ಚಾತಕ ಪಕ್ಷಿಯಂತೆ ಕಾಯುತ್ತಿರುವ ನದಿ ತೀರದ ನಿವಾಸಿಗಳು

ಸಿದ್ದಾಪುರ, ಸೆ. 7: ನದಿ ತೀರದ ನಿವಾಸಿಗಳು ಪುನರ್ವಸತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಪುನರ್ವಸತಿಯನ್ನು ಜಿಲ್ಲಾಡಳಿತ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಸುರಿದ ಮಹಾ ಮಳೆಯಿಂದ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂರಾರು ಮನೆಗಳು ನೆಲಸಮಗೊಂಡಿತ್ತು. ಅಲ್ಲದೇ ನೂರಾರು ಮನೆಗಳು ಹಾನಿಗೊಳಗಾಗಿತ್ತು. ಈ ಹಿನ್ನೆಲೆ ನೆಲ್ಲಿಹುದಿಕೇರಿ ವ್ಯಾಪ್ತಿಯ ನದಿ ತೀರದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಮುಖ್ಯಮಂತ್ರಿಗಳನ್ನು ಹಾಗೂ ಸಚಿವರುಗಳನ್ನು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಸರ್ಕಾರದ ಆದೇಶದ ಮೇರೆಗೆ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಪುನರ್ವಸತಿ ಕಲ್ಪಿಸಿಕೊಡುವಂತೆ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಕಂದಾಯ ಇಲಾಖೆಯ ಮೂಲಕ ನೆಲ್ಲಿಹುದಿಕೇರಿ ಗ್ರಾಮದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅರೆಕಾಡು ಗ್ರಾಮದ ಅಭ್ಯತ್‍ಮಂಗಲ ಗ್ರಾಮಕ್ಕೆ ಸೇರಿದ ಕಾಫಿ ಬೆಳೆಗಾರರೊಬ್ಬರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಭೂಮಿಯನ್ನು ಹಾಗೂ ಖಾಸಗಿ ಸಂಸ್ಥೆಗೆ ಸೇರಿದ ಜಾಗದಲ್ಲಿದ್ದ ಒತ್ತುವರಿ ಜಾಗ ಸೇರಿ ಒಟ್ಟು 8 ಎಕರೆ ಜಾಗವನ್ನು ಜಿಲ್ಲಾಡಳಿತವು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ ಆ ಜಾಗದಲ್ಲಿ ಗಡಿಗಳನ್ನು ಗುರುತಿಸಿ ಜಿಲ್ಲಾ ಉಪವಿಭಾಗ ಅಧಿಕಾರಿ ನೇತೃತ್ವದಲ್ಲಿ ಪುನರ್ವಸತಿಗೆ ನಕಾಶೆಯನ್ನು ರೂಪಿಸಲಾಯಿತು. ನಂತರ ಆ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ಕೂಡ ತೆರವುಗೊಳಿಸಿ ಅಡಿಕೆ ಮರಗಳನ್ನು ಕೂಡ ಕತ್ತರಿಸಲಾಯಿತು. ಇದಾದ ಬಳಿಕ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 143 ಅರ್ಹ ಫಲಾನುಭವಿಗಳನ್ನು ನೆಲ್ಲಿಹುದಿಕೇರಿಯ ಗ್ರಾ.ಪಂ. ಸಭಾಂಗಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಲಾಟರಿ ಮುಖಾಂತರ ಆಯ್ಕೆಗೊಳಿಸಲಾಯಿತು. ಆದರೆ ವರ್ಷಗಳು ಕಳೆದರು ಕೂಡ ಒತ್ತುವರಿ ಜಾಗದಲ್ಲಿ ಪುನರ್ವಸತಿಯ ಕಾಮಗಾರಿಗಳಿಗೆ ಈವರೆಗೂ ಚಾಲನೆ ದೊರೆತ್ತಿಲ್ಲ. ಅಲ್ಲದೇ ಈ ಹಿಂದೆ ಆಯ್ಕೆಗೊಳಿಸಿದ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಆದರೂ ಕೂಡ ಆ ಜಾಗದಲ್ಲಿ ಶೆಡ್ ನಿರ್ಮಾಣ ಮಾಡಲು ಕೂಡ ಅವಕಾಶ ನೀಡಿರುವುದಿಲ್ಲ ಎಂದು ಸಂತ್ರಸ್ತರು ಅಸಮಾಧಾನ ತೋರಿಕೊಂಡಿದ್ದಾರೆ. ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡ ಒತ್ತುವರಿ ಜಾಗದಲ್ಲಿ ಇರುವ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಿಯನ್ನು ತಯಾರಿಸಿ ಹಲವಾರು ತಿಂಗಳುಗಳು ಕಳೆದಿದ್ದರೂ ಕೂಡ ಈವರೆಗೂ ಮರ ಕಡಿದಿರುವುದಿಲ್ಲ. ಅಲ್ಲದೇ ಜಾಗವನ್ನು ಕೂಡ ನೆಲಸಮ ಮಾಡಿಲ್ಲ.

