ಗೋಣಿಕೊಪ್ಪಲು, ಸೆ. 8: ರಾಷ್ಟ್ರೀಯತೆಯ ಧೋರಣೆ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಿರಿಯ ಚೇತನ ಆರ್‍ಎಸ್‍ಎಸ್‍ನ ಪ್ರಮುಖರಾದ ಮನೆಯಪಂಡ ಅಯ್ಯಪ್ಪ ಅವರು (99) ಇದೀಗ ತಮ್ಮ ಬಾಳ ಪಯಣವನ್ನು ಅಂತ್ಯ ಗೊಳಿಸಿದ್ದಾರೆ. ಕೆಲ ಸಮಯದಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ತೊಂದರೆಯಲ್ಲಿದ್ದ ಎಂ.ಡಬ್ಲ್ಯೂ. ಅಯ್ಯಪ್ಪ ಮಂಗಳವಾರ ಮುಂಜಾನೆ ತಮ್ಮ ದೇವರಪುರದ ಸ್ವಗೃಹದಲ್ಲಿ ವಿಧಿವಶರಾದರು. ಜನಸಂಘ,ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ತಳವೂರಲು ಅಂದಿನ ಕಾಲಘಟ್ಟದಲ್ಲಿ ಅವರು ಶ್ರಮಪಟ್ಟಿದ್ದರು.

ದೇವರಪುರ ಗ್ರಾಮದ ಚೆನ್ನಂಗೊಲ್ಲಿ ಎಸ್ಟೇಟ್‍ನಲ್ಲಿ ವಾಸವಾಗಿದ್ದ ಇವರು ತನ್ನ ಮನೆಗೆ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಗಳಿಲ್ಲ. ನಾಡಿನಲ್ಲಿ ಯಾವುದೇ ಕಾರ್ಯಕ್ರಮ ವಿರಲಿ ಆಯೋಜಕರು ಮೊದಲಿಗೆ ಭೇಟಿ ನೀಡುವುದೇ ಎಂ.ಡಬ್ಲ್ಯೂ. ಅಯ್ಯಪ್ಪನವರ ಮನೆಗೆ. ಇವರು ಪ್ರೀತಿಯಿಂದ ನೀಡುವ ಉದಾರ ಧನ ಸಹಾಯ, ಸಹಕಾರ ಪಡೆದು ನಂತರ ವಷ್ಟೆ ಕಾರ್ಯಕ್ರಮ ರೂಪಿಸುವುದು ವಾಡಿಕೆ. 1922ರ ಮೇ 22ರಂದು ಚೆನ್ನಂಗೊಲ್ಲಿ ಎಸ್ಟೇಟ್ ಮಾಲೀಕ ಎಂ.ಡಬ್ಲ್ಯೂ. ಅಯ್ಯಪ್ಪ ಓದು ಮುಗಿಸಿ ಬಂದ ನಂತರ ತೋಟ ನೋಡಿ ಕೊಳ್ಳುತ್ತಿದ್ದರು. ಕಿರಿಯ ವಯಸ್ಸಿ ನಲ್ಲಿಯೇ ಅವರಿಗೆ ರಾಷ್ಟ್ರೀಯತೆಯ ಮನೋಭಾವ ಆವರಿಸಿಕೊಂಡಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಕೊಡಗು ಕಾಂಗ್ರೆಸ್ ಅಂದು ಭದ್ರ ಕೋಟೆಯಾಗಿತ್ತು.

(ಮೊದಲ ಪುಟದಿಂದ) ಅಂತ ಸಂದರ್ಭದಲ್ಲಿ ಅಯ್ಯಪ್ಪ ಅವರಿಗೆ ಆರ್.ಎಸ್.ಎಸ್. ಪ್ರಚಾರಕ ರೊಬ್ಬರು ಪರಿಚಯ ವಾದರು. ಅಯ್ಯಪ್ಪ ಅವರನ್ನು ದೀನಯಾಳರ ಚಿಂತನೆ ಅದ್ಯಾವ ಪರಿಯಲ್ಲಿ ಸೆಳೆಯಿತೆಂದರೆ ಕೆಲವೇ ವರ್ಷಗಳಲ್ಲಿ ಜನಸಂಘದ ಜಿಲ್ಲಾ ಖಜಾಂಚಿ ಯಾದರು. ನಂತರ ಚೆನ್ನಂಗೊಲ್ಲಿ ಎಸ್ಟೇಟ್ ಜನ ಸಂಘದ ಖಜಾನೆ ಯಾಗಿ ಬದಲಾಯಿತು. ಇಂಥದರ ನಡುವೆ ಅಂದಿನ ಜನಸಂಘದಲ್ಲಿ

ಎ.ಕೆ. ಸುಬ್ಬಯ್ಯ, ವಕೀಲ ನಾರಾಯಣರಾವ್, ಅಯ್ಯಪ್ಪ ಮತ್ತು ಎಂ.ಎನ್. ನಂಜಪ್ಪನವರ ಪ್ರಬಲ ತಂಡವಿತ್ತು. ಕೊಡಗನ್ನು ಬದಲಿಸಲು ಇಷ್ಟು ಸಾಕಾಗಿತ್ತು. ಕಂಬದಕಡ ಅಣೆಕಟ್ಟು ಯೋಜನೆ ವಿರುದ್ಧ ನಡೆದ ಜನಾಂದೋಲನದಲ್ಲಿ ಅಯ್ಯಪ್ಪ ನೇತೃತ್ವ ವಹಿಸಿದ್ದರು.

ಮರುವರ್ಷ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದ ರೂಪುರೇಷೆಗಳೆಲ್ಲವೂ ಅಯ್ಯಪ್ಪ ನವರದ್ದು. ತುರ್ತು ಪರಿಸ್ಥಿತಿಯ ನಂತರ ಪಕ್ಷದ ಸಂಘಟನೆಗೆ ಕಾರ್ಯಕರ್ತರನ್ನು ಹುಟ್ಟುಹಾಕಲು ಜಿಲ್ಲೆಯುದ್ದಕ್ಕೂ ಪ್ರವಾಸ ಕೈಗೊಂಡರು. ಮುಂದೆ ಜನಸಂಘ ಬಿಜೆಪಿಯಾಗಿ ರೂಪುಗೊಂಡಿತ್ತು. ಎ.ಕೆ.ಸುಬ್ಬಯ್ಯ ಸಂಘ ವಿರೋಧಿಯಾದಾಗ ಹೊಸ ತಂಡ ಕಟ್ಟಿ ಪಕ್ಷದ ನೊಗವನ್ನು ಹೊತ್ತರು. ಬಿಜೆಪಿಯ ಜಿಲ್ಲಾಧ್ಯಕ್ಷರಾದರು.

ಜನ ವಿರೋಧಿ ಬರಪೊಳೆ ಯೋಜನೆಯನ್ನು ಓಡಿಸಲು ಚಳವಳಿ ಸಂಘಟಿಸಿದರು. ಸುಂದರ್‍ಲಾಲ್ ಬಹುಗುಣರನ್ನು ಕರೆಸಿ ಅಪ್ಪಿಕೋ ಚಳವಳಿ ನಡೆಸಿದರು. ಸ್ವತಃ ಪ್ಲಾಂಟರ್ ಆಗಿದ್ದರೂ ಕಾರ್ಮಿಕರನ್ನು ಸಂಘಟಿಸಿದರು. 70ರ ದಶಕದಲ್ಲೇ ಪಂಚಾಯ್ತಿ ಮಟ್ಟದ ಕಾರ್ಯಕರ್ತರಿಗೆ ಆರ್ಥಿಕ ಸಹಕಾರ ನೀಡಿದರು. ಬೆಳೆಗಾರರು ರಾಜಕಾರಣದತ್ತ ಉದಾಸೀನತೆ ಹೊಂದಿದಾಗ ಅವರನ್ನೂ ಪಕ್ಷದ ಪದಾಧಿಕಾರಿಯನ್ನಾಗಿ ಮಾಡಿದರು.

ಅವರಿಗೆ ಶಾಸಕನಾಗುವ ಅವಕಾಶಗಳು ಮನೆ ಬಾಗಿಲಿಗೆ ಬಂದರೂ ಅವನ್ನೆಲ್ಲಾ ತಿರಸ್ಕರಿಸಿದ್ದರು.ಜಿಲ್ಲೆಯಲ್ಲಿ ಉತ್ತಮ ವಿದ್ಯಾಸಂಸ್ಥೆ ಆರಂಭಿಸಿ ಎಂದು ಸಲಹೆ ನೀಡಿದ್ದರು. ಶಿಕ್ಷಣ ತಜ್ಞ ಡಾ. ಎಂ.ಎಂ.ಚಂಗಪ್ಪರೊಡಗೂಡಿ ಕೂರ್ಗ್ ಎಜುಕೇಷನ್ ಸೊಸೈಟಿ ಸ್ಥಾಪನೆಗೆ ಶ್ರಮಪಟ್ಟರು. ಜಿಲ್ಲೆಯಾದ್ಯಂತ ಬೆಳೆಗಾರ ಸಂಘಕ್ಕೆ ಕಟ್ಟಡಗಳು, ಕಾರ್ಯಾಲಯಗಳ ನಿರ್ಮಾಣ ಮಾಡಿದರು. ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ ಭವನ ನಿರ್ಮಾಣಕ್ಕೆ ಅತೀ ಹೆಚ್ಚಿನ ಮೊತ್ತ ಸಂಗ್ರಹಿಸಿದ ಕಾರ್ಯಕರ್ತ ಎಂಬ ಹೆಗ್ಗಳಿಕೆ ಇವರದ್ದು.

ವಯೋ ಸಹಜವಾಗಿ ಅಯ್ಯಪ್ಪ ಅವರ ದೇಹ ಸೊರಗಿತ್ತು. ಕಿವಿ ಮಂದವಾಗಿತ್ತು. ಆದರೆ ಎಂದಿನ ಮೆಲುಧ್ವನಿ ಮಾತ್ರ ಬದಲಾಗಿರಲಿಲ್ಲ. ನೆನಪು ಅಸ್ಪಷ್ಟವಿದ್ದರೂ ಚೆನ್ನಂಗೊಲ್ಲಿ ಎಸ್ಟೇಟಿನ ಆ ಮನೆಯಲ್ಲಿ ತುರ್ತು ಪರಿಸ್ಥಿತಿಯ ಕಥೆಗಳು ಇನ್ನೂ ಜೀವಂತವಾಗಿದೆ. ಕೊಡಗಿನಲ್ಲಿ ಬಿಜೆಪಿ ಎಷ್ಟೆ ಬಲಿಷ್ಠವಾದರೂ ಇದರ ಹಿಂದೆ ಅಯ್ಯಪ್ಪ ಅವರ ಅಪಾರ ಶ್ರಮವಿದೆ. ಇವರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಅಯ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದೆ. ಇವರ ನಿಧನದಿಂದ ಆರ್.ಎಸ್.ಎಸ್‍ನ ಒಂದು ಕೊಂಡಿ ಕಳಚಿದಂತಾಗಿದೆ.

ಸಂತಾಪ ಸೂಚನೆ

*ಸಿದ್ದಾಪುರ: ಹಿರಿಯ ಬಿಜೆಪಿ ಮುಖಂಡ ಎಂ.ಡಬ್ಲ್ಯು. ಅಯ್ಯಪ್ಪ ಅವರ ನಿಧನಕ್ಕೆ ಬಿಜೆಪಿಯ ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಹಾಗೂ ನೆಲ್ಯಹುದಿಕೇರಿ ಘಟಕಗಳು ಸಂತಾಪ ಸೂಚಿಸಿದವು.

ಚೆಟ್ಟಳ್ಳಿಯ ನರೇಂದ್ರಮೋದಿ ಭವನದಲ್ಲಿ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರ ನೇತೃತ್ವದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಎಂ.ಡಬ್ಲ್ಯು.ಅಯ್ಯಪ್ಪ, ನಾರಾಯಣ ಆಚಾರ್ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಕ್ಷದ ಚೆಟ್ಟಳ್ಳಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ವಾಲ್ನೂರು- ತ್ಯಾಗತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಅಧ್ಯಕ್ಷ ಸುರೇಶ್, ಪ್ರಮುಖರಾದ ಅಂಚೆಮನೆ ಸುಧಿ, ಮನುಮಹೇಶ್, ಸುನೀಲ್, ವೆಂಕಟೇಶ್ ಮತ್ತಿತರರು ಅಯ್ಯಪ್ಪ ಅವರಿಗೆ ಸಂತಾಪ ಸೂಚಿಸಿದರು.

ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ ಆವರಣದಲ್ಲಿ ಸ್ಥಳೀಯರಾದ ವಿ.ಕೆ. ಲೋಕೇಶ್, ಹೊಸಮನೆ ವಸಂತ, ಟಿ.ಸಿ.ಅಶೋಕ್, ಟಿ.ಸಿ.ರಾಮನ್ ಕುಟ್ಟಿ, ಮಣಿ, ಮುರಳೀಧರ್ ಮತ್ತಿತರರು ಅಯ್ಯಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಮೂರೂ ಕಡೆಯಲ್ಲೂ ಇಂದು ಬಿಜೆಪಿ ಶಕ್ತಿ ಕೇಂದ್ರದ ಸಭೆ ಆಯೋಜಿಸಲಾಗಿತ್ತಾದರೂ ಅಯ್ಯಪ್ಪ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಭೆಯನ್ನು ಮುಂದೂಡಲಾಯಿತು. -ಹೆಚ್. ಕೆ. ಜಗದೀಶ್