ನಾಪೆÇೀಕ್ಲು, ಸೆ. 8: ಈ ಬಾರಿ ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದ ಎಲ್ಲಾ ಕಡೆಗಳಲ್ಲಿ ಬೆಳೆ ನಷ್ಟ ಉಂಟಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರಕ್ಕೆ ಅರ್ಜಿ ನೀಡಲು ಸೆ. 10 ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ. ಆದರೆ, ನಾಪೆÇೀಕ್ಲು ನಾಡ ಕಚೇರಿಗೆ ಒಳಪಡುವ ಎಲ್ಲಾ ಗ್ರಾಮ ಪಂಚಾಯಿತಿಯ ಗ್ರಾಮಗಳು ಬೆಟ್ಟ ಗುಡ್ಡಗಳಿಂದ ಕೂಡಿವೆ. ಇಲ್ಲಿನ ಜನ ಬಸ್ ಸಂಪರ್ಕಕ್ಕೆ 5-6 ಕಿ.ಮೀ ನಡೆದು ಬರಬೇಕಾಗಿದೆ.

ಈಗ ಕೋವಿಡ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಕೂಡ ಇಲ್ಲದೆ ಬೆಳೆಗಾರರು, ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ನಾಡ ಕಚೇರಿಗೆ ಕಷ್ಟಪಟ್ಟು ತಲುಪುವ ರೈತರಿಗೆ ಸರ್ವರ್ ಇಲ್ಲ ಎಂಬ ಉತ್ತರ ಲಭಿಸುತ್ತಿದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ಸೆ. 30ರ ವರೆಗೆ ಮುಂದೂಡಬೇಕೆಂದು ಪಾರಾಣೆ ಗ್ರಾಮದ ಬೆಳೆಗಾರ ಅಪ್ಪನೆರವಂಡ ಚುಮ್ಮಿ ದೇವಯ್ಯ, ಯವಕಪಾಡಿ ಗ್ರಾಮದ ಕೇಟೋಳಿರ ಸನ್ನಿ ಸೋಮಣ್ಣ, ನಾಪೆÇೀಕ್ಲು ಗ್ರಾಮದ ಬೊಪ್ಪೇರ ಕಾವೇರಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಕಿಶೋರ್, ನೆಲಜಿ ಗ್ರಾಮದ ಮುಕ್ಕಾಟಿರ ವಿನಯ್, ಬಲ್ಲಮಾವಟಿ ಗ್ರಾಮದ ಚೋಕಿರ ಬಾಬಿ ಭೀಮಯ್ಯ, ಪುಲಿಕೋಟು ಗ್ರಾಮದ ಕರವಂಡ ಲವ ನಾಣಯ್ಯ ಸೇರಿದಂತೆ ಈ ಭಾಗದ ಎಲ್ಲಾ ರೈತರು, ಬೆಳೆಗಾರರು ಆಗ್ರಹಿಸಿದ್ದಾರೆ.

ನಾಪೆÇೀಕ್ಲು ಹೋಬಳಿಗೆ ಸೇರಿದ ನಾಪೆÇೀಕ್ಲು, ಬೇತು, ನೆಲಜಿ, ಎಮ್ಮೆಮಾಡು, ಬಲ್ಲಮಾವಟಿ, ಪುಲಿಕೋಟು, ಕಕ್ಕಬ್ಬೆ, ಕುಂಜಿಲ, ಯವಕಪಾಡಿ, ಚೆಯ್ಯಂಡಾಣೆ, ಚೇಲಾವರ ಕೋಕೇರಿ, ಕಡಂಗ, ನರಿಯಂದಡ, ಕೈಕಾಡು, ಬಾವಲಿ ಗ್ರಾಮಗಳ ರೈತರು ನಾಪೆÇೀಕ್ಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ನಾಪೆÇೀಕ್ಲು ನಾಡ ಕಚೇರಿಯಲ್ಲಿ ಜನ ದಟ್ಟಣೆ ಹೆಚ್ಚಾಗಿ ನೂಕು ನುಗ್ಗಲು ಉಂಟಾಗುತ್ತಿದೆ. ಆರ್.ಟಿ.ಸಿ, ಕಂದಾಯ ಪಾವತಿಸಿದ ರಶೀದಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಪ್ರತಿಗಳನ್ನು ಸಂಘಟಿಸಲು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವರ್ ಡೌನ್‍ನೊಂದಿಗೆ ಆಗಾಗ ಕರೆಂಟ್ ಕೈಕೊಡುತ್ತಿದ್ದು, ಅರ್ಜಿ ಸಲ್ಲಿಸಲು 3-4 ದಿನ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಧಿಕಾರಿಯವರು ಈ ಬೆಳೆಗಾರರ ಸಮಸ್ಯೆಯನ್ನು ಮನಗಂಡು ಅರ್ಜಿ ಸ್ವೀಕರಿಸುವ ದಿನಾಂಕವನ್ನು ಸೆ. 30ರ ವರೆಗೆ ವಿಸ್ತರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. -ಪಿ.ವಿ.ಪ್ರಭಾಕರ್