ಸೋಮವಾರಪೇಟೆ, ಸೆ. 6: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನಡ್ಲಕೊಪ್ಪ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗೆ ಸ್ಥಳೀಯ ವ್ಯಕ್ತಿಯೋರ್ವರು ತಡೆಯೊಡ್ಡುತ್ತಿದ್ದು, ಇದರಿಂದಾಗಿ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ನಡ್ಲಕೊಪ್ಪ ಗ್ರಾಮದ ಪ್ರಮುಖರಾದ ಎಂ.ಕೆ. ರುದ್ರಪ್ಪ (ಶೇಖರ್) ಅವರು, ಅನಾದಿಕಾಲ ದಿಂದಲೂ ಗ್ರಾಮಸ್ಥರು ಬಳಕೆ ಮಾಡುತ್ತಿದ್ದ ರಸ್ತೆಗೆ ಇದೀಗ ವ್ಯಕ್ತಿಯೋರ್ವರು ತಡೆಯೊಡ್ಡಿ, ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದಾರೆ. ಇದರೊಂದಿಗೆ 94 ಸಿ. ಅಡಿಯಲ್ಲಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ರಸ್ತೆಯನ್ನು ಸುಮಾರು 30 ಮನೆಗಳ ಮಂದಿ ಈಗಲೂ ಬಳಕೆ ಮಾಡುತ್ತಿದ್ದು, ಕಂದಾಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿ.ಪಂ.ನಿಂದ ಇದೇ ರಸ್ತೆಗೆ ಅನುದಾನ ಬಿಡುಗಡೆಯಾಗಿ, ಬೋಡ್ರಸ್ ಹಾಕಲಾಗಿದೆ. ಕಳೆದ ಹಲವು ದಶಕಗಳಿಂದಲೂ ಈ ರಸ್ತೆ ಸಾರ್ವಜನಿಕರ ಬಳಕೆಯಲ್ಲಿದ್ದು, ಮನೆ ಹಾಗೂ ಗದ್ದೆ, ತೋಟಗಳಿಗೆ ತೆರಳಲು ಇದೇ ಪ್ರಮುಖ ರಸ್ತೆಯಾಗಿದೆ.

ಈ ಹಿಂದೆಯೂ ರಸ್ತೆಗೆ ತಡೆಯೊಡ್ಡಿದ ಸಂದರ್ಭ ಅಹಿತಕರ ಘಟನೆ ನಡೆದು, ನಂತರ ಇತ್ಯರ್ಥಗೊಂಡಿದೆ. ಇದೀಗ ಮತ್ತೆ ರಸ್ತೆಗೆ ತಡೆಯೊಡ್ಡಿರುವದರಿಂದ ನಮಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ರುದ್ರಪ್ಪ ಅವರು ತಿಳಿಸಿದರು.

ರಸ್ತೆಗೆ ತಡೆಯೊಡ್ಡಿದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದರೆ, ಕಂದಾಯ ಇಲಾಖೆಗೆ ಹೋಗಿ ಎಂದು ತಿಳಿಸಿದ್ದಾರೆ. ತಾಲೂಕು ತಹಸೀಲ್ದಾರ್ ಕಚೇರಿಗೆ ದೂರು ನೀಡಿದರೂ ಈವರೆಗೆ ಯಾವದೇ ಸ್ಪಂದನೆ ನೀಡಿಲ್ಲ. ಈ ಮಧ್ಯೆ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ 94 ಸಿ. ಅಡಿಯಲ್ಲಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ತಕ್ಷಣ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರಸ್ತೆಯನ್ನು ಬಿಡಿಸಿ ಕೊಡಬೇಕೆಂದು ಒತ್ತಾಯಿಸಿದರು.

ರಸ್ತೆಗೆ ತಡೆಯೊಡ್ಡಿರುವ ವ್ಯಕ್ತಿಯಿಂದಾಗಿ ಸ್ಥಳೀಯರಿಗೆ ಕಿರುಕುಳ ಉಂಟಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ತಿರುಗುವ ಸಂದರ್ಭ ಬೆದರಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆ ತಕ್ಷಣ ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆದರೆ ಇಲಾಖೆಯೇ ನೇರಹೊಣೆ ಹೊರಬೇಕಾಗುತ್ತದೆ. ಮುಂದಿನ 10 ದಿನಗಳ ಒಳಗೆ ಈ ಬಗ್ಗೆ ಗಮನಹರಿಸದಿದ್ದಲ್ಲಿ, ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸ್ಥಳೀಯರಾದ ಕಾರ್ಯಪ್ಪ, ಹೇಮಾ, ಆನಂದ್ ಅವರುಗಳು ಉಪಸ್ಥಿತರಿದ್ದರು.