ಸೋಮವಾರಪೇಟೆ,ಸೆ.11: ಶೀತಮಯ ವಾತಾವರಣ, ಆಗಾಗ್ಗೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ತಾಲೂಕಿನ ಶಾಂತಳ್ಳಿ ಹೋಬಳಿ ಸೇರಿದಂತೆ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಲಕ್ಕಿ ಬೆಳೆಗೆ ಕೊಳೆರೋಗ ಬಾಧಿಸಿದೆ. ಇದರೊಂದಿಗೆ ಕಾಫಿ, ಶುಂಠಿ ಕೃಷಿಯೂ ನಷ್ಟಗೊಳ್ಳುತ್ತಿದ್ದು, ರೈತಾಪಿ ವರ್ಗ ಪ್ರಸಕ್ತ ವರ್ಷವೂ ಫಸಲು ನಷ್ಟ ಅನುಭವಿಸುವ ಭೀತಿಯಲ್ಲಿದೆ.
ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಪುಷ್ಪಗಿರಿ ಬೆಟ್ಟತಪ್ಪಲಿನ ಗ್ರಾಮಗಳಲ್ಲಿ ಪ್ರಸಕ್ತ ವರ್ಷ ದಾಖಲೆಯ ಮಳೆಯಾಗಿದೆ. ಈ ವ್ಯಾಪ್ತಿಯ ಬೆಂಕಳ್ಳಿ, ಹೆಗ್ಗಡಮನೆ, ಕುಂದಳ್ಳಿ, ಜಕ್ಕನಳ್ಳಿ, ಕುಡಿಗಾಣ, ಕೊತ್ನಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಶಾಂತಳ್ಳಿ, ಮಲ್ಲಳ್ಳಿ, ಬೀದಳ್ಳಿ, ನಾಡ್ನಳ್ಳಿ ಗ್ರಾಮಗಳಲ್ಲಿ ಏಲಕ್ಕಿ ಬೆಳೆಗೆ ಕೊಳೆರೋಗ ಬಾಧಿಸಿದ್ದು, ಇದ್ದ ಅಲ್ಪಸ್ವಲ್ಪ ಫಸಲೂ ನಷ್ಟಗೊಳ್ಳುತ್ತಿದೆ. ಕೊಳೆರೋಗಕ್ಕೆ ತುತ್ತಾದ ಏಲಕ್ಕಿ ಗಿಡಗಳು ಕೊಳೆಯಲಾರಂಭಿಸಿದ್ದು, ಗಿಡಗಳೂ ಸಾಯುತ್ತಿವೆ.
ಇದರೊಂದಿಗೆ ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕೊಳೆ ರೋಗದಿಂದ ಅರೇಬಿಕಾ ಕಾಫಿ ಗಿಡದಲ್ಲಿü ಕಾಯಿಗಳು ಉದುರುತ್ತಿವೆ. ವಿಪರೀತ ಶೀತದಿಂದ ಕಾಫಿ ಗಿಡದ ರೆಕ್ಕೆಗಳು ಕೊಳೆತು, ಎಲೆಗಳು ಉದುರಿ ಗಿಡಗಳು ರೋಗಪೀಡಿತವಾಗುತ್ತಿವೆ.
ಕುಮಾರಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಮಲ್ಲಳ್ಳಿ, ಹರಗ, ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ ಮಂಕ್ಯಾ ಗ್ರಾಮಗಳಲ್ಲಿ 130 ಇಂಚಿಗೂ ಅಧಿಕ ಮಳೆ ಸುರಿದಿದ್ದು, ನದಿ ತೊರೆÀಗಳು ಉಕ್ಕಿ ಹರಿಯುವದರೊಂದಿಗೆ, ಅಲ್ಲಲ್ಲಿ ಜಲದ ನೀರು ಹರಿಯುತ್ತಿದ್ದು, ಶೀತದಿಂದ ಫಸಲು ನಾಶವಾಗಿದೆ. ಏಲಕ್ಕಿ ತಂಡೆಗಳು ಕೊಳೆರೋಗ ಹಾಗೂ ಕಟ್ಟೆರೋಗಕ್ಕೆ ತುತ್ತಾಗಿವೆ. ಅನೇಕ ಗ್ರಾಮಗಳಲ್ಲಿ ಭತ್ತದ ಗದ್ದೆಗಳಲ್ಲಿ ನೀರು ಆವೃತ್ತವಾಗಿದ್ದು, ನಾಟಿಯಾದ ಸಸಿಯೂ ಕೊಳೆಯುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಸುರಿಯುತ್ತಿರುವದರಿಂದ ಕೊಳೆರೋಗ ವ್ಯಾಪಕವಾಗಿ ಹರಡುವ ಸಂಭವವಿದ್ದು, ನೆರಳು ಹೆಚ್ಚಾಗಿರುವ ತೋಟಗಳಲ್ಲಿ ಮರಗಳ ಜೋಲು ರೆಕ್ಕೆಗಳನ್ನು ತೆಗೆದು, ಗಾಳಿ, ಬೆಳಕು ಹರಡುವಂತೆ ಮಾಡಬೇಕು. ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಗಿಡಗಳ ಸುತ್ತಲಿನ ತರಗು ಹೊದಿಕೆಯನ್ನು ತೆಗೆಯಬೇಕು. ಕಾಫಿ ಗಿಡಗಳ ಮೇಲೆ ಸಿಲ್ವರ್ ಮರದ ಎಲೆಗಳು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು ಎಂದು ಕಾಫಿ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಕಾಫಿ ಗಿಡಗಳಲ್ಲಿರುವ ಹೆಚ್ಚಿನ ಚಿಗುರನ್ನು ತೆಗೆದು, ಗಿಡದ ನೆತ್ತಿಗಳನ್ನು ಬಿಡಿಸಬೇಕು. ರೋಗ ಬಾಧಿತ ಗಿಡಗಳ ಭಾಗವನ್ನು ಸ್ವಚ್ಛ ಮಾಡಬೇಕು. ರೋಗಕ್ಕೆ ತುತ್ತಾದ ಎಲೆ, ರೆಕ್ಕೆ, ಕಾಯಿಗಳನ್ನು ತೋಟದಿಂದ ಹೊರಹಾಕಬೇಕು ಎಂದು ಬೆಳೆಗಾರರಿಗೆ ಸಲಹೆಯಿತ್ತಿದ್ದಾರೆ.
