ಸೋಮವಾರಪೇಟೆ, ಸೆ. 8: ಜಿಲ್ಲಾ ಪಂಚಾಯತ್‍ನ ಮಳೆಹಾನಿ ಪರಿಹಾರ ನಿಧಿಯಡಿ ಕೈಗೊಳ್ಳಲಾಗಿರುವ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಯ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇಂದು ನಡೆಯಿತು.
ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಿಂದ ಗಾಂಧಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರೂ. 10ಲಕ್ಷದಲ್ಲಿ ಕೈಗೊಳ್ಳಲಾಗುತ್ತಿದ್ದು, ನಿನ್ನೆ ದಿನ ಹಳೆಯ ರಸ್ತೆಯನ್ನು ಅಗೆಯಲಾಗಿತ್ತು. ಸಂಜೆ ವೇಳೆಗೆ ಮಳೆ ಬಂದಿದ್ದರಿಂದ ರಸ್ತೆಯಲ್ಲಿ ಕೆಸರು ಉಂಟಾಗಿದ್ದು, ಇಂದು ಬೆಳಿಗ್ಗೆ ಕೆಸರಿನ ಮೇಲೆ ಕಾಂಕ್ರೀಟ್ ಹಾಕಲು ಮುಂದಾದ ಸಂದರ್ಭ, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ಕ್ರಿಯಾಯೋಜನೆಯಲ್ಲಿ ಇರುವಂತೆ ಕಾಮಗಾರಿ ನಿರ್ವಹಿಸಿ, ಕೆಸರಿನ ಮೇಲೆ ಕಾಂಕ್ರಿಟ್ ಹಾಕಿದರೆ ರಸ್ತೆ ಬಾಳಿಕೆ ಬರುತ್ತದೆಯೇ? ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಸೇರಿದಂತೆ ಸ್ಥಳೀಯರು, ಗುತ್ತಿಗೆದಾರ ವಿಶ್ವನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಕ್ರಿಯಾಯೋಜನೆಯ ಪ್ರಕಾರ ಮೊದಲು ರಸ್ತೆಗೆ 3 ಇಂಚು ದಪ್ಪದಲ್ಲಿ ಡಬ್ಲ್ಯೂಬಿಎಂ ಹಾಕಿ, ಅದರ ಮೇಲೆ 4 ಇಂಚು ಪಿಸಿಸಿ, ನಂತರ 6 ಇಂಚು ಕಾಂಕ್ರಿಟ್ ಹಾಕಬೇಕಿದೆ. ಆದರೆ ಡಬ್ಲ್ಯೂಬಿಎಂ ಹಾಕದೇ ಪಿಸಿಸಿ ಹಾಕಲಾಗುತ್ತಿದೆ ಎಂದು ಅನಿಲ್ ದೂರಿದರು.
ಕ್ರಿಯಾಯೋಜನೆಯಂತೆ ಕೆಲಸ ಮಾಡುವ ಸಂದರ್ಭ ಸ್ಥಳೀಯರು ಒತ್ತಡ ತಂದು ರಸ್ತೆಯ ಮಣ್ಣನ್ನು ತೆಗೆಸಿದ್ದಾರೆ. ಇದರಿಂದಾಗಿ ನಿನ್ನೆಯ ಮಳೆಗೆ ಕೆಸರು ನಿರ್ಮಾಣವಾಗಿದೆ. ಪ್ರಸ್ತುತ ಹಾಕಿರುವ ಕಾಂಕ್ರಿಟ್ ತೆಗೆದು, ಹೊಸದಾಗಿಯೇ ಡಬ್ಲ್ಯೂಬಿಎಂ, ಪಿಸಿಸಿ ಮತ್ತು ಕಾಂಕ್ರೀಟ್ ಹಾಕುವದಾಗಿ ಗುತ್ತಿಗೆದಾರ ವಿಶ್ವನಾಥ್ ತಿಳಿಸಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಧರ್ಮ, ಸ್ಥಳೀಯರಾದ ಮಹೇಶ್ ತಿಮ್ಮಯ್ಯ, ಎಂ.ಬಿ. ಉಮೇಶ್, ಜಯರಾಂ, ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.