ಕೂಡಿಗೆ, ಸೆ. 6: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿನ ಪ್ರಮುಖವಾದ ಆನೆಕೆರೆಯ ಒತ್ತುವರಿ ಜಾಗವನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆಸಿ ತೆರವುಗೊಳಿಸಲಾಯಿತು.

ಕಳೆದ ನಾಲ್ಕು ವರ್ಷಗಳಿಂದ. ಸತತವಾಗಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಗ್ರಾಮಸಭೆಗಳಲ್ಲಿ ಪ್ರಮುಖ ವಿಷಯವಾಗಿ ಕೆರೆ ಒತ್ತುವರಿಯ ಬಗ್ಗೆ ದಿನ ಪೂರ್ತಿ ಚರ್ಚೆಯಾಗುತ್ತಿತ್ತು. ಅದರ ಅನ್ವಯ ಗ್ರಾಮ ಪಂಚಾಯತಿ ಸದಸ್ಯರು ತಾಲೂಕು ತಹಶೀಲ್ದಾರ್‍ರವರಿಗೆ ಒತ್ತುವರಿ ತೆರವುಗೊಳಿಸಲು ಮನವಿ ಸಲ್ಲಿಸಿದ್ದರು. ಸರಕಾರದ ನಿಯಮಾನುಸಾರ ಇಂದು ಕಂದಾಯ ಇಲಾಖೆಯ ವತಿಯಿಂದ ಆನೆ ಕೆರೆಯ 11 ಎಕರೆ ಪ್ರದೇಶವನ್ನು ಗುರುತಿಸಿ ಒತ್ತುವರಿ ಆಗಿದ್ದ ಜಾಗವನ್ನು ಜೆಸಿಬಿ ಯಂತ್ರ ಸಹಾಯದಿಂದ ತೆರೆವುಗೊಳಿಸಲಾಯಿತು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ವರದರಾಜ್, ಅಭಿವೃದ್ಧಿ ಅಧಿಕಾರಿ ಆಯಿಷಾ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ತಾಲೂಕು ಸರ್ವೆ ಅಧಿಕಾರಿ ಕಿಶೋರ್ ಪಾಟೀಲ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.