ಮಡಿಕೇರಿ, ಸೆ. 11: ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಕಾಫಿ ಮಂಡಳಿ ಮೂಲಕ ಸರ್ವೆ ಕಾರ್ಯ ನಡೆಯುತ್ತಿದೆ. ಬೆಳೆಗಾರರು ಕಂದಾಯ ಇಲಾಖೆಯ ಮೂಲಕ ನಷ್ಟ ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸುತ್ತಿರುವುದು ಒಂದೆಡೆಯಾದರೆ ಕಾಫಿ ಮಂಡಳಿಯು ಅತಿವೃಷ್ಟಿ ಹಾನಿ ಕುರಿತಾಗಿ ಸಮೀಕ್ಷೆ ನಡೆಸಿ ವರದಿ ತಯಾರಿಸುತ್ತಿರುವುದಾಗಿ ಮಂಡಳಿಯ ಅಧಿಕಾರಿ ಶಿವಕುಮಾರಸ್ವಾಮಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಈ ಕಾರ್ಯ ಪ್ರಗತಿಯಲ್ಲಿದೆ. ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 12 ಸಾವಿರ ಹೆಕ್ಟೇರ್‍ನಷ್ಟು ಹಾನಿ ಸಂಭವಿಸಿದೆ. ಮಡಿಕೇರಿ ತಾಲೂಕಿನಲ್ಲಿಯೂ 12 ಸಾವಿರ ಹೆಕ್ಟೇರ್‍ನಷ್ಟು ಹಾನಿಯಾಗಿರುವ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಈ ಕಾರ್ಯ ಮುಂದುವರೆಯುತ್ತಿದೆ. ಸಮೀಕ್ಷಾ ವರದಿಯನ್ನು ಕ್ರೋಢೀಕರಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಹಾಗೂ ಕಾಫಿ ಮಂಡಳಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದರಂತೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಪರಿಹಾರ ನೀಡುವ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಕುರಿತಾದ ಸ್ಪಷ್ಟ ತೀರ್ಮಾನಬೇಕಿದೆ ಎಂದವರು ತಿಳಿಸಿದರು.