ಮಡಿಕೇರಿ, ಸೆ. 7: ದಕ್ಷಿಣ ಕೊಡಗಿನ ಪ್ರತಿಷ್ಠಿತ ಮುಸ್ಲಿಂ ಸಹಕಾರ ಬ್ಯಾಂಕ್ ಆರ್ಥಿಕವಾಗಿ ದಿವಾಳಿಗೊಂಡು ಸಾವಿರಾರು ಗ್ರಾಹಕರಿಗೆ ವಂಚನೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಬ್ಯಾಂಕ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಇಂದು ಸಾವಿರಾರು ಗ್ರಾಹಕರು ತಮ್ಮ ಹೂಡಿಕೆ ಹಣವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಆಡಳಿತ ಮಂಡಳಿಯು ಕಳೆದ ಒಂದು ವರ್ಷದಿಂದ ಕೈ ಚೆಲ್ಲಿ ಕುಳಿತಿದ್ದು, ಗ್ರಾಹಕರು ಮಾತ್ರ ನಿತ್ಯ ಬ್ಯಾಂಕ್ ಬಾಗಿಲಿಗೆ ಅಲೆಯುತ್ತಾ ಸುಸ್ತು ಹೊಡೆದಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.
‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ, ವೀರಾಜಪೇಟೆಯ ಗಡಿಯಾರ ಕಂಬದ ಪಕ್ಕದಲ್ಲೇ ಇರುವಂತಹ ನಂ. 283ನೇ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್ ಕಳೆದ ಆರು ದಶಕಗಳಿಗೂ ಅಧಿಕ ಸಮಯದಿಂದ ಕಾರ್ಯ ನಿರ್ವಹಿಸುತ್ತಾ, ಜನಾಂಗದ ಗ್ರಾಹಕರು ಮಾತ್ರವಲ್ಲದೆ ಇತರ ಎಲ್ಲಾ ವರ್ಗದ ಠೇವಣಿದಾರರನ್ನು ಒಳಗೊಂಡು ಉಳಿತಾಯ ಖಾತೆಗಳನ್ನು ನಿರ್ವಹಿಸುತ್ತಾ ಬಂದಿದೆ.
ಒಂದೊಮ್ಮೆ ಗ್ರಾಹಕರು ಮತ್ತು ಠೇವಣಿದಾರರಿಗೆ ಸಾಕಷ್ಟು ಯೋಜನೆಗಳನ್ನು ಆಕರ್ಷಣೀಯ ವಾಗಿ ಜಾರಿಗೊಳಿಸಿ, ಬ್ಯಾಂಕ್‍ನೆಡೆಗೆ ನಂಬಿಕೆ ಬರುವಂತೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಿರುವದು ಕಂಡುಬರುತ್ತದೆ. ಹೀಗಾಗಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಕಷ್ಟು ಲಾಭದೊಂದಿಗೆ ಗ್ರಾಹಕರಿಗೆ ಸಾಲ ಸೌಲಭ್ಯ ನೀಡುತ್ತಾ ಬಂದಿದೆ.
ಮಹಿಳಾ ಶಾಖೆ : ಅಂತೆಯೇ ವಿಶೇಷವಾಗಿ ಮಹಿಳಾ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡು ಪ್ರತ್ಯೇಕವಾಗಿ ಮುಸ್ಲಿಂ ಮಹಿಳಾ ಸಹಕಾರ ಬ್ಯಾಂಕ್ ಶಾಖೆ ಕೂಡ ಆರಂಭಿಸಿ ನಾಲ್ಕಾರು ವರ್ಷ ಸ್ವತಂತ್ರ ಹೊಣೆಗಾರಿಕೆ ನಡೆಸಿರುವದು ಕಂಡು ಬಂದಿದೆ. ಈ ನಡುವೆ ಉಭಯ ಆಡಳಿತ ಮಂಡಳಿಗಳಲ್ಲಿ ಹೊಣೆಗಾರಿಕೆ ಹೊತ್ತವರ ಒಳಬೇಗುಧಿಯ ಪರಿಣಾಮ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ರಾತೋ ರಾತ್ರಿ ಮನೆ ಖಾಲಿ : ಮಹಿಳಾ ಬ್ಯಾಂಕ್ ಶಾಖೆಯ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕಿಯ ಪಾತ್ರ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು, ಬ್ಯಾಂಕ್‍ನಲ್ಲಿ ತನಗೆ ಸಿಕ್ಕಿದೆಲ್ಲಾ ದೋಚಿಕೊಂಡು ರಾತೋರಾತ್ರಿ ವೀರಾಜಪೇಟೆಯ ಮನೆ ಖಾಲಿ ಮಾಡಿರುವ ಸಂಗತಿಯೂ ಬೆಳಕಿಗೆ ಬಂದಿದೆ.