ಕಳೆದ ಒಂದೂವರೆ ತಿಂಗಳ ಹಿಂದೆ ಜಿಲ್ಲಾಧಿಕಾರಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಅರೆಕಾಡುವಿನಲ್ಲಿರುವ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮುಂದಿನ ಎರಡು ವಾರದೊಳಗೆ ಮರಗಳನ್ನು ಕಡಿದು ಪುನರ್ವಸತಿಗೆ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಹಾಗೂ ಇತರ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಆದರೆ ಒಂದೂವರೆ ತಿಂಗಳು ಕಳೆದರೂ ಸಹಾ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಇನ್ನೂ ಕೂಡ ಕಾಮಗಾರಿಗಳು ಆರಂಭವಾಗಿರುವುದಿಲ್ಲ. ಈ ಬಾರಿಯು ಕೂಡ ನದಿ ತೀರದ ನಿವಾಸಿಗಳು ಪ್ರವಾಹಕ್ಕೆ ಸಿಲುಕಿ ಸಮಸ್ಯೆಗೆ ಸಿಲುಕಿಕೊಂಡಿದ್ದರು. ಆದರೆ ಸಂಕಷ್ಟಕ್ಕೆ ಸಿಲುಕಿಕೊಂಡ ಸಂತ್ರಸ್ತರು ಮುನ್ನೆಚ್ಚರಿಕೆಯಾಗಿ ತಮ್ಮ ಸಂಬಂಧಿಕರ ಹಾಗೂ ಬಾಡಿಗೆ ಮನೆಗಳಿಗೆ ತೆರಳಿ ಆಶ್ರಯ ಪಡೆದುಕೊಂಡರು. ಆದರೆ ಪುನರ್ವಸತಿ ಕಲ್ಪಿಸಿಕೊಡಬೇಕಾದ ಅಧಿಕಾರಿಗಳ ವಿಳಂಬ ನೀತಿಯಿಂದ ಸಂತ್ರಸ್ತರು ಮತ್ತಷ್ಟು ಸಮಸ್ಯೆಗಳಿಗೆ ಸಿಲುಕಿಕೊಂಡು ನೆಮ್ಮದಿ ಇಲ್ಲದಂತಾಗಿದೆ. ಇದಲ್ಲದೇ ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳಿಗೆ ಈವರೆಗೂ ಕೂಡ ಪುನರ್ವಸತಿ ಲಭಿಸಿರುವುದಿಲ್ಲ. ಈ ಹಿಂದೆ ಜಿಲ್ಲಾಡಳಿತ ವೀರಾಜಪೇಟೆ ತಾಲೂಕಿನ ಬಿ. ಶೆಟ್ಟಿಗೇರಿ ಗ್ರಾಮದಲ್ಲಿ ನಿವೇಶನವನ್ನು ಗುರುತಿಸಿತ್ತು. ಆದರೆ ಸಂತ್ರಸ್ತರು ಅಷ್ಟು ದೂರದ ಜಾಗಕ್ಕೆ ತೆರಳುವುದಿಲ್ಲ ಎಂದು ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಾಧಿ ಕಾರಿಗೆ ತಿಳಿಸಿದರು. ಒಟ್ಟಿನಲ್ಲಿ ಒಂದು ವರ್ಷಗಳಿಂದ ಪುನರ್ವಸತಿಗಾಗಿ ಕಾಯುತ್ತಿರುವ ಸಂತ್ರಸ್ತರು ಮುಂದೇನು ಮಾಡುವುದೆಂದು ಚಿಂತಾಕ್ರಾಂತರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತವು ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

- ವಾಸು