ಕೋವಿಡ್ ಹಿನ್ನೆಲೆ ಸರಳ ದಸರಾ ಆಚರಣೆ

ಬೆಂಗಳೂರು, ಸೆ. 8: ಕೋವಿಡ್ 19 ಹಿನ್ನೆಲೆ ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಸಾಂಪ್ರದಾಯಿಕ ಆಚರಣೆಯನ್ನು ಕೈ ಬಿಡದೆ, ವೈಭವಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿ ರುವುದರಿಂದ ಹೆಚ್ಚಿನ ಜನಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿ ಸಲಾಯಿತು. ದಸರಾ ಆಚರಣೆಗೆ ರೂ. 10 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆಹಾರ ಮೇಳ, ಕ್ರೀಡೆ, ಯುವ ದಸರಾ ಮುಂತಾದ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗುವುದು. ಗಜಪಡೆಯನ್ನು ಸಹ ಕನಿಷ್ಟ 5ಕ್ಕೆ ಸೀಮಿತಗೊಳಿಸಲು ತೀರ್ಮಾನಿ ಸಲಾಯಿತು. ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್‍ಗಾಗಿ ಶ್ರಮಿಸಿರುವ ಕೊರೊನಾ ಯೋಧರಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಪೆÇಲೀಸರಿಂದ ನೆರವೇರಿಸುವುದು ಎಂದು ತೀರ್ಮಾನಿಸಲಾಯಿತು.

ಇನ್ನೆರಡು ದಿನ ಭಾರೀ ಮಳೆ

ಬೆಂಗಳೂರು, ಸೆ. 8: ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕಳೆದ 2 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಉಡುಪಿ, ಶಿವಮೊಗ್ಗ, ರಾಯಚೂರು, ಕೊಡಗಿನಲ್ಲಿ ಮಳೆ ಹೆಚ್ಚಾಗಿದೆ. ತಾ. ತಾ. 10 ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ತಾ. 11 ರವರೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅತ್ಯಧಿಕ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರಾವಾಡ, ಗದಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಭಾರತೀಯ ಮಾಧ್ಯಮಗಳಿಗೆ ಮೋದಿ ಸಲಹೆ

ನವದೆಹಲಿ, ಸೆ. 8: ಭಾರತೀಯ ಮಾಧ್ಯಮಗಳು ಜಾಗತಿಕ ಮಟ್ಟಕ್ಕೆ ಹೋಗಬೇಕಾದ ಅಗತ್ಯತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜೈಪುರದ ಪ್ರವಾಸಿ ಆಕರ್ಷಣೆಯಾದ ಪತ್ರಿಕಾ ಗೇಟ್ ಅನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಪ್ರಧಾನಿ, ಇಂದು ದೇಶದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಸಾಗುತ್ತಿವೆ, ಭಾರತದ ಧ್ವನಿ ಕೂಡ ಜಾಗತಿಕವಾಗಿ ಹೆಚ್ಚುತ್ತಿದೆ. ಇಂದು ದೇಶವು ವಿಶ್ವ ಮಟ್ಟದಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮಾಧ್ಯಮಗಳು ಜಾಗತಿಕ ಮಟ್ಟಕ್ಕೆ ಹೋಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇಂದು, ಭಾರತವು ಪ್ರತಿಯೊಂದು ಜಾಗತಿಕ ಹಂತದಲ್ಲೂ ಬಲವಾದ ಅಸ್ತಿತ್ವವನ್ನು ಹೊಂದಿದೆ. ಅಂತಹ ಸಮಯದಲ್ಲಿ, ಭಾರತೀಯ ಮಾಧ್ಯಮಗಳು ಜಾಗತಿಕ ಮಟ್ಟಕ್ಕೆ ಹೋಗಬೇಕಾಗಿದೆ. ನಮ್ಮ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಜಾಗತಿಕ ಖ್ಯಾತಿಯನ್ನು ಹೊಂದಿರಬೇಕು. ಈ ಡಿಜಿಟಲ್ ಯುಗದಲ್ಲಿ, ನಾವು ಪ್ರಪಂಚದಾದ್ಯಂತ ಡಿಜಿಟಲ್ ತಲುಪಬೇಕು. ಅಲ್ಲದೆ ಭಾರತೀಯ ಸಂಸ್ಥೆಗಳು ವಿಶ್ವದ ವಿವಿಧ ಭಾಗಗಳಲ್ಲಿ ನೀಡುತ್ತಿರುವ ರೀತಿಯಲ್ಲಿ ಸಾಹಿತ್ಯ ಪ್ರಶಸ್ತಿಗಳನ್ನು ಸಹ ನೀಡಬೇಕು ಎಂದು ಸಲಹೆ ನೀಡಿದರು

