ಸೋಮವಾರಪೇಟೆ, ಸೆ. 10: ತಾಲೂಕಿನಾದ್ಯಂತ ಕಾಫಿ ಫಸಲು ನೆಲಕ್ಕಚ್ಚಿದ್ದು, ಎಲ್ಲರಿಗೂ ಸಮಾನ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಬೆಳೆಗಾರರ ಸಂಘ, ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳು ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ವಿಪರೀತ ಗಾಳಿ-ಮಳೆಯಿಂದಾಗಿ ಮರಗಳು ಬಿದ್ದು ತೋಟದಲ್ಲಿ ಗಿಡಗಳು ಹಾಳಾಗಿವೆ. ಕಾಫಿ ಫಸಲು ಉದುರಿ ಹೋಗಿ ಬಹಳಷ್ಟು ನಷ್ಟ ಉಂಟಾಗಿದ್ದು, ಬೆಳೆ ನಷ್ಟ ಪರಿಹಾರ ವಿತರಿಸುವಾಗ ಜಿಲ್ಲೆಯ ಕೆಲವು ಹೋಬಳಿ, ಗ್ರಾಮಗಳನ್ನು ಮಾತ್ರ ಪರಿಗಣಿಸುತ್ತಿರುವದು ಸರಿಯಲ್ಲ ಎಂದು ಅಭಿಪ್ರಾಯಿಸಿದೆ.
ಪ್ರಸ್ತುತ ವರ್ಷ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಬಿಸಿಲಿನ ಶಾಖ ಹೆಚ್ಚಾಗಿ ಬೋರರ್ ಹಾವಳಿ ಹೆಚ್ಚಾಗಿದೆ. ಹೂ ಮಳೆ ಸಹ ಸರಿಯಾಗಿ ಆಗದ್ದರಿಂದ ಗಿಡದಲ್ಲಿ ಮೊಗ್ಗು ಕರಟಿ ಹೋಗಿದೆ. ಅಧಿಕಾರಿಗಳು ಈ ಎಲ್ಲಾ ವಿಷಯಗಳನ್ನು ನಷ್ಟವೆಂದು ಪರಿಗಣಿಸಿ, ಬೆಳೆಗಾರರಿಗೆ ಸಮಾನವಾಗಿ ಪರಿಹಾರ ನೀಡಬೇಕೆಂದು ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಆಗ್ರಹಿಸಿದ್ದಾರೆ.