ಮರಗೋಡು, ಸೆ. 11: ಆ ವ್ಯಕ್ತಿ ಬೆಳ್ಳಂಬೆಳಗ್ಗೆ ತನ್ನ ನೆಚ್ಚಿನ ಬುಲೆಟ್ ಬೈಕ್ ಹತ್ತಿ ತನ್ನ ಮೂರು ವರ್ಷದ ಮಗನನ್ನ ಕುಳ್ಳಿರಿಸಿಕೊಂಡು ಅಂಗಳದಲ್ಲಿ ಮೂರು ರೌಂಡ್ ಹೊಡೆದಿದ್ದಾರೆ. ಬಳಿಕ ಮಗುವನ್ನ ಬಿಟ್ಟು ಮರಗೋಡು ಹೊರಟಿದ್ದಾರೆ. ಹಾಗೇ ಗಾಳಿಗೆ ಮುಖವೊಡ್ಡಿ ಹಾಯಾಗಿ ಬರುತ್ತಿರಬೇಕಾದರೆ ಬೈಕಿನ ಹ್ಯಾಂಡಲ್ ಬಳಿ ಏನೋ ಚಲಿಸಿದ ಅನುಭವ...! ನೋಡಿದರೆ ತಮ್ಮ ಕೈಯ ಬಳಿಯಲ್ಲೇ ಬುಸ್ ಬುಸ್ ಹಾವೊಂದು ಮೆಲ್ಲನೆ ತಲೆ ಹೊರ ಹಾಕಿ ನೋಡುತ್ತಿದೆ. ‘ಅಯ್ಯೋ ದೇವ್ರೇ’ ಅಂತ ಕಿರುಚುತ್ತಲೇ ಬ್ರೇಕ್ ಒದ್ದು ಬೈಕನ್ನ ಬಿಟ್ಟು ನೆಲಕ್ಕೆ ಹಾರಿದ್ದಾರೆ. ಬೈಕ್ ನೆಲಕ್ಕೆ ವಾಲಿದೆ. ನೋಡಿದ್ರೆ ಸುಮಾರು ಐದಡಿ ಉದ್ದದ ಮರಹಾವು ಇವರತ್ತಲೇ ಲುಕ್ ಕೊಡುತ್ತಿದೆ...!
‘ಯಾಕೆ ಬೈಕ್ ನಿಲ್ಲಿಸಿದ್ರಿ, ಇನ್ನೊಂದು ರೌಂಡ್ ಹೋಗೋಣ ಬನ್ನಿ’ ಅಂತ ಹಾವು ಕರೆದ ಹಾಗಿತ್ತಂತೆ. ಸೀನ್ ನೋಡಿ ಅವರಿಗೆ ಹೃದಯ ಬಾಯಿಗೆ ಬಂದಿದೆ.
ಆ ಹಾವು ಅದ್ಯಾವಾಗ ಬೈಕ್ ಒಳಗೆ ಸೇರಿ, ಅದೆಲ್ಲಿ ಸುರುಟಿ ಮಲಗಿತ್ತೋ ಏನೋ...? ಬೈಕ್ ಚಲಿಸಿ ಎಷ್ಟೋ ಹೊತ್ತಾದ ಮೇಲೆ ಹೊರಕ್ಕೆ ಬಂದು ಪೆÇೀಸ್ ಕೊಟ್ಟಿದೆ. ಸ್ವಲ್ಪ ಹೊತ್ತಿನ ಬಳಿಕ ಆ ಹಾವು ಏನೂ ತೊಂದರೆ ಮಾಡದೆ ಇಳಿದು ಹೋಗಿದೆ. ಬೈಕ್ ಮಾಲೀಕ ಅಬ್ಬಾ... ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಅಂದ ಹಾಗೆ ಹಾವಿಗೆ ಬೈಕಿನಲ್ಲಿ ಫ್ರೀ ರೈಡ್ ಕೊಟ್ಟವರು ಮರಗೋಡಿನ ಬಡುವಂಡ್ರ ದುಷ್ಯಂತ್.
ಎಲ್ಲರೂ ಬೈಕ್, ಕಾರ್ ಹತ್ತುವ ಮೊದಲು ಒಮ್ಮೆ ನಿಮ್ಮ ವಾಹನವನ್ನ ಪರೀಕ್ಷಿಸಿಕೊಳ್ಳಿ. ಹಾವು ಏನು ಮಾಡದೇ ಇದ್ದರೂ, ಹಾವು ಕಂಡ ಭಯದಲ್ಲಿ ಏನು ಅನಾಹುತ ಆಗುತ್ತೋ ಯಾರಿಗೆ ಗೊತ್ತು?
ಐಮಂಡ ಗೋಪಾಲ್ ಸೋಮಯ್ಯ