಣ್ಣಪ್ಪ ಅವರು ಕರೆ ನೀಡಿದರು.

ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನದ ಭಾಗವಾಗಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಎನ್‍ಸಿಸಿ ಘಟಕ ಹಾಗೂ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಸಹಯೋಗದಲ್ಲಿ ಶುಕ್ರವಾರ ನಡೆದ ವೆಬಿನಾರಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಶೇಕಡಾ 30 ರಷ್ಟು ಜನರು ಸ್ಥೂಲಕಾಯದ ಸಮಸ್ಯೆ ಎದುರಿಸುತ್ತಿದ್ದು, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಲು ಅನುವುಮಾಡಿಕೊಡುತ್ತದೆ ಎಂದು ವಿವರಿಸಿದರು.

ಈ ಹಿಂದಿನ ಕಾಲದಲ್ಲಾದರೆ ಜನರು ಸುಮಾರು ಏಳೆಂಟು ಕಿ.ಮೀ ಕಾಲ್ನಡಿಗೆಯಲ್ಲೇ ಕ್ರಮಿಸಿ ಜೀವನ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಆರೋಗ್ಯವೂ ಉತ್ತಮವಾಗಿತ್ತು. ಆದರೀಗ ಆಧುನಿಕ ಜೀವನ ಶೈಲಿಯಿಂದಾಗಿ ಜೀವನ ಮಟ್ಟ ಸುಧಾರಿಸಿದೆಯಾದರೂ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.

19ನೇ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಮಾತನಾಡಿ, ಮೊಬೈಲ್ ಫೋನ್ ಹೆಚ್ಚಾಗಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು. ಇದೀಗ ಕೋವಿಡ್ 19ರ ಸಂಕಷ್ಟದಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಅತಿಯಾದ ಮೊಬೈಲ್ ಬಳಕೆ ಅನಿವಾರ್ಯವಾಗಿದೆಯಾದರೂ, ಆದಷ್ಟು ನಿಯಂತ್ರಣದಲ್ಲಿಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸಿ.ಜಗತ್ ತಿಮ್ಮಯ್ಯ, ಆಧುನಿಕ ಜೀವನ ಶೈಲಿಯಿಂದ ಮಧ್ಯವಯಸ್ಕರಲ್ಲಿ ಬೊಜ್ಜು ಹೆಚ್ಚಾಗುತ್ತಿದ್ದು, ಇದು ಹಲವಾರು ಕಾಯಿಲೆಗಳಿಗೆ ದಾರಿಮಾಡಿಕೊಡುತ್ತಿದೆಯಲ್ಲದೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಪರೋಕ್ಷವಾಗಿ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತೀದಿನ ವ್ಯಾಯಾಮ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್‍ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ್. ಬಿ, ದೇಹದ ಆರೋಗ್ಯ ಮತ್ತು ಮನಸ್ಸಿಗೆ ನಿಕಟ ಸಂಬಂಧವಿದ್ದು, ಉತ್ತಮ ಆರೋಗ್ಯ ಉತ್ತಮ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಅನುವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿದಿನದ ವ್ಯಾಯಾಮ ಅತ್ಯಗತ್ಯ ಎಂದು ತಿಳಿಸಿದರು.

ವೆಬಿನಾರಿಗೆ ತಾಂತ್ರಿಕ ನೆರವನ್ನು ಎಂಬಿಎ ಟ್ರಾವೆಲ್ ಎಂಡ್ ಟೂರಿಸಂ ವಿಭಾಗದ ಯೋಗಾನಂದ.ಜಿ.ಕೆ, ಶರತ್ ಮತ್ತು ವಾಣಿಜ್ಯ ವಿಭಾಗದ ಆಯುಶ್.ಜಿ.ಕೆ ಅವರು ನೀಡಿದ್ದರು. ಕೋವಿಡ್ 19 ಸಂಕಷ್ಟದಲ್ಲಿ ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಎನ್‍ಸಿಸಿ ಕೆಡೆಟ್‍ಗಳು ಫಿಟ್ ಇಂಡಿಯಾ ಅಭಿಯಾನದ ಪ್ರಮಾಣವಚನ ಸ್ವೀಕರಿಸಿದರು.

ಸುಮಾರು ನೂರೈವತ್ತಕ್ಕೂ ಅಧಿಕ ಮಂದಿ ಆನ್‍ಲೈನ್ ಕಾರ್ಯಕ್ರಮ ಭಾಗವಹಿಸಿದ್ದರು. ಅಂತಿಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕೆಡೆಟ್ ಪ್ರಜ್ಞಾ ಸಿ.ಜಿ, ಯೋಗ ಪ್ರಾತ್ಯಕ್ಷಿಕೆ ನೀಡಿದರು. ಇದರಿಂದಾಗುವ ಅನುಕೂಲಕರ ಅಂಶಗಳನ್ನು ದ್ವಿತೀಯ ವಿಜ್ಞಾನ ವಿಭಾಗದ ಕೆಡೆಟ್ ಪ್ರತೀಕ್ಷಾ ಸಿ.ಐ ವಿವರಿಸಿದರು.