ಮಡಿಕೇರಿ, ಸೆ. 6: ಪ್ರಸ್ತುತ ಇಡೀ ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿರುವ ಮಾದಕ ವಸ್ತು ಜಾಲ ಹಾಗೂ ಈ ವಿವಾದ ಕನ್ನಡ ಚಲನ ಚಿತ್ರರಂಗ (ಸ್ಯಾಂಡಲ್ವುಡ್)ಕ್ಕೆ ಥಳಕು ಹಾಕಿಕೊಂಡಿರುವುದು ತೀರಾ ವಿಷಾದಕರವಾಗಿದೆ ಎಂದು ಕೊಡಗಿನ ಮೂಲದವರಾದ ಹಿರಿಯ ನಟ ಜೈಜಗದೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ಯೊಂದಿಗೆ ಈಗಿನ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯಿಸಿದ ನಟ ಜೈಜಗದೀಶ್ ಅವರು, ಕನ್ನಡ ಚಿತ್ರೋದ್ಯಮಕ್ಕೆ ತನ್ನದೇ ಆದ ಹೆಸರಿದ್ದು, ಈತನಕ ಇಂತಹ ವಿವಾದದ ಸುಳಿಯಲ್ಲಿ ಯಾರೂ ಸಿಕ್ಕಿರಲಿಲ್ಲ. ಎಲ್ಲರೂ ಚಿತ್ರರಂಗದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ತಾವು ಕೂಡ ಚಿತ್ರರಂಗದಲ್ಲಿ ಸುಮಾರು 46 ವರ್ಷ ದುಡಿದಿದ್ದು, ಈಗಿನ ಬೆಳವಣಿಗೆಯಿಂದ ಬೇಸರವಾಗಿದೆ ಎಂದರು.
ಈಗಿನ ಯುವ ಪೀಳಿಗೆಯವರ ಬಗ್ಗೆ ಅರ್ಥೈಸಿಕೊಳ್ಳುವುದು ಕ್ಲಿಷ್ಟಕರವಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು, ಮಾದಕ ವಸ್ತು ವಿಚಾರ ಮಾರಕವಾಗಿದೆ. ಈ ಹಿಂದಿನ ಹಿರಿಯ ನಟರುಗಳು ಯಾರೂ ಇಂತಹ ವಿವಾದಕ್ಕೆ ಗುರಿಯಾಗಿರಲಿಲ್ಲ. ಆದರೆ ಈಗಿನ ಕೆಲವು ಯುವ ನಟರ ಹೆಸರು ಕೇಳಿ ಬರುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದರು.
ಇಲ್ಲಿ ಮತ್ತೊಂದು ಗಮನಿಸುತ್ತಿರುವ ವಿಚಾರವೆಂದರೆ ಕೇವಲ ಸ್ಯಾಂಡಲ್ವುಡ್ನವರ ವಿಚಾರ ಮಾತ್ರ ಮಾದ್ಯಮಗಳಲ್ಲಿ ಭಾರೀ ಪ್ರಚಾರ ಕಾಣುತ್ತಿದೆ. ಇದರಲ್ಲಿ ಕೇವಲ ಚಿತ್ರರಂಗದವರಲ್ಲದೆ ಇನ್ನಿತರರೂ ಇರಬಹುದಾಗಿದ್ದರೂ ತಾರೆಯರ ಹೆಸರು ಮಾತ್ರ ಹೆಚ್ಚು ಬಿಂಬಿತವಾಗಿದೆ. ಸೂಕ್ತ ತನಿಖೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಎಲ್ಲಾ ಅಂಶಗಳು ಹೊರ ಬೀಳುವ ತನಕ ಯಾರೂ ಅಪರಾಧಿಗಳಲ್ಲ ಎಂದು ಹೇಳಿದ ಅವರು, ಕೊಡಗಿನಲ್ಲೂ ಇತ್ತೀಚೆಗೆ ಡ್ರಗ್ಸ್ ವಶವಾದ ಪ್ರಕರಣ ಆತಂಕಕಾರಿ ಎಂದರು.
ಆದರೆ ಕೊಡಗಿನ ಜನತೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ. ಮಾನ-ಮರ್ಯಾದೆಗೆ ಬೆಲೆ ಕೊಡುತ್ತಾರೆ. ಆದರೆ ಇಲ್ಲಿ ಹೊರಗಿನ ವ್ಯಕ್ತಿಗಳು ಈ ದಂಧೆಯ ಮೂಲಕ ಕೊಡಗಿನ ಹೆಸರನ್ನು ಕೆಡಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ ಜನತೆ ಎಚ್ಚರದಿಂದಿರಬೇಕೆಂದು ಸಲಹೆಯಿತ್ತರು.
ಕೊಡಗಿನ ನಟಿಯರ ಕುರಿತಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕೀಳು ಮಟ್ಟದ ಆಪಾದನೆ ಬಗ್ಗೆ ತಮಗೆ ಸೂಕ್ತ ಮಾಹಿತಿ ಇಲ್ಲ ಎಂದು ಜೈಜಗದೀಶ್ ಪ್ರತಿಕ್ರಿಯಿಸಿದರು.