ಮಡಿಕೇರಿ, ಸೆ.9: ಡ್ರಗ್ ದಂಧೆ ವಿಚಾರದಲ್ಲಿ ಯಾವುದೇ ರಾಜಕೀಯ ಆರೋಪಗಳು ಬೇಡ. ಸಮಾಜಕ್ಕೆ ಕಂಟಕವಾಗಿರುವ ಈ ಪಿಡುಗನ್ನು ಮಟ್ಟಹಾಕಲು ಎಲ್ಲಾ ರಾಜಕಾರಣಿಗಳೂ ಸಹಕಾರ ನೀಡಲೇಬೇಕೆಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮಾದಕ ದ್ರವ್ಯ ವಹಿವಾಟಿನ ವಿರುದ್ಧ ರಾಜ್ಯವ್ಯಾಪಿ ಬಿಜೆಪಿ ಪ್ರಬಲ ಹೋರಾಟ ಕೈಗೊಳ್ಳಲಿದೆ. ಡ್ರಗ್ ಮುಕ್ತ ಕರ್ನಾಟಕ ಅಭಿಯಾನ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು. ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆ ಸಂದರ್ಭಗಳಲ್ಲಿ ಸಿನಿಮಾ ಕಲಾವಿದರಿಂದ ಪ್ರಚಾರ ಪಡೆದಿವೆ. ಹಾಗೆಂದು ಅನಂತರದ ಅವರ ಚಟುವಟಿಕೆಗಳಿಗೆ ರಾಜಕೀಯ ಪಕ್ಷದ ನಂಟನ್ನು ಹೋಲಿಕೆ ಮಾಡಬಾರದು ಎಂದೂ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು - ರಂಜನ್
ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿ, ಡ್ರಗ್ ವಹಿವಾಟಿನಲ್ಲಿ ಪಾಲ್ಗೊಂಡವರು ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ. ಅಂಥವರನ್ನು ಕಂಡು ಹಿಡಿದು ಕ್ರಿಮಿನಲ್ ಮೊಕದ್ದಮೆ ಹೂಡಲೇಬೇಕಾದ ಅನಿವಾರ್ಯತೆಯಿದೆ. ಡ್ರಗ್ ದಂಧೆಯಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತಿರುವ ಸಿನಿಮಾ ನಟಿಯರು ಹೊಂದಿರುವ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದು, ನಿಯಮಬಾಹಿರವಾಗಿದೆ. ಕೇವಲ ಐದಾರು ಸಿನಿಮಾಗಳಲ್ಲಿ ನಟಿಸಿದವರು ಕೋಟಿಗಟ್ಟಲೆ ಆಸ್ತಿ ಹೊಂದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಶಾಸಕರು, ಇಂಥ ಅಕ್ರಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಡ್ರಗ್ ದಂಧೆಯ ಬಗ್ಗೆ ಕೆಲವು ಪೆÇಲೀಸರಿಗೆ ಖಂಡಿತಾ ಗೊತ್ತಿತ್ತು. ಆದರೆ ಅವರು ದಂಧೆಕೋರರೊಂದಿಗೆ ಶಾಮೀಲಾಗಿದ್ದರು. ಹೀಗಾಗಿ ವಹಿವಾಟು ಬೆಳಕಿಗೆ ಬರುವಲ್ಲಿ ವಿಳಂಭವಾಯಿತು. ಬಿಜೆಪಿ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಈ ದಂಧೆ ವಿರುದ್ಧ ಸಮರ ಸಾರಿದೆ ಎಂದೂ ರಂಜನ್ ಹೇಳಿದರು.