ರಷ್ಯಾ ಲಸಿಕೆ ಭಾರತದಲ್ಲಿ ಪ್ರಯೋಗ

ನವದೆಹಲಿ, ಸೆ. 8: ರಷ್ಯಾ ಕಂಡುಹಿಡಿದಿರುವ ಕೋವಿಡ್ -19 ಲಸಿಕೆ “ಸ್ಪುಟ್ನಿಕ್ ವಿ”ಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದಲ್ಲಿ ನಡೆಸಲು ಅವಕಾಶ ನೀಡಬೇಕು ಎಂಬ ರಷ್ಯಾ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ನೀತಿ ಆಯೋಗದ ಸದಸ್ಯರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿಶೇಷ ಸ್ನೇಹಿತ ರಷ್ಯಾ ಪಾಲುದಾರಿಕೆಯ ಪ್ರಸ್ತಾಪಕ್ಕೆ ಭಾರತ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಈ ಎರಡೂ ದೇಶಗಳ ಹಾದಿಯಲ್ಲಿ ಗಮನಾರ್ಹವಾದ ಬೆಳವಣಿಗೆ ಕಂಡುಬಂದಿದೆ ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್-19 ಲಸಿಕೆಯ ರಾಷ್ಟ್ರೀಯ ತಜ್ಞರ ತಂಡ ಮುಖ್ಯಸ್ಥ ಡಾ. ವಿಕೆ ಪಾಲ್ ಹೇಳಿದ್ದಾರೆ. ಮಾಸ್ಕೊದ ಗಮೆಲಿಯಾ ಇನ್‍ಸ್ಟಿಟ್ಯೂಟ್ ಮತ್ತು ರಷ್ಯಾ ರಕ್ಷಣಾ ಸಚಿವಾಲಯದ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-ವಿ ಲಸಿಕೆಯ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿದೆ. ಮೊದಲ ಹಂತದ ಲಸಿಕೆಗಳನ್ನು ನಾಗರಿಕರಿಗಾಗಿ ಬಿಡುಗಡೆ ಮಾಡಲಾಗಿದೆ.

ಯುವಕರು ಚೀನಾ ಗಡಿಯೊಳಗೆ ಪತ್ತೆ

ನವದೆಹಲಿ, ಸೆ. 8: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಯುವಕರು ನಾಪತ್ತೆ ಕುರಿತಂತೆ ಭಾರತೀಯ ಸೇನೆಯು ಕಳುಹಿಸಿದ್ದ ಹಾಟ್‍ಲೈನ್ ಸಂದೇಶಕ್ಕೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಪ್ರತಿಕ್ರಿಯಿಸಿದ್ದು ಐವರು ಭಾರತೀಯರು ತಮ್ಮ ಭಾಗದ ಗಡಿಯೊಳಗೆ ಇದ್ದಾರೆ ಎಂದು ಒಪ್ಪಿಕೊಂಡಿದೆ. ಚೀನಾ ಗಡಿಯೊಳಗೆ ಪತ್ತೆಯಾಗಿರುವ ಭಾರತೀಯರನ್ನು ನಮ್ಮ ಅಧಿಕಾರಿಗಳಿಗೆ ಹಸ್ತಾಂತರ ಮಾಡುವ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಈ ಐವರು ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು.