ಕುಶಾಲನಗರ, ಸೆ. 7: ಕಳೆದ ಮೂರು ವರ್ಷಗಳಿಂದ ಉಕ್ಕಿ ಹರಿದ ಕಾವೇರಿ ಪ್ರವಾಹದಿಂದ ಹಾನಿಗೊಳಗಾದ ಕೊಡಗು-ಮೈಸೂರು ಜಿಲ್ಲೆಗಳ ಗಡಿಭಾಗದ ಪ್ರಮುಖ ಸೇತುವೆಯ ದುರಸ್ತಿ ಕಾರ್ಯ ಪ್ರಾರಂಭಗೊಂಡಿದೆ. ಕುಶಾಲನಗರ ಕೊಪ್ಪದಲ್ಲಿ ನಿರ್ಮಾಣಗೊಂಡಿರುವ ನೂತನ ಕಾವೇರಿ ಸೇತುವೆಯ ಮೈಸೂರು ಗಡಿಭಾಗದ ಕಲ್ಲುಕಟ್ಟಡಗಳು ಕುಸಿದು ನಿಂತಿದ್ದು, ಈ ಬಗ್ಗೆ ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯ ತಳಭಾಗದಲ್ಲಿ ಕುಸಿದು ನಿಂತಿರುವ ಕಲ್ಲುಕಟ್ಟಡಗಳನ್ನು ಪುನರ್ನಿರ್ಮಾಣ ಮಾಡುತ್ತಿದ್ದ ದೃಶ್ಯ ಕಂಡುಬಂದಿದೆ.
20 ವರ್ಷಗಳ ಹಿಂದೆ ಎಲ್&ಟಿ ಸಂಸ್ಥೆ ಮೂಲಕ ನಿರ್ಮಾಣಗೊಂಡ ಸೇತುವೆ ಸುಮಾರು 120 ಮೀಟರ್ ಉದ್ದಕ್ಕೆ ನಿರ್ಮಾಣವಾಗಿದ್ದು, 6 ಸ್ಲ್ಯಾಬ್ಗಳನ್ನು ಅಳವಡಿಸಲಾಗಿದೆ. ಭಾರೀ ಪ್ರಮಾಣದ ಭಾರ ಹೊತ್ತ ವಾಹನಗಳು ಸೇತುವೆ ಮೇಲೆ ದಿನನಿತ್ಯ ತೆರಳುತ್ತಿದ್ದು ಯಾವುದೇ ರೀತಿಯ ಅಪಾಯ ಸಂಭವಿಸದಂತೆ ನದಿ ತಳಭಾಗದ ಕುಸಿದ ಪ್ರದೇಶ ಸ್ಥಳದ ಕಾಮಗಾರಿ ನಡೆಯುತ್ತಿದ್ದು ಮುಂದಿನ ಎರಡು ವಾರಗಳ ಅವಧಿಯಲ್ಲಿ ಕಾಮಗಾರಿ ಮುಗಿಯಲಿದೆ ಎನ್ನಲಾಗಿದೆ.