ಈ ಮಹಿಳೆ ಇದೀಗ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು, ಆಕೆಯನ್ನು ನಂಬಿ ಗ್ರಾಹಕರಿಂದ ನಿತ್ಯ ಪಿಗ್ಮಿ ಸಂಗ್ರಹಿಸಿ ಹಣ ಹೂಡಿಕೆ ಮಾಡಿರುವ ಅಮಾಯಕರು ಇಂದು ಜನತೆಗೆ ಮುಖ ತೋರಿಸಲಾಗದೆ ಹೈರಾಣಾಗಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಪ್ರಮುಖರಲ್ಲಿ ಗ್ರಾಹಕರು ವಿಚಾರಿಸಿದರೆ, ಪಿಗ್ಮಿ ಕಟ್ಟಿದವರನ್ನು ಕೇಳುವಂತೆ ಬೇಜವಾಬ್ದಾರಿಯ ಉತ್ತರ ನೀಡುತ್ತಿರುವ ಆರೋಪವಿದೆ.
ಮುಖ್ಯ ಶಾಖೆಯೇ ದಿವಾಳಿ : ಈ ಬೆಳವಣಿಗೆ ನಡುವೆ ಇದೀಗ ಸುಮಾರು 4 ಸಾವಿರಕ್ಕೂ ಅಧಿಕ ಗ್ರಾಹಕರೊಂದಿಗೆ ವಾರ್ಷಿಕ ರೂ. 2 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದ ಮುಖ್ಯ ಶಾಖೆಯೇ ದಿವಾಳಿಯಾಗಿರುವ ಮಾತು ಕೇಳಿ ಬರತೊಡಗಿದೆ. ಅನೇಕ ಠೇವಣಿದಾರರು ಮತ್ತು ಉಳಿತಾಯ ಖಾತೆ ಗ್ರಾಹಕರು ಆಡಳಿತ ಪ್ರಮುಖರನ್ನು ವಿಚಾರಿಸಿದರೆ, ಸಾಕಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಾಗಿದೆ, ಸಾಲ ಮರು ವಸೂಲಿ ಬಳಿಕ ಗ್ರಾಹಕರಿಗೆ ಹಣ ಹಿಂತಿರುಗಿಸುವದಾಗಿ ಸಬೂಬು ಹೇಳುತ್ತಾ ಆರು ತಿಂಗಳಿನಿಂದ ನುಣುಚಿ ಕೊಳ್ಳುತ್ತಿದ್ದಾರಂತೆ.
ಹೂಡಿಗೆದಾರರ ಅಸಮಾಧಾನ : ಈ ಪರಿಸ್ಥಿತಿಯಲ್ಲಿ ಕಳೆದ ಅರ್ಧ ಶತಮಾನದಿಂದ ಬ್ಯಾಂಕ್‍ನೊಂದಿಗೆ ನಿಕಟ ಸಂಬಂಧ ಹೊಂದಿರುವ ಅನೇಕ ಹಿರಿಯ ಗ್ರಾಹಕರು ಮತ್ತು ಮುಸ್ಲಿಂ ವರ್ತಕರು ಇಂದು ಅಡಕತ್ತರಿಯಲ್ಲಿ ಸಿಲುಕಿಕೊಂಡು ತಮ್ಮ ಹಣಕ್ಕಾಗಿ ಸಂಬಂಧಪಟ್ಟ ವರನ್ನು ಶಪಿಸುತ್ತಿದ್ದಾರೆ. ಅಲ್ಲದೆ ಅಸಹಾಯ ಪರಿಸ್ಥಿತಿಯಲ್ಲಿ ಹೇಗಾದರೂ ಹೂಡಿಕೆ ಹಣ ಹಿಂಪಡೆಯುವ ತವಕ ಹೊಂದಿದ್ದಾರೆ.
ಈ ಬ್ಯಾಂಕ್ ವ್ಯವಸ್ಥೆಯನ್ನು ನಂಬಿ ವೀರಾಜಪೇಟೆ ಪಟ್ಟಣ ದೊಳಗೆ ನಿತ್ಯ ವರ್ತಕರಿಂದ ಹಣ ಸಂಗ್ರಹಿಸಿ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಶ್ರಮಿಸಿರುವ ಅದೆಷ್ಟೋ ಪಿಗ್ಮಿದಾರರು, ಇಂದು ಕಾಯಕವಿಲ್ಲದೆ ತಮ್ಮ ಮುಖ ನೋಡಿ ಹಣ ನೀಡಿದವರಿಗೆ, ಇಂದು ಮುಖ ತೋರಿಸಲಾಗದೆ ತಲೆಮರೆಸಿ ಕೊಂಡು ಓಡಾಡುವಂತಾಗಿದೆ ಎಂದು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ವೀರಾಜಪೇಟೆಯ ಈ ಪ್ರತಿಷ್ಠಿತ ಬ್ಯಾಂಕ್ ಇಂದು ಜವಾಬ್ದಾರಿಯುತರ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದ್ದು, ಗ್ರಾಹಕರು ಮತ್ತು ಹೂಡಿಕೆದಾರರು ಸಂದಿಗ್ಧ ಸ್ಥಿತಿಯಲ್ಲಿ ಭವಿಷ್ಯದ ಚಿಂತನೆಯಲ್ಲಿ ಕೂಡಿಟ್ಟ ಹಣ ಕೈ ತಪ್ಪುವ ಭಯದಲ್ಲಿ ಮಾನ ಮರ್ಯಾದೆಗೆ ಅಂಜಿ ಮೌನಕ್ಕೆ ಶರಣಾಗಿದ್ದಾರೆ.