ಸೋಮವಾರಪೇಟೆ, ಸೆ.8: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ವಾರಸುದಾರರಿಲ್ಲದ ಗೂಳಿಯನ್ನು ಕೂಗೂರು ಗ್ರಾಮಸ್ಥರು ಹಿಡಿದು ಮೈಸೂರಿನ ಗೋ ಶಾಲೆಗೆ ಸಾಗಿಸಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿಯ ಕೂಗೂರು, ಗೌಡಳ್ಳಿ, ಬೀಟಿಕಟ್ಟೆ, ಕೋಟೆಯೂರು, ಹೆಗ್ಗಳ ಗ್ರಾಮಗಳಲ್ಲಿ ಕೆಲ ವರ್ಷಗಳಿಂದ ಸುತ್ತಾಡಿಕೊಂಡಿದ್ದ ಗೂಳಿ, ಇತ್ತೀಚಿನ ವರ್ಷಗಳಲ್ಲಿ ಬೆಳೆಯನ್ನು ತಿಂದು ಹಾನಿಪಡಿಸುತ್ತ, ಸಾರ್ವಜನಿಕರ ಮೇಲೂ ಧಾಳಿಗೆ ಮುಂದಾಗುತ್ತಿತ್ತು.
ಗ್ರಾಮಸ್ಥರು ಹಾಗು ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರುಗಳು ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡ ಮೇರೆಗೆ, ಪಿಡಿಒ ಲಿಖಿತ ಅವರು ಗೂಳಿಯನ್ನು ಸಾಗಿಸಲು ಅನುಮತಿ ಪತ್ರ ನೀಡಿದರು.
ಕೂಗೂರು ಗ್ರಾಮಸ್ಥರ ಸಹಕಾರದಿಂದ ಗೂಳಿಯನ್ನು ಹಿಡಿದು ವಾಹನದ ಮೂಲಕ ಮೈಸೂರಿನ ಗೋಶಾಲೆಗೆ ಸಾಗಿಸಲಾಯಿತು. ಗ್ರಾಮಸ್ಥರಾದ ಸುಮಂತ್, ಲೋಕೇಶ್, ದಯಾನಂದ, ಚಂದ್ರಶೇಖರ್, ಸಿಂಚನ್, ಶಿವಕುಮಾರ್, ಕರುಣ್, ಹೂವಯ್ಯ, ಅರ್ಜುನ್, ಸಂದೀಪ್, ಅಶ್ವಥ್, ಮಿಲನ್ ಅವರುಗಳು ಬೀಡಾಡಿ ಗೂಳಿಯನ್ನು ಹಿಡಿದು ಗೋಶಾಲೆಗೆ ಸಾಗಿಸಲು ಸಹಕರಿಸಿದರು.