ವೀರಾಜಪೇಟೆ, ಸೆ. 6: ಮನುಕುಲಕ್ಕೆ ಅಕ್ಷರ ಜ್ಞಾನವನ್ನು ನೀಡುವ ಮೂಲಕ ಸಮಾಜಕ್ಕೆ ಶಿಕ್ಷಕರು ಮಾದರಿಯಾಗಿದ್ದಾರೆ. ಶಿಕ್ಷಕರಿಲ್ಲದಿದ್ದರೆ ಜಗತ್ತಿಗೆ ಇಂದು ಯಾವ ಸ್ಥಿತಿ ಬರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಹೇಳಿದರು.

ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಜಿ ರಾಷ್ಟ್ರಪತಿ ಡಾ: ಸರ್ವಪಲ್ಲಿ ರಾಧಾಕೃಷ್ಣ ಅವರ ಕನಸು ನೆನಸಾಗಬೇಕಾದರೆ ಅವರು ಮಾಡಿರುವ ತ್ಯಾಗ ಮತ್ತು ಆದರ್ಶ ಗುಣಗಳನ್ನು ಎಲ್ಲರೂ ಪಾಲಿಸಿಕೊಂಡು ಬರಬೇಕು ಎಂದು ಹೇಳಿದರು.

ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೆ.ಫಾ. ಮದಲೈಮುತ್ತು ಮಾತನಾಡಿ ಶಿಕ್ಷಕರು ಮಕ್ಕಳಿಗೆ ಮಾತೃ ಸ್ಥಾನದಲ್ಲಿರುವವರು. ಎಲ್ಲವನ್ನು ತ್ಯಾಗ ಮಾಡಿ ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಅವರುಗಳು ಕಾರಣಕರ್ತರಾಗುತ್ತಾರೆ. ಇವತ್ತು ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಾರೆ, ಅವರ ಸೇವೆ ಅಮೋಘವಾದುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೀಳಗಿ ಮಾತನಾಡಿ ಶಿಕ್ಷಕರಿಗೆ ಯಾರೂ ಪರ್ಯಾಯ ಇಲ್ಲ. ಶಿಕ್ಷಕರ ಗೈರು ಹಾಜರಿಯನ್ನು ಊಹಿಸಲು ಸಾಧ್ಯವಿಲ್ಲ. ಕೊರೊನಾ ಇಂದು ಎಲ್ಲವನ್ನು ಕಿತ್ತುಕೊಂಡಿರಬಹುದು. ಆದರೆ ಶಿಕ್ಷಕರ ಪ್ರೀತಿ ವಿಶ್ವಾಸವನ್ನು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮೀತಾ ಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಫಸೀಹ: ತಬಸಮ್ ಉಪಸ್ಥಿತರಿದ್ದರು.

ಕುಶಾಲನಗರ: ಕುಶಾಲನಗರದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮ ದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ದಿನದ ಮಹತ್ವದ ಕುರಿತು ಶಾಲಾ ಮುಖ್ಯಶಿಕ್ಷಕಿ ಕೆ.ಆರ್. ರಾಣಿ ಮಾತನಾಡಿದರು. ಶಿಕ್ಷಕಿ ಭವ್ಯ ದಿನದ ಮಹತ್ವ ತಿಳಿಸಿದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್. ಶಿಕ್ಷಕಿಯರಾದ ಎಂ.ಸಿ.ಭಾರತಿ, ಲತಾ, ಸರಳರಾಣಿ, ಭವ್ಯ, ಕುಂಙಮ್ಮ, ನೀಲಮ್ಮ, ಎಂ.ಎಂ. ಭಾರತಿ, ಭಾಗ್ಯಮ್ಮ, ಸಹಾಯಕಿ ಪ್ರೇಮ ಇದ್ದರು.

ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ವತಿಯಿಂದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮ ನಡೆಯಿತು. ಬ್ಯಾಂಕ್ ವ್ಯವಸ್ಥಾಪಕ ವರದರಾಯ ಮಲ್ಯ ದಿನದ ಮಹತ್ವದ ಬಗ್ಗೆ ಮಾತನಾಡಿ, ಶಿಕ್ಷಕರಿಗೆ ಸಿಹಿ ಹಂಚಿದರು.

ಬ್ಯಾಂಕ್ ಉಪ ವ್ಯವಸ್ಥಾಪಕ ಪ್ರದೀಪ್‍ಕುಮಾರ್, ಶಾಲೆಯ ಶಿಕ್ಷಕ, ಶಿಕ್ಷಕೇತರ ವೃಂದದವರು ಇದ್ದರು.

