ಮಡಿಕೇರಿ, ಸೆ. 9: ಪ್ರತಿಭೆ ಎಂಬುದು ಮನುಷ್ಯನಿಗೆ ದೇವರ ವರ. ಆ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ, ಪೆÇ್ರೀತ್ಸಾಹ, ಸ್ವಪ್ರಯತ್ನ, ಪರಿಶ್ರಮ ದೊರೆತರೆ ಎಂತಹ ವ್ಯಕ್ತಿಯೂ ಸಹ ಸಾಧನೆಯ ಶಿಖರದತ್ತ ಸಾಗಬಹುದು ಎಂಬುದಕ್ಕೆ ಒಂದು ನಿದರ್ಶನ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯ 7ನೇ ತರಗತಿಯ ಬಾಲ ಪ್ರತಿಭೆ ಬಿ. ದಿಯಾ ಭೀಮಯ್ಯ.
ಬಾಲ್ಯದಲ್ಲಿಯೇ ಬ್ಯಾಡ್ಮಿಂಟನ್ ಆಟದಲ್ಲಿ ಅತ್ಯಂತ ಆಸಕ್ತಿ ತೋರಿದ ದಿಯಾ ಭೀಮಯ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆಯನ್ನು ಹೊಂದಿರುವಳು. ಈಗಾಗಲೇ ಈ ಪುಟ್ಟ ಪ್ರತಿಭೆ, ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಚಾರ.
ಕರ್ನಾಟಕ ರಾಜ್ಯ ಸಂಸ್ಥೆಯು ಆಯೋಜಿಸಿದ 13 ವರ್ಷದೊಳಗಿನ ಸಿಂಗಲ್ಸ್ ಮತ್ತು ಡಬಲ್ಸ್ ಟೂರ್ನಮೆಂಟ್‍ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಳೆ. ಡಬಲ್ಸ್‍ನಲ್ಲಿ ಬೆಂಗಳೂರಿನ ಅಮೂಲ್ಯ ಕಶ್ಯಪ್ ಅವರ ಜೊತೆ ಆಡಿ ಪ್ರಥಮ ಸ್ಥಾನವನ್ನು ಪಡೆದಿರುವಳು. ರಾಜ್ಯ ಮಟ್ಟದ ಐ.ಸಿ.ಎಸ್.ಇ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಆಡಿದ ಕೀರ್ತಿ ಈ ಬಾಲ ಪ್ರತಿಭೆಯದು. ಎಸ್.ಜಿ.ಎಫ್.ಐ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ್ತಿ ಬಿ. ದಿಯಾ ಭೀಮಯ್ಯ.
ಕೊಡಗು, ಶಿವಮೊಗ್ಗ, ಮೈಸೂರು, ಬೆಂಗಳೂರಿನ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿದ ದಿಯಾಳನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ, ಪೆÇ್ರೀತ್ಸಾಹಿಸಿ ಸನ್ಮಾನಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ.
ತನ್ನ ಈ ಎಲ್ಲಾ ಸಾಧನೆಯ ಹಿಂದೆ ಶಾಲೆಯ ಪ್ರಾಂಶುಪಾಲರು, ಶಾಲಾ ಆಡಳಿತ ಮಂಡಳಿ, ಗುರುಗಳು, ತಂದೆ-ತಾಯಿ, ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ, ಖ್ಯಾತ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರ ತಾಯಿಯ ಪ್ರೋತ್ಸಾಹ, ಬ್ಯಾಡ್ಮಿಂಟನ್ ತರಬೇತುದಾರರಾದ ಅರುಣ್ ಪೆಮ್ಮಯ್ಯ, ಫಿಟ್ನೆಸ್ ತರಬೇತುದಾರರಾದ ಸಜನ್ ಕಾರ್ಯಪ್ಪ ಇವರೆಲ್ಲರ ಮಾರ್ಗದರ್ಶನ, ಪೆÇ್ರೀತ್ಸಾಹದಿಂದ, ಸ್ವಪ್ರಯತ್ನದಿಂದ ತಾಲೀಮು ನಡೆಸಿ, ತನ್ನ ಮುಂದಿನ ದಿನಗಳಲ್ಲಿ ನೆಚ್ಚಿನ ಭಾರತವನ್ನು ಪ್ರತಿನಿಧಿಸುವ ಇಂಗಿತ ದಿಯಾಳದ್ದು. ಈಕೆಯ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಉತ್ತಮ ಬ್ಯಾಡ್ಮಿಂಟನ್ ಆಟಗಾರ ಮತ್ತು ತರಬೇತುದಾರರಾದ ಅರುಣ್ ಪೆಮ್ಮಯ್ಯ ಬೊಪ್ಪಂಡ ಭೀಮಯ್ಯ ಮತ್ತು ಅಥ್ಲೆಟಿಕ್‍ನಲ್ಲಿ ಉತ್ತಮ ಸಾಧನೆ ಮಾಡಿರುವ ಬೊಪ್ಪಂಡ ಕುಸುಮಾ ಭೀಮಯ್ಯ ಅವರ ಪುತ್ರಿಯಾಗಿರುವ ದಿಯಾ ಭವಿಷ್ಯದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಲೋಕದ ಮಿನುಗುತಾರೆಯಾಗಲಿ ಎಂಬುದು ಕ್ರೀಡಾಪ್ರೇಮಿಗಳ ಆಶಯ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ತಲ್ಲಣಗೊಂಡು, ಲಾಕ್‍ಡೌನ್, ಸೀಲ್‍ಡೌನ್‍ಗಳಿಂದಾಗಿ ಬಾಹ್ಯ ಕ್ರೀಡಾಚಟುವಟಿಕೆಗಳು ಸ್ಥಬ್ದಗೊಂಡರೂ, ಆಂತರಿಕವಾಗಿ ಲಭ್ಯವಿರುವ ಶಾಲೆಯ ಸವಲತ್ತು-ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು, ತನ್ನ ತಾಲೀಮನ್ನು ಸತತ ಪರಿಶ್ರಮದಿಂದ ಮುಂದುವರಿಸುತ್ತಿರುವ ದಿಯಾಳ ಕನಸು ನನಸಾಗಿ, ಆಕೆಯ ಭವಿಷ್ಯ ಬೆಳಗಲಿ ಎಂದು ಹಾರೈಕೆ.
-ಶಶಿ.