ಸೋಮವಾರಪೇಟೆ,ಸೆ.10: ಮೀಸಲು ಅರಣ್ಯದಿಂದ ತೇಗದ ಮರ ಕಳವು ಮಾಡಿದ ಆರೋಪದ ಮೇರೆ ಸಮೀಪದ ಗೋಣಿಮರೂರು ಗ್ರಾಮದ ಗ್ರಂಥಪಾಲಕ ಸೇರಿದಂತೆ ಆತನ ತಂದೆಯನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.

ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಮಾಲಂಬಿ ಸೆಕ್ಷನ್‍ಗೊಳಪಡುವ ಅಬ್ಬೂರುಕಟ್ಟೆ-ಗೋಣಿಮರೂರು ಅರಣ್ಯದಿಂದ ತೇಗದ ಮರವನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಆರೋಪದ ಮೇರೆ ಗೋಣಿಮರೂರು ಗ್ರಂಥಪಾಲಕ ಚೇತನ್ ಮತ್ತು ಆತನ ತಂದೆ ಕುಟ್ಟಪ್ಪ ಎಂಬವರುಗಳನ್ನು ಶನಿವಾರಸಂತೆ ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ನಿನ್ನೆ ರಾತ್ರಿ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 10 ಸಾವಿರ ಮೌಲ್ಯದ ತೇಗದ ಮರವನ್ನು ಕಡಿಯಲಾಗಿದ್ದು, ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಅರಣ್ಯದಿಂದ ಮನೆಗೆ ಸಾಗಾಟಗೊಳಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭ ತೇಗದ ಮರವನ್ನು ಆರೋಪಿಗಳಾದ ಚೇತನ್ ಮತ್ತು ಕುಟ್ಟಪ್ಪ ಅವರುಗಳನ್ನು ಬಂಧಿಸಿದ್ದು, ಮೊಕದ್ದಮೆ ದಾಖಲಿಸಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಶನಿವಾರಸಂತೆ ಆರ್‍ಎಫ್‍ಓ ಪ್ರಪುಲ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಗೋವಿಂದರಾಜು, ವಾಚರ್ ರಮೇಶ್ ಸೇರಿದಂತೆ 7 ಮಂದಿ ಆರ್‍ಆರ್‍ಟಿ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.