ಸೋಮವಾರಪೇಟೆ, ಸೆ. 8: ಪಟ್ಟಣ ವ್ಯಾಪ್ತಿಯಲ್ಲಿ ಇಂದು ಅಪರಾಹ್ನ 1 ಗಂಟೆಯಿಂದ 2.30ರವರೆಗೆ ಭಾರೀ ಮಳೆಯಾದ ಹಿನ್ನೆಲೆ ರೇಂಜರ್ಸ್ ಬ್ಲಾಕ್‍ನಲ್ಲಿ ತಡೆಗೋಡೆ ಕುಸಿದುಬಿದ್ದಿದ್ದು, ಕೆಳಭಾಗದ ಮನೆಗಳ ಒಳಗೆ ಕೊಳಚೆ ನೀರು ನುಗ್ಗಿದೆ.

ರೇಂಜರ್ಸ್ ಬ್ಲಾಕ್‍ನ ಸಂಜೀವ ಅವರಿಗೆ ಸೇರಿದ ನಿವೇಶನಕ್ಕೆ ನಿರ್ಮಿಸಲಾಗಿದ್ದ ತಡೆಗೋಡೆಯ ಒಂದು ಭಾಗ ಕುಸಿದುಬಿದ್ದ ಪರಿಣಾಮ, ಕೆಳಭಾಗದಲ್ಲಿರುವ ಶಶಿ ಎಂಬವರ ಮನೆಯೊಳಗೆ ಕೊಳಚೆ ನೀರು ನುಗ್ಗಿದೆ. ಮನೆ ಮಂದಿ ಬಕೇಟ್‍ಗಳಲ್ಲಿ ನೀರನ್ನು ಹೊರಹಾಕಿದ್ದಾರೆ.

ಪಟ್ಟಣದ ಜನತಾ ಕಾಲೋನಿಯಲ್ಲಿ ಪ.ಪಂ. ವತಿಯಿಂದ ನಿರ್ಮಾಣಗೊಳ್ಳುತ್ತಿದ್ದ ಚರಂಡಿ ಕಾಮಗಾರಿ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರೊಂದಿಗೆ ಕಾಮಗಾರಿಗೆ ಶೇಖರಿಸಿಟ್ಟಿದ್ದ ಎಂಸ್ಯಾಂಡ್, ಜಲ್ಲಿಕಲ್ಲುಗಳು ಮಳೆಯ ನೀರಿಗೆ ಚರಂಡಿ ಸೇರಿದೆ. ಮಧ್ಯಾಹ್ನದ ವೇಳೆಗೆ ಗುಡುಗಿನ ಆರ್ಭಟದೊಂದಿಗೆ ಭಾರೀ ಮಳೆಯಾದ ಹಿನ್ನೆಲೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಎರಡೂವರೆ ಗಂಟೆಗಳ ಕಾಲ ಬಿಟ್ಟೂ ಬಿಡದೇ ಮಳೆ ಸುರಿದಿದ್ದರಿಂದ ಪಟ್ಟಣದಲ್ಲಿ ಜನ ಸಂಚಾರ ಸ್ತಬ್ಧಗೊಂಡಿತ್ತು.