ಕೂಡಿಗೆ, ಸೆ. 6: ಕೂಡಿಗೆಯ ಕ್ರೀಡಾ ಪ್ರೌಢಶಾಲೆಗೆ ಕ್ರೀಡಾ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ರಾಜ್ಯ ಮಟ್ಟದಲ್ಲಿ ನಡೆದು ರಾಜ್ಯದಲ್ಲಿರುವ ವಿವಿಧ ಕ್ರೀಡಾ ಶಾಲೆ ವಿಭಾಗಕ್ಕೆ ಆಯ್ಕೆ ಮಾಡಲಾಗಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಯ ಆಯ್ಕೆಗೊಂಡ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಅರಂಭಗೊಂಡಿದೆ.

ಕೂಡಿಗೆ ಕ್ರೀಡಾ ಪ್ರೌಢಶಾಲೆಗೆ ರಾಜ್ಯಮಟ್ಟದ ಹಾಕಿ, ಅಥ್ಲೆಟಿಕ್ಸ್, ಜಿಮ್ನಾಸ್ಟಿಕ್ ವಿಭಾಗಕ್ಕೆ ಆಯ್ಕೆ ಮಾಡಲಾಗಿದ್ದ ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಶಾಲೆಗೆ ಸೇರ್ಪಡೆ ಮಾಡಲಾಗುತ್ತಿದೆ. ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆಯುವ ರಾಜ್ಯದ ವಿವಿಧ ಕಡೆಗಳಲ್ಲಿ ಇರುವ ಶಾಲೆಗೆ 638 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಆಗಿದ್ದು, ಇದರಲ್ಲಿ ಕೂಡಿಗೆಯ ಕ್ರೀಡಾ ಶಾಲೆಗೆ 64 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ. 8ನೇ ತರಗತಿ ಹಾಕಿ ವಿಭಾಗ ಸೇರಿದಂತೆ ಮೂರು ಕ್ರೀಡಾ ವಿಭಾಗಕ್ಕೆ ಬಾಲಕ-ಬಾಲಕಿಯರು ಶಾಲೆಗೆ ತಮ್ಮ ಮೂಲ ದಾಖಲೆಗಳೊಂದಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ತಿಳಿಸಿದ್ದಾರೆ.