ಶಿಕ್ಷಕರಿಗೆ ಸನ್ಮಾನ

ಮಡಿಕೇರಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶನಿವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಕೋವಿಡ್-19 ಸಂದರ್ಭದಲ್ಲಿ ಸೇವೆ ಸಲ್ಲಿಸಿದ ನಗರದ ಶ್ರೀ ರಾಜರಾಜೇಶ್ವರಿ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ ಮಾಸ್ಟರ್ ಎಂ.ಎನ್. ತಿಮ್ಮಯ್ಯ ಮತ್ತು ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ರತೀಶ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ದೈಹಿಕ ಅಧೀಕ್ಷಕರಾದ ವೆಂಕಟೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ವಸಂತಿ, ಜಿಲ್ಲಾ ಸಂಘಟಕಿ ದಮಯಂತಿ ಇತರರು ಇದ್ದರು.

ಹೆಬ್ಬಾಲೆ: ಸರ್ವಪಲ್ಲಿ ಡಾ. ರಾಧಾಕೃಷ್ಣನರವರ ಜನುಮ ದಿನವನ್ನು ಇಂದು ನಾವು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಕ್ಲಷ್ಟರ್ ಸಂಪನ್ಮೂಲ ವ್ಯಕ್ತಿ ಗಿರೀಶ್ ಹೇಳಿದರು.

ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಹೆಚ್. ಎಂ. ವೆಂಕಟೇಶ ವಹಿಸಿದ್ದು, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ ಶಾಲಾ ಹಿರಿಯ ಶಿಕ್ಷಕಿ ಜಾನಕಿ ಮಾತನಾಡಿದರು. ಸಮಾರಂಭದಲ್ಲಿ ಶಿಕ್ಷಕಿಯರಾದ ಬಬಿತಾ, ಪುಷ್ಪಾವತಿ ಮತ್ತು ಶಾಲಾ ಆಯಾ ಜಮುನಾ ಮತ್ತು ಶಾಲಾ ಮಕ್ಕಳು ಹಾಜರಿದ್ದರು. ಶಿಕ್ಷಕ ರಮೇಶ್ ವಂದಿಸಿದರು.

ಜ್ಞಾನವಿಕಾಸ ಶಾಲೆ

ಸೋಮವಾರಪೇಟೆ: ಇಲ್ಲಿನ ಜ್ಞಾನವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು 25 ವರ್ಷಗಳ ಕಾಲ ಜ್ಞಾನವಿಕಾಸ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸುಮತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಂಟಿಕೊಪ್ಪ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ಎಸ್.ರಾಧಾಕೃಷ್ಣನ್ ಅವರ ನೆನಪಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪಿಲಿಫ್ ವಾಸ್, ಡಾ. ಸುಕನ್ಯಾ, ಕವಿತಾ, ಪದ್ಮಾವತಿ, ಕವಿತಾ ಭಕ್ತ್, ಜಯಶ್ರೀ, ಮಂಜುಳಾ, ಹಾಗೂ ಕಚೇರಿ ಸಿಬ್ಬಂದಿ ಕನಕ ಹಾಜರಿದ್ದರು.

*ಗೋಣಿಕೊಪ್ಪಲು: ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಮಾಜಿ ರಾಷ್ಟ್ರಪತಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಪುಷ್ಪಾರ್ಚನೆ ಮಾಡುವ ಮೂಲಕ ದಿನಾಚರಣೆಯ ಶುಭಾಶಯ ಕೋರಿದರು. ಉಪನ್ಯಾಸಕರಾದ ಎನ್.ಕೆ. ಪ್ರಭು, ಬಿ.ಯು.ಪ್ರತಿಭಾ ಉತ್ತಪ್ಪ, ಬೆನಡಿಕ್ಟ್ ಫರ್ನಾಂಡೀಸ್, ಸಿಬ್ಬಂದಿ ವರ್ಗದವರಾದ ಎಚ್.ಬಿ. ಮಮತಾ, ಜಯಪ್ಪ, ಎಂ.ಪಿ. ಸುರೇಶ್, ಹಿರಿಯ ವಿದ್ಯಾರ್ಥಿಗಳಾದ ಸಂಜು, ಸತೀಶ್ ಕುಮಾರ್ ಹಾಜರಿದ್ದರು.