ಸೋಮವಾರಪೇಟೆ, ಸೆ. 8: ತಾಲೂಕಿನ ಯಲಕನೂರು ಗ್ರಾಮದಲ್ಲಿ ತಾ. 6 ರಂದು ಸುರಿದ ಭಾರೀ ಮಳೆಗೆ ವಾಸದ ಮನೆ, ಕೊಟ್ಟಿಗೆ ಸೇರಿದಂತೆ 20 ಎಕರೆಗೂ ಅಧಿಕ ಕೃಷಿ ಜಮೀನಿಗೆ ಹಾನಿಯಾಗಿದೆ.

ಯಲಕನೂರು ಗ್ರಾಮ ವ್ಯಾಪ್ತಿಯಲ್ಲಿ ತಾ. 6 ರಂದು ಸಂಜೆ 4 ರಿಂದ 5 ಗಂಟೆಯವರೆಗೆ ಸುರಿದ ಭಾರೀ ಮಳೆಯಿಂದಾಗಿ ಸಣ್ಣಪುಟ್ಟ ತೋಡು, ರಸ್ತೆ ಬದಿಯ ಚರಂಡಿ, ಆನೆಕಂದಕಗಳಲ್ಲಿ ನೀರು ತುಂಬಿ ಹರಿದಿದ್ದು, ಕೆಸರು ಮಿಶ್ರಿತ ನೀರು ಮನೆ, ಕೊಟ್ಟಿಗೆಗಳಿಗೆ ನುಗ್ಗಿದೆ.

ಗ್ರಾಮದ ಚರಣ್, ವಿಶ್ವನಾಥ್, ಜಲೇಂದ್ರ ಅವರುಗಳ ಮನೆ, ಕೊಟ್ಟಿಗೆಗೆ ಹಾನಿಯಾಗಿದ್ದರೆ, ಜೋಳ ಕೃಷಿ ಮಾಡಲಾಗಿದ್ದ 10 ಎಕರೆಗೂ ಅಧಿಕ ಕೃಷಿ ಭೂಮಿಗೆ ನೀರು ನುಗ್ಗಿದೆ. ಪರಿಣಾಮ ಜೋಳದ ಬೆಳೆ ನಷ್ಟವಾಗಿದೆ ಎಂದು ಬಸವರಾಜು ತಿಳಿಸಿದ್ದಾರೆ.

ಇದರೊಂದಿಗೆ ಹೇಮಾವತಿ ಹಿನ್ನೀರು ಮುಳುಗಡೆ ಸಂತ್ರಸ್ತರಿಗೆ ನೀಡಲಾಗಿದ್ದ ಕೃಷಿಭೂಮಿ, ವಾಸದ ಮನೆಗಳಿಗೂ ಹಾನಿಯಾಗಿದೆ. ಕೆಸ, ಗೆಣಸು, ಶುಂಠಿ ಕೃಷಿಗೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಬೆಳೆ ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ಯಲಕನೂರು ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಸೇತುವೆಯ ಮೇಲೂ ನೀರು ಹರಿದ ಪರಿಣಾಮ ಕೆಲಕಾಲ ವಾಹನ-ಜನ ಸಂಚಾರ ಸ್ತಬ್ಧಗೊಂಡಿತ್ತು. ರಾತ್ರಿ ವೇಳೆಗೆ ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಇಳಿಕೆಯಾದ ನಂತರ ಸಂಚಾರ ಸುಗಮವಾಯಿತು.

ಭಾರೀ ಮಳೆಯಿಂದ ನಷ್ಟಗೊಂಡಿರುವ ಕೃಷಿಗೆ ಸರ್ಕಾರದಿಂದ ಪರಿಹಾರ ಒದಗಿಸಬೇಕು. ಕೃಷಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಯಲಕನೂರು ವ್ಯಾಪ್ತಿಯ ಕೃಷಿಕರು ಒತ್ತಾಯಿಸಿದ್ದಾರೆ.