ಶಾಂತಳ್ಳಿ, ಸುಂಟಿಕೊಪ್ಪ, ಶನಿವಾರಸಂತೆ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಕೃಷಿಗೆ ಕೊಳೆರೋಗ ತಗುಲಿದೆ. ಇದೀಗ ಶುಂಠಿಯ ಬೆಲೆ ಇಳಿಕೆಯಾಗಿದ್ದರೂ ಸಹ ಬೇರೆ ದಾರಿಯಿಲ್ಲದೇ ಶುಂಠಿಯನ್ನು ಕಿತ್ತು ಮಾರಾಟ ಮಾಡುತ್ತಿದ್ದಾರೆ.
ಸೋಮವಾರಪೇಟೆಯಲ್ಲಿ 6,900 ಹೆಕ್ಟೇರ್ನಲ್ಲಿ ಅರೇಬಿಕಾ, 400 ಹೆ.ನಲ್ಲಿ ರೋಬಸ್ಟಾ ಸೇರಿದಂತೆ 7,300 ಹೆ.ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಶನಿವಾರಸಂತೆಯಲ್ಲಿ 6,740ಹೆ. ನಲ್ಲಿ ಅರೇಬಿಕಾ, 270ಹೆ.ನಲ್ಲಿ ರೋಬಸ್ಟಾ ಸೇರಿದಂತೆ 7,010 ಹೆ. ಕಾಫಿ ಬೆಳೆಯಲಾಗಿದೆ.
ಸುಂಟಿಕೊಪ್ಪದಲ್ಲಿ 6,660ಹೆ.ನಲ್ಲಿ ಅರೇಬಿಕಾ ಮತ್ತು 3,820ಹೆ. ರೋಬಸ್ಟಾ ಸೇರಿದಂತೆ ಒಟ್ಟು 10,480 ಹೆ., ಮಾದಾಪುರದಲ್ಲಿ 2,600ಹೆ. ಅರೇಬಿಕಾ ಮತ್ತು 1200ಹೆ. ರೋಬಸ್ಟಾ, ಸೇರಿದಂತೆ 3,800 ಹೆಕ್ಟೇರ್ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಉಳಿದ ಭಾಗಗಳಲ್ಲೂ ಅಲ್ಲಲ್ಲಿ ರೋಗಬಾಧೆ ಕಾಣಿಸಿಕೊಂಡಿದ್ದು, ರೋಗ ಹತೋಟಿಗೆ ಪ್ರಯತ್ನ ಮುಂದುವರಿದಿದೆ. ಸಾಮೂಹಿಕ ಹತೋಟಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಳೆಗಾರರು ನಷ್ಟದಿಂದ ಪಾರಾಗಬೇಕೆಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊಳೆರೋಗ ಪೀಡಿತ ಗಿಡಗಳ ಎಲ್ಲಾ ಕಾಯಿ, ಎಲೆ, ರೆಕ್ಕೆಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಹೂಳಬೇಕು. 200ಲೀಟರ್ ನೀರಿಗೆ 120 ಗ್ರಾಂ. ಬೆವಿಸ್ಟಿನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಒಂದು ಏಕರೆ ತೋಟಕ್ಕೆ ಒಂದು ಚೀಲ ಯೂರಿಯಾ ಗೊಬ್ಬರ ಎರಚಬೇಕು. ಹೆಚ್ಚಿನ ಮಾಹಿತಿಗಾಗಿ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಸಲಹೆ ನೀಡಿದ್ದಾರೆ.