ಸುಂಟಿಕೊಪ್ಪ, ಸೆ. 10: ಮಾದಾಪುರದಿಂದ ಸುಂಟಿಕೊಪ್ಪಕ್ಕೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸೌಲಭ್ಯವನ್ನು ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೋವಿಡ್-19 ಮಹಾಮಾರಿ ಕೊಡಗಿಗೆ ಕಾಲಿಟ್ಟ ನಂತರ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಯಿತು. ಕೊಡ್ಲಿಪೇಟೆಯಿಂದ ಮಾದಾಪುರ, ಸುಂಟಿಕೊಪ್ಪಕ್ಕಾಗಿ ಗೋಣಿಕೊಪ್ಪಕ್ಕೆ ಬೆಳಿಗ್ಗೆ ತೆರಳುತ್ತಿದ್ದ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಹಾಗೆಯೇ ಬೆಳಿಗ್ಗೆ ಮಾದಾಪುರದಿಂದ 8 ಗಂಟೆಗೆ ಸಿದ್ದಾಪುರಕ್ಕೆ ತೆರಳುವ ಖಾಸಗಿ ಬಸ್ ನಿಂತು ಹೋಗಿದೆ.

ಪ್ರತಿನಿತ್ಯ ಗರ್ವಾಲೆ, ಸೂರ್ಲಬ್ಬಿ, ಮಾದಾಪುರ, ಕುಂಬೂರು, ಹೊಸತೋಟ, ಗರಗಂದೂರು ಹಾಗೂ ಹರದೂರುನಿಂದ ಕಂದಾಯ ಕಚೇರಿ, ಬ್ಯಾಂಕ್ ವ್ಯವಹಾರ, ಸೆಸ್ಕ್ ಕಚೇರಿಗಳಿಗೆ ಸುಂಟಿಕೊಪ್ಪಕ್ಕೆ ಬರುವ ಫಲಾನುಭವಿಗಳಿಗೆ ಸಾರಿಗೆ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮಾದಾಪುರದಿಂದ ಸುಂಟಿಕೊಪ್ಪಕ್ಕೆ 10 ಕಿ.ಮಿ. ದೂರಕ್ಕೆ ಬಾಡಿಗೆ ಕಾರು - ಜೀಪಿನವರು ತಲಾ ಒಬ್ಬರಿಗೆ ರೂ. 40 ತೆಗೆದುಕೊಳ್ಳುತ್ತಿದ್ದಾರೆ. ವಾಹನಗಳಲ್ಲಿ ಸೀಟು ಭರ್ತಿಯಾಗದೆ ಬಾಡಿಗೆ ವ್ಯಾನ್ ಹೊರಡುವುದೇ ಇಲ್ಲ. ಇದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಲಾಗದೆ ಪರಿತಪಿಸುವಂತಾಗಿದೆ. ಆದುದರಿಂದ ಜಿಲ್ಲಾಧಿಕಾರಿಗಳು ಜನರ ಸಂಕಷ್ಟವನ್ನು ಮನಗಂಡು ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ಬೆಳಿಗ್ಗೆ-ಸಂಜೆ ಅನುವು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.