ಕೂಡಿಗೆ, ಸೆ. 10: ಜಿಲ್ಲೆಯ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದೆಂದು ಅನೇಕ ರೈತರು ಕಳೆದ ಹತ್ತು ವರ್ಷಗಳಿಂದ ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೆಳೆದಿದ್ದಾರೆ. ಆದರೆ ಬೆಳೆ ಕುಸಿತದಿಂದ ಜಿಲ್ಲೆಯ ನೂರಾರು ಶುಂಠಿ ಬೆಳೆದ ರೈತರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಕಷ್ಟ ಪಟ್ಟು ಶುಂಠಿ ಬೆಳೆಯನ್ನು ಬೆಳೆದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಪರಿಣಾಮ ಶುಂಠಿ ಬೆಳೆಯನ್ನು ಸಾಗಾಟ ಮಾಡಲು ಮಧ್ಯವರ್ತಿ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಶುಂಠಿ ಮೂಟೆಗೆ (60 ಕೆ.ಜಿ.) ಸಾಧಾರಣವಾಗಿ 1,500 ರೂ. ಇರುತ್ತಿತು. ಆದರೆ ಈ ಬಾರಿ ಕೇವಲ ರೂ. 750ಕ್ಕೆ ಮಾರಾಟವಾಗುತ್ತಿದೆ. ಶುಂಠಿ ಬೆಳೆಯನ್ನು ತೆಗೆದುಕೊಂಡು ಹೋಗಲು ಬಾರದ ಮಾರಾಟದ ಮಧ್ಯವರ್ತಿಗಳು ಒಂದೆಡೆ ಆದರೆ ವಿಪರೀತ ಮಳೆಯಿಂದಾಗಿ ಶುಂಠಿ ಬೆಳೆ ಅನೇಕ ರೋಗಗಳಿಗೆ ಕಾಡುತ್ತಿವೆ.
ಶುಂಠಿಯ ಬೀಜಕ್ಕೆ ಅಧಿಕ ಬೆಲೆಯನ್ನು ಕೊಟ್ಟು ಬೇರೆ ಜಿಲ್ಲೆಗಳಿಂದ ತಂದು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಬೇಸಾಯ ಮಾಡಿದ್ದಾರೆ. ಎಲ್ಲಾ ಸಹಕಾರ ಸಂಘಗಳಲ್ಲಿ ಹಾಗೂ ಇತರೆ ಸಂಸ್ಥೆಗಳಲ್ಲಿ ಸಾಲವನ್ನು ಪಡೆದಿದ್ದಾರೆ. ಇದನ್ನು ಮರುಪಾವತಿ ಮಾಡಲು ಭಾರೀ ಕಷ್ಟವೆಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ನೂರಾರು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕುಶಾಲನಗರ ಹೋಬಳಿ ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ಧಲಿಂಗಪುರ, ಬಾಣವಾರ, ಗುಡ್ಡೆಹೂಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಳೆಯಿಂದಾಗಿ ಶುಂಠಿಯು ಗದ್ದೆಗಳಲ್ಲಿ ಕೊಳೆತು ಬೀಳುತ್ತಿದ್ದು, ರೈತರು ಭಾರೀ ನಷ್ಟವನ್ನು ಅನುಭವಿಸಬೇಕಾದ ಪ್ರಸಂಗ ಎದುರಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